Asianet Suvarna News Asianet Suvarna News

ಈ ಬಾರಿ ಜನಪರ ಬಜೆಟ್ ಮಂಡನೆ ನಿರೀಕ್ಷೆ: ತೆರಿಗೆ ಸಲಹೆಗಾರ ವಿಜಯ್‌ ರಾಜೇಶ್

ಚುನಾವಣೆ ಸಮೀಪಿಸುತ್ತಿರುವುದರಿಂದ ತೆರಿಗೆ ಹೊರೆ ಇರುವ, ಮನಸ್ಸಿಗೆ ನೋವಾಗುವ ಬಜೆಟ್ ಸಾಧ್ಯತೆ ಇಲ್ಲ ಎಂದು ತೆರಿಗೆ ಸಲಹೆಗಾರರಾದ ವಿಜಯ್‌ ರಾಜೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

Expected to present pro people budget this time Tax advisor Vijay Rajesh akb
Author
First Published Jan 31, 2024, 6:13 PM IST

ಅತೀ ಶ್ರೀಮಂತರು ನಮ್ಮ ದೇಶದಲ್ಲಿ ಏನು ಬೇಕಾದರೂ ಮಾಡಬಹುದು. ಅವರು ಯಾವ ದೇಶದವರಾರೂ ಸರಿ ಎಂಬ ನಂಬಿಕೆಯ ಕಾಲವಿತ್ತು. ಈಗ ಹಾಗಿಲ್ಲ. ಅದಕ್ಕೆ ಉದಾಹರಣೆ ಎಲಾನ್‌ ಮಸ್ಕ್‌ ತನ್ನ ಉದ್ಯಮ ಸ್ಥಾಪಿಸಲು ಮತ್ತು ಕೋವಿಡ್‌ ಸಂದರ್ಭದಲ್ಲಿ ಅಮೆರಿಕದ ವ್ಯಾಕ್ಸಿನ್‌ ಕಂಪನಿ ಮಾಡಲು ದರ್ಪ ತೋರಿಸಿ ಮೆತ್ತಗಾಗಿದ್ದು.  ಒಬ್ಬ ಕೆಚ್ಚೆದೆಯ, ದೂರದೃಷ್ಟಿಯುಳ್ಳ, ದೇಶಾಭಿಮಾನವುಳ್ಳ ನಾಯಕನಿರುವಾಗ, ಕೆಲವು ನಂಬಿಕೆಗಳು ಸುಳ್ಳಾಗುತ್ತವೆ. ಈ ಪ್ರಸ್ತಾವನೆ ಏಕೆಂದರೆ ಇವು ನೇರವಾಗಿ ನಮ್ಮ ಆರ್ಥಿಕತೆಗೆ ಸಂಬಂಧಪಟ್ಟಿದವು.

ಅಧಿಕಾರದಲ್ಲಿರುವ ಸರ್ಕಾರ ಮತ್ತು ನಾಯಕರ ಇಚ್ಛಾಶಕ್ತಿಯ ಉದಾಹರಣೆ, ಇದರಿಂದ ದೇಶದ ಆರ್ಥಿಕತೆ ಮತ್ತು ಭವಿಷ್ಯ ನಿರ್ಮಾಣವಾಗುವ ‘ಬಜೆಟ್‌’ಗಿರುವ ಸಂಬಂಧ.
ಚುನಾವಣೆ ಹೊಸ್ತಿಲಿನಲ್ಲಿ ಕಳೆದ ಹತ್ತು ವರ್ಷಗಳಿಂದ ಸರ್ಕಾರ ನಡೆಸಿ ಹಲವು ಏಳು ಬೀಳುಗಳನ್ನು ಕಂಡಂತಹ ಸರ್ಕಾರದಿಂದ ತಪ್ಪಾಗಲು ಸಾಧ್ಯವಿಲ್ಲ. ಹಾಗಾಗಿ ತೆರಿಗೆ ಹೊರೆ, ಮನಸ್ಸಿಗೆ ನೋವಾಗುವ ಆಶ್ಚರ್ಯಕರ ಬಜೆಟ್‌ ಖಂಡಿತವಾಗಿಯೂ ಬರುವುದಿಲ್ಲ. ವಾಡಿಕೆಯಂತೆ ಚುನಾವಣೆ ನಂತರ ಮತ್ತೊಮ್ಮೆ ಪೂರ್ಣ ಬಜೆಟ್‌ ಮಂಡಿಸಲಾಗುತ್ತದೆ.ಈ ಬಾರಿಯ ಬಜೆಟ್‌ ಕೃಷಿಗೆ ಸಾಮಾನ್ಯವಾಗಿ ಹೆಚ್ಚು ಒತ್ತು ನೀಡುತ್ತದೆ. 

