Asianet Suvarna News Asianet Suvarna News

ಅಗ್ನಿಪಥ್‌ ಬಗ್ಗೆ ಪ್ರತಿಭಟನೆ ಆರಂಭವಾದಷ್ಟೇ ವೇಗದಲ್ಲಿ ಕಾವು ಕಳೆದುಕೊಂಡಿದೆ: ವಾಯುಪಡೆ ಅಧಿಕಾರಿ

ಏರ್‌ ಮಾರ್ಷಲ್‌ ಸೂರಜ್‌ ಕುಮಾರ್‌ ಝಾ ಅವರು ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ಅಳವಡಿಕೆಯಿಂದಾಗಿ ವಾಯುಪಡೆಯಲ್ಲಿ ಆಗುವ ಬದಲಾವಣೆಗಳ ಬಗ್ಗೆ ಕನ್ನಡ ಪ್ರಭದ ಸೋದರ ಸಂಸ್ಥೆ ಏಷ್ಯಾನೆಟ್‌ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಅಗ್ನಿವೀರರ ಸೇವಾವಧಿ, ಅವರಿಗೆ ನೀಡಲಾಗುವ ತರಬೇತಿ, ಆಯ್ಕೆ ಪ್ರಕ್ರಿಯೆ ಮೊದಲಾದವುಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ.

Exclusive interview  Air Marshal Suraj Kumar Jha with Asianet News on Agnipath and Agniveer hls
Author
Bengaluru, First Published Jul 4, 2022, 10:23 AM IST

ಏರ್‌ ಮಾರ್ಷಲ್‌ ಸೂರಜ್‌ ಕುಮಾರ್‌ ಝಾ ಅವರು ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ಅಳವಡಿಕೆಯಿಂದಾಗಿ ವಾಯುಪಡೆಯಲ್ಲಿ ಆಗುವ ಬದಲಾವಣೆಗಳ ಬಗ್ಗೆ ಕನ್ನಡ ಪ್ರಭದ ಸೋದರ ಸಂಸ್ಥೆ ಏಷ್ಯಾನೆಟ್‌ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಅಗ್ನಿವೀರರ ಸೇವಾವಧಿ, ಅವರಿಗೆ ನೀಡಲಾಗುವ ತರಬೇತಿ, ಆಯ್ಕೆ ಪ್ರಕ್ರಿಯೆ ಮೊದಲಾದವುಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ.

ಕೇಂದ್ರದ ಅಗ್ನಿಪಥ ಯೋಜನೆಗೆ ಯುವಕರಿಂದ ಪ್ರತಿಕ್ರಿಯೆ ಹೇಗಿದೆ?

ಕೇವಲ 4 ದಿನಗಳಲ್ಲಿ ಅಗ್ನಿವೀರರಾಗಲು 1.5 ಲಕ್ಷ ಯುವಕರಿಂದ ಅರ್ಜಿ ಸಲ್ಲಿಕೆಯಾಗಿದೆ. ಇದನ್ನು ನೋಡಿದರೆ ಅಗ್ನಿಪಥ ಯೋಜನೆಗೆ ಯುವಕರಿಂದ ಭಾರೀ ಮಟ್ಟದಲ್ಲಿ ಸ್ಪಂದನೆ ಸಿಗುತ್ತಿದೆ ಎನ್ನಬಹುದು. ಇನ್ನು ಅರ್ಜಿ ಸಲ್ಲಿಕೆಗೆ ಸಮಯವಿದೆ. ಹೀಗಾಗಿ ಇನ್ನಷ್ಟುಒಳ್ಳೆಯ ಪ್ರತಿಕ್ರಿಯೆಯನ್ನೇ ನಿರೀಕ್ಷಿಸಿದ್ದೇವೆ.

ಈ ವರ್ಷಕ್ಕೆ ಕೇವಲ 3000 ಯುವಕರಿಗಾಗಿ ಮಾತ್ರ ಅಗ್ನಿವೀರರಾಗಿ ಆಯ್ಕೆ ಮಾಡಿಕೊಳ್ಳಲಾಗುವುದು. ಈ ಯೋಜನೆಯು ಯಶಸ್ವಿಯಾದರೆ ಅಗ್ನಿವೀರರ ಆಯ್ಕೆಯ ಸಂಖ್ಯೆಯನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲಾಗುವುದೇ?

