ವಿಶ್ವಾದ್ಯಂತ 270 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಬಿಟ್‌ಕಾಯಿನ್‌ ಮಾದರಿಯ ಡಿಜಿಟಲ್‌ ಕರೆನ್ಸಿ ‘ಲಿಬ್ರಾ’ಗೆ ಮಂಗಳವಾರ ಅಧಿಕೃತವಾಗಿ ಚಾಲನೆ ನೀಡಿದೆ. ಹಣ ವರ್ಗಾವಣೆ ಹಾಗೂ ಪಾವತಿ ಕ್ಷೇತ್ರದಲ್ಲಿ ಇದು ಕ್ರಾಂತಿ ಮಾಡಬಹುದು ಎಂಬ ನಿರೀಕ್ಷೆ ಇದೆ. 

ನ್ಯೂಯಾರ್ಕ್ (ಅ.16): ವಿಶ್ವಾದ್ಯಂತ 270 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ಬಿಟ್‌ಕಾಯಿನ್‌ ಮಾದರಿಯ ಡಿಜಿಟಲ್‌ ಕರೆನ್ಸಿ ‘ಲಿಬ್ರಾ’ಗೆ ಮಂಗಳವಾರ ಅಧಿಕೃತವಾಗಿ ಚಾಲನೆ ನೀಡಿದೆ. ಹಣ ವರ್ಗಾವಣೆ ಹಾಗೂ ಪಾವತಿ ಕ್ಷೇತ್ರದಲ್ಲಿ ಇದು ಕ್ರಾಂತಿ ಮಾಡಬಹುದು ಎಂಬ ನಿರೀಕ್ಷೆ ಇದೆ.

ಕಳೆದ ಜೂನ್‌ನಲ್ಲಿ ಲಿಬ್ರಾ ಬಗ್ಗೆ ಘೋಷಣೆ ಮಾಡಿದ್ದ ಫೇಸ್‌ಬುಕ್‌ ಇದೀಗ 21 ಪಾಲುದಾರಿಕಾ ಕಂಪನಿಗಳ ಜತೆ ಜಿನೆವಾದಲ್ಲಿ ಮೊದಲ ಸಭೆಯನ್ನು ನಡೆಸಿ, ಒಪ್ಪಂದಕ್ಕೆ ಸಹಿಹಾಕುವ ಮೂಲಕ ಡಿಜಿಟಲ್‌ ಕರೆನ್ಸಿ ವ್ಯವಹಾರವನ್ನು ಪ್ರಾರಂಭಿಸಿದಂತಾಗಿದೆ. ಆದರೆ ಈ ಕರೆನ್ಸಿ ಗ್ರಾಹಕರಿಗೆ 2020ರಿಂದ ಲಭ್ಯವಾಗಬಹುದು ಎಂದು ಹೇಳಲಾಗಿದೆ.

ಡಿಜಿಟಲೀಕರಣಕ್ಕೆ ಟಿಸಿಎಸ್ ಮಾಡಿದ ಪ್ಲ್ಯಾನ್ ಏನು? ಉದ್ಯೋಗ ಪ್ರಾವಿಣ್ಯತೆ ಎಂದರೆ ಹಾಲು- ಜೇನು!

ಲಿಬ್ರಾ ವ್ಯವಹಾರದಲ್ಲಿ ಫೇಸ್‌ಬುಕ್‌ ಜತೆ 27 ಕಂಪನಿಗಳು ಗುರುತಿಸಿಕೊಂಡಿದ್ದವು. ಆದರೆ ಕೆಲ ದಿನಗಳ ಅಂತರದಲ್ಲಿ ವೀಸಾ, ಮಾಸ್ಟರ್‌ಕಾರ್ಡ್‌ ಹಾಗೂ ಪೇಪಾಲ್‌ನಂತಹ ಕಂಪನಿಗಳು ಹೊರ ನಡೆದಿದ್ದು, ಸದ್ಯ 21 ಕಂಪನಿಗಳು ಉಳಿದಿವೆ. ಉಬರ್‌, ವೊಡಾಫೋನ್‌ನಂತಹ ಕಂಪನಿಗಳು ಲಿಬ್ರಾ ಸದಸ್ಯ ಕಂಪನಿಗಳಾಗಿವೆ. 180 ಕಂಪನಿಗಳು ಕೈಜೋಡಿಸಲು ಆಸಕ್ತಿ ವ್ಯಕ್ತಪಡಿಸಿವೆ ಎಂದು ಲಿಬ್ರಾ ಬಳಗ ಹೇಳಿಕೊಂಡಿದೆ.

