ನವದೆಹಲಿ[ಜ.13]: ದೆಹಲಿಯ ಜವಾಹರ್‌ಲಾಲ್‌ ವಿಶ್ವವಿದ್ಯಾಲಯ (ಜೆಎನ್‌ಯು)ದ ಮಹಿಳಾ ಹಾಸ್ಟೆಲ್‌ ಮೇಲೆ ಮುಸುಕುಧಾರಿಗಳ ಗುಂಪೊಂದು ದಾಳಿ ಮಾಡಿತ್ತು. ಈ ವೇಳೆ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಐಷಾ ಘೋಷ್‌ ಅವರ ಮೇಲೆ ತೀವ್ರ ಹಲ್ಲೆ ಮಾಡಲಾಗಿತ್ತು. ಇದೀಗ ಐಷಾ ಘೋಷ್‌ ಮೇಲೆ ಹಲ್ಲೆ ನಡೆದಿದ್ದೇ ಸುಳ್ಳು ಎಂಬಂತಹ ಸಂದೇಶವಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ವೈರಲ್ ಚೆಕ್: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಐಷಾ ಘೋಷ್‌ ಅವರ ಎರಡು ಫೋಟೋವನ್ನು ಪೋಸ್ಟ್‌ ಮಾಡಲಾಗಿದೆ. ಒಂದರಲ್ಲಿ ಎಡಗೈಗೆ ಬ್ಯಾಂಡೇಜ್‌ ಸುತ್ತಿದ್ದರೆ, ಇನ್ನೊಂದರಲ್ಲಿ ಬಲಗೈಗೆ ಬ್ಯಾಂಡೇಜ್‌ ಸುತ್ತಲಾಗಿದೆ. ಇವೆರಡನ್ನೂ ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿ, ‘ಎಡಗೈಗೆ ಸುತ್ತಿದ್ದ ಬ್ಯಾಂಡೇಜ್‌ ಬಲಗೈಗೆ ಜಂಪ್‌ ಮಾಡುತ್ತದೆ, ನಿಮಗಿದು ತಿಳಿದಿತ್ತೇ?’ಎಂದು ವ್ಯಂಗ್ಯವಾಗಿ ಒಕ್ಕಣೆ ಬರೆಯಲಾಗುತ್ತಿದೆ. ಇದು ವೈರಲ್‌ ಆಗಿದೆ.

ಇದಲ್ಲದೆ ನೆಟ್ಟಿಗರು ಒಬ್ಬೊಬ್ಬರು ಒಂದೊಂದು ರೀತಿ ಒಕ್ಕಣೆ ಬರೆದು ಇದನ್ನು ಶೇರ್‌ ಮಾಡುತ್ತಿದ್ದಾರೆ. ಆದರೆ ಈ ಫೋಟೋಗಳ ಹಿಂದಿನ ಸತ್ಯವನ್ನು ಬೂಮ್‌ ಲೈವ್‌ ಸುದ್ದಿಸಂಸ್ಥೆ ಬಯಲಿಗೆಳೆದಿದ್ದು, ಬ್ಯಾಂಡೇಜ್‌ ಸುತ್ತಿತ್ತ ಕೈ ಬದಲಾಗಿದೆ ಎಂಬುದೇ ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ವೈರಲ್‌ ಆಗಿರುವ ಚಿತ್ರಗಳ ಮೂಲ ಹುಡುಕಿದಾಗ ಅಂದರೆ ದಾಳಿಯಾದ ಮಾರನೇ ದಿನ ಆಸ್ಪತ್ರೆಯಿಂದ ಬಿಡುಗಡೆಯಾದ ಐಷಾ ಘೋಷ್‌ ಪತ್ರಿಕಾಗೋಷ್ಠಿ ಕರೆದಿದ್ದರು.

ಈ ಜಾಡು ಹಿಡಿದು ಹೋಲಿಸಿದಾಗ ಐಷಾ ಘೋಷ್‌ ಅವರ ಎಡಗೈ ಗಾಯಗೊಂಡು ಬ್ಯಾಂಡೇಜ್‌ ಸುತ್ತಲಾಗಿತ್ತು ಎಂಬುದು ದೃಢವಾಗಿದೆ. ಎಲ್ಲಿಯೂ ಐಷಾ ಅವರ ಬ್ಯಾಂಡೇಜ್‌ ಎಡಗೈನಿಂದ ಬಲಗೈಗೆ ಹೋಗಿಲ್ಲ! ಈ ಮೂಲ ಫೋಟೋವನ್ನೇ ತಿರುಚಿ ಸುಳ್ಳುಸುದ್ದಿ ಹರಡಲಾಗುತ್ತಿದೆ.