ಇತ್ತೀಚೆಗೆ ತಿರುಪತಿ ವೆಂಕಟರಮಣ ದೇವಾಲಯ ಆಡಳಿತ ಮಂಡಳಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 100 ಕೋಟಿ ರು. ದೇಣಿಗೆ ನೀಡಲು ನಿರ್ಧರಿಸಿದೆ ಎನ್ನುವ ಸುಳ್ಳುಸುದ್ದಿ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಇದೀಗ ರಿಲಯನ್ಸ್‌ ಜಿಯೋ ಟೆಲಿಕಾಂ ಸಂಸ್ಥೆಯ ಮುಖ್ಯಸ್ಥ ಮುಕೇಶ್‌ ಅಂಬಾನಿ ರಾಮಮಂದಿರ ನಿರ್ಮಾಣಕ್ಕೆ 500 ಕೋಟಿ ರು. ದೇಣಿಗೆ ನೀಡಲು ಇಚ್ಛಿಸಿದ್ದಾರೆ ಎನ್ನುವ ಸಂದೇಶ ವೈರಲ್‌ ಆಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಮುಕೇಶ್‌ ಅಂಬಾನಿ ಭೇಟಿ ಮಾಡಿ ಹೂಗುಚ್ಛ ನೀಡುತ್ತಿರುವ ಫೋಟೋವನ್ನು ಪೋಸ್ಟ್‌ ಮಾಡಲಾಗುತ್ತಿದೆ.

Fact Check| ಜಗತ್ತಿನ ಅತಿ ಪುಟ್ಟ ಪಕ್ಷಿ ಹಮ್ಮಿಂಗ್‌ ಬರ್ಡ್‌ ನೋಡಿ!

ಈ ಫೋಟೋವೀಗ 7,300 ಬಾರಿ ಶೇರ್‌ ಆಗಿದೆ. ಕೆಲವರು ಈ ಫೋಟೋವನ್ನು ಪೋಸ್ಟ್‌ ಮಾಡಿ, ‘ಭಕ್ತಿ ಎಂದರೆ ಇದು. ಅಂಬಾನಿ ಕುಟುಂಬ ಶ್ರೀರಾಮನ ಮಂದಿರ ನಿರ್ಮಾಣಕ್ಕೆ 500 ಕೋಟಿ ನೀಡುತ್ತಿದೆ. ಜೈ ಶ್ರೀ ರಾಮ್‌’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ.

ಆದರೆ ನಿಜಕ್ಕೂ ಅಂಬಾನಿ ರಾಮಮಂದಿರ ನಿರ್ಮಾಣಕ್ಕೆ 500 ಕೋಟಿ ದೇಣಿಗೆ ನೀಡಿರುವುದು ನಿಜವೇ ಎಂದು ಪರಿಶೀಲಿಸಿದಾಗ ಯಾವುದೋ ಹಳೆಯ ಫೋಟೋ ಪೋಸ್ಟ್‌ ಮಾಡಿ ಕತೆ ಕಟ್ಟಲಾಗಿದೆ ಎಂದು ತಿಳಿದುಬಂದಿದೆ.

ಬೂಮ್‌ ಲೈವ್‌ ಸುದ್ದಿಸಂಸ್ಥೆಯು ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ, ವೈರಲ್‌ ಆಗಿರುವ ಫೋಟೋ 2017ರದ್ದು ಎಂಬುದು ಸ್ಪಷ್ಟವಾಗಿದೆ. ಸುದ್ದಿಸಂಸ್ಥೆಯೊಂದು ಈ ಫೋಟೋ ಪ್ರಕಟಿಸಿ ವರದಿ ಮಾಡಿದ್ದು ಅದರಲ್ಲಿ, ‘ಮುಂದಿನ ಫೆಬ್ರವರಿಯಲ್ಲಿ ಉತ್ತರ ಪ್ರದೇಶದಲ್ಲಿ ಹೂಡಿಕೆದಾರರ ಸಮಾವೇಶ ನಡೆಯಲಿರುವ ಪ್ರಯುಕ್ತ ಈ ಬಗ್ಗೆ ಮುಂಬೈನಲ್ಲಿ ಸಭೆ ಆಯೋಜಿಸಲಾಗಿತ್ತು’ ಎಂದಿದೆ. ಇದೇ ವೇಳೆ ಯೋಗಿ ಆದಿತ್ಯನಾಥ್‌ ಅವರನ್ನು ಮುಕೇಶ್‌ ಅಂಬಾನಿ ಭೇಟಿ ಮಾಡಿದ್ದರು.

- ವೈರಲ್ ಚೆಕ್