ಏನಿದು ಲಿಬ್ರಾ?:

ಈಗಾಗಲೇ ಜನಪ್ರಿಯವಾಗಿರುವ ಬಿಟ್‌ಕಾಯಿನ್‌ ರೀತಿಯ ಮತ್ತೊಂದು ಡಿಜಿಟಲ್‌ ಕರೆನ್ಸಿ ಇದು. ಆದರೆ ಇದು ಹೆಚ್ಚು ಸುರಕ್ಷಿತ ಎಂದು ಹೇಳಲಾಗುತ್ತಿದೆ. ಗ್ರಾಹಕರು ಲಿಬ್ರಾ ಖರೀದಿಸಿದಾಗ ನೀಡುವ ಮೊತ್ತವನ್ನು ಬ್ಯಾಂಕ್‌ ಖಾತೆಯಲ್ಲಿ ಜಮೆ ಮಾಡಲಾಗುತ್ತದೆ. ಅದರಿಂದ ಬರುವ ಬಡ್ಡಿಯನ್ನು ಆರಂಭಿಕವಾಗಿ ಹಣ ತೊಡಗಿಸಿದ ಕಂಪನಿಗಳಿಗೆ ಪಾವತಿಸಲಾಗುತ್ತದೆ.

ಲಿಬ್ರಾ ಖರೀದಿಸುವ ಗ್ರಾಹಕ ಪ್ರಪಂಚದ ಯಾವುದೇ ಮೂಲೆಗೆ ಬೇಕಾದರೂ ನಿಶ್ಶುಲ್ಕವಾಗಿ ಅದನ್ನು ವರ್ಗಾವಣೆ ಮಾಡಬಹುದು. ಲಿಬ್ರಾವನ್ನು ನಗದಾಗಿ ಪರಿವರ್ತಿಸಿಕೊಳ್ಳಬೇಕೆಂದರೆ, ಅದನ್ನು ಮರಳಿಸಬಹುದು. ಆಗಿನ ಮಾರುಕಟ್ಟೆದರ ನೋಡಿ ನಗದು ಮರಳಿಸಲಾಗುತ್ತದೆ. ಫೇಸ್‌ಬುಕ್‌ ಇದರ ನೇತೃತ್ವ ವಹಿಸಿದೆಯಾದರೂ, ಲಿಬ್ರಾದಲ್ಲಿ ಒಂದು ಭಾಗವಾಗಿಯಷ್ಟೇ ಗುರುತಿಸಿಕೊಂಡಿದೆ.

ಚೀನಾದಿಂದ ಪ್ರತ್ಯೇಕ ಡಿಜಿಟಲ್‌ ಕರೆನ್ಸಿ

ಬೀಜಿಂಗ್‌: ಬಿಟ್‌ಕಾಯಿನ್‌ಗೆ ಸಡ್ಡು ಹೊಡೆಯಲು ಫೇಸ್‌ಬುಕ್‌ ಲಿಬ್ರಾ ಎಂಬ ಡಿಜಿಟಲ್‌ ಕರೆನ್ಸಿ ಹೊರತಂದಿರುವಾಗಲೇ, ಚೀನಾ ಕೂಡ ತನ್ನದೇ ಆದ ಪ್ರತ್ಯೇಕ ಡಿಜಿಟಲ್‌ ಕರೆನ್ಸಿ ಹೊಂದಲು ಮುಂದಾಗಿದೆ. ಸಾಮಾನ್ಯವಾಗಿ ಡಿಜಿಟಲ್‌ ಕರೆನ್ಸಿಗಳನ್ನು ಖರೀದಿಸಿದ್ದು ಯಾರು, ಮಾರಾಟ ಮಾಡಿದ್ದು ಯಾರು ಎಂಬುದು ರಹಸ್ಯವಾಗಿರುತ್ತದೆ. ಆದರೆ ಚೀನಾದ ಡಿಜಿಟಲ್‌ ಕರೆನ್ಸಿಗೆ ಹೆಚ್ಚಿನ ನಿಯಂತ್ರಣ ಹೇರಲಾಗಿರುತ್ತದೆ. ಚೀನಾದ ಕೇಂದ್ರೀಯ ಬ್ಯಾಂಕ್‌ ಆಗಿರುವ ಪೀಪಲ್ಸ್‌ ಬ್ಯಾಂಕ್‌ ಆಫ್‌ ಚೀನಾವೇ ಇದನ್ನು ನಿರ್ವಹಿಸಲಿದೆ ಎಂದು ವರದಿಗಳು ತಿಳಿಸಿವೆ.