ಇಂದಿನಿಂದ ಸಂಸತ್ತಿನ ಬಜೆಟ್‌ ಅಧಿವೇಶನ: ನಾಳೆ ನಿರ್ಮಲಾ ಸೀತಾರಾಮನ್‌ರಿಂದ ಮಧ್ಯಂತರ ಬಜೆಟ್‌ ಮಂಡನೆ

ದೇಶದ ಕೆಲವೆಡೆ ಮಳೆ ಕೊರತೆಯಿಂದ ಆಹಾರ ಉತ್ಪಾದನೆಯ ಸಮಸ್ಯೆ ತಲೆದೋರಿದೆ. ಆದರೆ ಭಯಪಡುವ ಅಗತ್ಯವಿಲ್ಲ. ಹಾಗೆ ನೋಡಿದರೆ ಇತರೆ ದೇಶಗಳಿಗೆ ಹೋಲಿಸಿದರೆ, ನಮ್ಮ ಉತ್ಪಾದನೆ ಸಮಾಧಾನಕರವಾಗಿದೆ. ಕೊರೋನಾ ನಂತರ ಎಲ್ಲ ದೇಶಗಳು ಚೀನಾ ಮೇಲಿನ ಅನುಮಾನ ಮತ್ತು ಅವಲಂಬನೆ ತಗ್ಗಿಸುವ ನಿಟ್ಟಿನಲ್ಲಿ ನಮ್ಮ ದೇಶಕ್ಕೆ ಅವಕಾಶಗಳನ್ನು ತಂದುಕೊಡುತ್ತಿದೆ.

Make in India ಅಂತಹ ಹಲವು ಕಾರ್ಯಕ್ರಮಗಳು ಫಲ ನೀಡುತ್ತಿದ್ದು, ವಿದೇಶಿ ಬಂಡವಾಳ ಹೂಡಿಕೆಗೆ ಸಾಕ್ಷಿಯಾಗಿದೆ.ನಮ್ಮದು ರಫ್ತು ಆಧಾರಿತ ದೇಶವಲ್ಲ. ಹಾಗಾಗಿ ನಮ್ಮ ಉತ್ಪಾದನೆಗೆ ನಮ್ಮ ಮಾರುಕಟ್ಟೆಯೇ ಸಾಕು. ಬೇರೆಲ್ಲ ದೇಶಗಳು ಸಂಕಷ್ಟದಲ್ಲಿರುವಾಗ ಇದು ನಮಗೆ ಅನುಕೂಲಕರ. ಕಚ್ಚಾ ತೈಲದ ಬೆಲೆ ಕೂಡ 80 ಡಾಲರ್‌ಗಿಂತ ಕಡಿಮೆಯಾಗಿದ್ದು, ಆರ್ಥಿಕತೆಗೆ ಅಪಾಯಕಾರಿಯಾಗಿಲ್ಲ. ಹೆಚ್ಚು ಚಿನ್ನದ ಆಮದು ಇದ್ದರೂ, ವಿದೇಶಿ ವಿನಿಮಯದ ಕೊರತೆ ಇಲ್ಲ. ಆರ್ಥಿಕ ತಜ್ಞರ ಪ್ರಕಾರ ಇರಬೇಕಾದ GDP, ಹಣದುಬ್ಬರ (Inflation), ಆದಾಯ ಕೊರತೆ ಎಲ್ಲವೂ ಹಿಡಿತದಲ್ಲಿದೆ.

Union Budget 2024: ಪಿಎಂ ಕಿಸಾನ್ ಯೋಜನೆ ಸಹಾಯಧನ 9,000ರೂಪಾಯಿಗೆ ಏರಿಕೆ ಸಾಧ್ಯತೆ,ರೈತರಲ್ಲಿ ಹೆಚ್ಚಿದ ನಿರೀಕ್ಷೆ

ಪ್ರಪಂಚದಲ್ಲಿ ತಲೆದೋರಿರುವ ಯುದ್ಧ ಭೀತಿ ಪರಿಣಾಮಕ್ಕೆ ಬಜೆಟ್‌ನ ತಯಾರಿ ಹೇಗಿದೆ ಎಂದು ನೋಡಬೇಕಾಗಿದೆ. ಈ ಸರ್ಕಾರ ಬಂದಾಗಿನಿಂದ ಮೂಲಸೌಕರ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ರೈಲ್ವೆ ವಲಯ, ರಕ್ಷಣಾ ವಲಯ, ಈಶಾನ್ಯ ರಾಜ್ಯಗಳ ಅಭಿವೃದ್ಧಿಯ ಪ್ರತಿಫಲ ಕಾಣುತ್ತಿದೆ. ನಾವೆಂದೂ ಊಹಿಸದಷ್ಟು ಕೆಲಸ ರಕ್ಷಣಾ ವಲಯದಲ್ಲಿ ದೇಶೀಯ ನಿರ್ಮಾಣಕ್ಕೆ ಒತ್ತು ನೀಡಿ ಆರ್ಥಿಕತೆಗೆ ಸಹಾಯ ನೀಡುತ್ತಿದೆ. ಇನ್ನು ರೈಲ್ವೆ ಇಲಾಖೆಯ ಪ್ರಗತಿ ಬುಲೆಟ್‌ ರೈಲನ್ನು ಸಾಕಾರಗೊಳಿಸಿ ಈ ಬಾರಿಯ ಬಜೆಟ್‌ ಕೂಡ ಈ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡುವುದರಲ್ಲಿ ಸಂಶಯವಿಲ್ಲ.

ಇನ್ನು ತೆರಿಗೆ ವಲಯಕ್ಕೆ ಬರುವುದಾದರೆ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹ ಸಮಾಧಾನಕರವಾಗಿದ್ದು, ಸರ್ಕಾರಕ್ಕೆ ಹೆಚ್ಚಿನ ಆದಾಯ ತರುತ್ತಿದ್ದು, ಮುಂದಿನ ದಿನಗಳಲ್ಲಿ ಆಶಾದಾಯಕ ಮೊತ್ತವನ್ನು ಸಂಗ್ರಹಿಸುವ ನಿಟ್ಟಿನಲ್ಲಿದೆ. GST ಮಂಡಳಿಯ ಒಪ್ಪಿಗೆ ಇಲ್ಲದೆ ಬದಲಾವಣೆ ಸಾಧ್ಯವಿಲ್ಲ. ಹಾಗಾಗಿ ತೆರಿಗೆ ಸುಧಾರಣೆಗಳನ್ನು ಬಜೆಟ್‌ನಲ್ಲಿ ಕಾಣಬಹುದು.ಆದಾಯ ತೆರಿಗೆ ಹೆಚ್ಚು ಕಡಿಮೆ ಈಗ ಸುಲಭದ ಲೆಕ್ಕಾಚಾರವಾಗಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ಈಗಾಗಲೇ ಯಾವುದೇ ರಿಯಾಯಿತಿ, ವಿನಾಯ್ತಿಗಳಿಲ್ಲದೆ 7 ಲಕ್ಷ ರು. ಆದಾಯಕ್ಕೆ ತೆರಿಗೆ ಇಲ್ಲ.

 ಸಂಬಳದಾರರಿಗೆ ಸಿಹಿ ಸುದ್ದಿಯನ್ನು Standard Deduction ಹೆಚ್ಚಿಸುವುದರ ಮೂಲಕ ನೀಡಬಹುದು. ಇನ್ನು ಕೈಗಾರಿಕೆಗಳಿಗೆ, ವ್ಯಾಪಾರದವರಿಗೆ, ವೃತ್ತಿ ನಿರತರಿಗೆ ಈಗಿರುವ ತೆರಿಗೆ ಸುಧಾರಣೆಗಳೊಂದಿಗೆ ಇನ್ನೂ ಸ್ವಲ್ಪ ಸುಧಾರಣೆಗಳನ್ನು ನೀಡಬಹುದು. ನೇರ ತೆರಿಗೆ ಸಂಗ್ರಹ ಕೂಡ ಆಶಾದಾಯಕವಾಗಿದೆ.ರೈತರಿಗೆ, ಅಗತ್ಯ ಜನರಿಗೆ ತಲುಪಬೇಕಾದ ಸಾಮಾಜಿಕ ಕಾರ್ಯಕ್ರಮಗಳು ಇನ್ನು ಹೆಚ್ಚಿನ ಪಾಲು ಪಡೆಯುತ್ತದೆ.

ನೇರ ಪಾವತಿ, ತಂತ್ರಜ್ಞಾನದ ಅಳವಡಿಕೆಯಿಂದ ಯಾರಿಗೆ ಸೇರಬೇಕೋ ಆ ವ್ಯಕ್ತಿಗೆ ತಲುಪಿಸುವ ಸರ್ಕಾರದ ಕಾರ್ಯಗಳಿಗೆ ಬಜೆಟ್‌ನಲ್ಲಿ ನಿರೀಕ್ಷಿಸಬಹುದು.ಕಳೆದ ವರ್ಷಗಳಲ್ಲಿ ಈ ಸರ್ಕಾರ ಬಜೆಟ್‌ ಮಂಡಿಸಿದಾಗ, ಚುನಾವಣೆಯಲ್ಲಿ ಪರಿಣಾಮ ಬೀರಿಲ್ಲ. ಹಾಗಾಗಿ ಈ ಬಾರಿ ಕೂಡ, ಸರ್ಕಾರ ತನ್ನ ದೂರದೃಷ್ಟಿಯುಳ್ಳ ಬಜೆಟ್‌ಗಿಂತ ಜನಪರ ಬಜೆಟ್‌ ಮಂಡಿಸುತ್ತದೆ ಎಂಬ ನಿರೀಕ್ಷೆ ಇದೆ. ಈ ಬಾರಿಯ ಚುನಾವಣೆಯಲ್ಲಿ ಸ್ಥಿರ ಮತ್ತು ದೇಶಾಭಿಮಾನವುಳ್ಳ ಸರ್ಕಾರ ಬಂದರೆ "ಹೊರಗಿನ ಶಕ್ತಿ "ಗಳ ಆಟ ನಡೆಯುವುದಿಲ್ಲ.

ಹಾಗಾಗಿ ಅಸ್ಥಿರಕ್ಕೆ ಪ್ರಯತ್ನಿಸುತ್ತಾರೆ. ಮೊಘಲರ, ಬ್ರಿಟಿಷರ ಕಾಲದಂತೆ ನಮ್ಮವರೇ ಅವರಿಗೆ ಸಹಾಯ ಮಾಡುತ್ತಿದ್ದಾರೆ. ‘ರಾಮ’ ಬಂದಿದ್ದಾನೆ ನೋಡೋಣ ಯಾರಿಗೆ ಗೆಲುವು ಎಂದು. ಸದೃಢ ಭಾರತದ ಭವಿಷ್ಯ ನಿರ್ಮಾಣ ಮಾಡುವ ಬಜೆಟ್‌ ಆಗಿರಲಿ.

Follow Us:
Download App:
  • android
  • ios