ಖಂಡಿತ ಮುಂದಿನ ದಿನಗಳಲ್ಲಿ ಅಗ್ನಿವೀರರ ನೇಮಕಾತಿಯಲ್ಲಿ ಹೆಚ್ಚಳ ಮಾಡಲಾಗುವುದು. ಮುಂದಿನ ವರ್ಷವೇ 3,500 ಅಗ್ನಿವೀರರ ನೇಮಕಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಅಗ್ನಿವೀರರ ನೇಮಕಾತಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಏರಿಕೆ ಮಾಡುವುದು ಮುಂದುವರೆಯಲಿದೆ.

ಅಗ್ನಿಪಥ ಯೋಜನೆಯಿಂದ ಭಾರತದ ವಾಯುಪಡೆಯಲ್ಲಿ ಯಾವ ರೀತಿ ಬದಲಾವಣೆಯನ್ನು ಕಾಣಬಹುದು?

ಅಗ್ನಿವೀರರನ್ನು ವಾಯುಪಡೆಗೆ ನೇಮಕ ಮಾಡಿಕೊಳ್ಳುವುದರಿಂದ ವಾಯುಪಡೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದೇವೆ. ಇದು ವಾಯುಪಡೆಯ ಯೋಧರ ವಯಸ್ಸಿನನ್ನು ಇನ್ನಷ್ಟುತಗ್ಗಿಸಲಿದೆ. ಯುವಕರಿಗೆ ವಿಭಿನ್ನ ಮಾದರಿಯಲ್ಲಿ ತರಬೇತಿ ನೀಡಲು ಚಿಂತನೆ ನಡೆಸಲಾಗುತ್ತಿದೆ. ಈಗಿನ ಯುವಕರು ಹೆಚ್ಚು ಕಂಪ್ಯೂಟರ್‌, ಸ್ಮಾರ್ಚ್‌ಫೋನುಗಳನ್ನು ಬಳಕೆ ಮಾಡುತ್ತಾರೆ. ಅವರ ಈ ತಂತ್ರಜ್ಞಾನ ಕೌಶಲ್ಯಗಳನ್ನು ನಾವು ಬಳಸಿಕೊಳ್ಳಲು ಚಿಂತನೆ ನಡೆಸಿದ್ದೇವೆ. ಈಗಿನ ಯುವ ಪೀಳಿಗೆ ಆಧುನಿಕ ತಂತ್ರಜ್ಞಾನವನ್ನು ಶೀಘ್ರವೇ ಅಳವಡಿಸಿಕೊಳ್ಳುವ ಮನೋಭಾವ ಹೊಂದಿದೆ. ಈ ನಿಟ್ಟಿನಲ್ಲೇ ಅವರಿಗೆ ತರಬೇತಿ ನೀಡಲಾಗುವುದು.

ಕಾರ್ಗಿಲ್‌ ಯುದ್ಧದ ನಂತರ ವಾಯುಪಡೆಗೆ ಯಾವ ಸವಾಲುಗಳು ಎದುರಾಗಿವೆ?

ಕಾರ್ಗಿಲ್‌ ಯುದ್ಧದಲ್ಲಿ ನಾನು ಫ್ರಂಟ್‌ಲೈನ್‌ ಪೈಲಟ್‌ ಆಗಿ ಕಾರ್ಯ ನಿರ್ವಹಿಸಿದ್ದೆ. ಕಾರ್ಗಿಲ್‌ ಪರಿಶೀಲನಾ ಸಮಿತಿ ಸೇನೆಯಲ್ಲಿ ನೇಮಕಾತಿ ಮಾಡಿಕೊಳ್ಳುವ ಯುವಕರ ವಯಸ್ಸನ್ನು ತಗ್ಗಿಸುವ ಬಗ್ಗೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಗಮನದಲ್ಲಿಟ್ಟುಕೊಂಡು ಅಗ್ನಿಪಥ ಯೋಜನೆಯನ್ನು ರೂಪಿಸಲಾಗಿದೆ.

Exclusive Interview: ಅಗ್ನಿವೀರರು ಕೇವಲ ಸೆಕ್ಯುರಿಟಿ ಗಾರ್ಡ್ ಆಗಬೇಕಲ್ಲ, ಅವರಗದೆ ಅಸಂಖ್ಯ ಉದ್ಯೋಗಾವಕಾಶ

1984 ರಲ್ಲೇ ಅಗ್ನಿಪಥದಂತಹ ಯೋಜನೆಯನ್ನು ಜಾರಿಗೆ ತರಬೇಕೆಂದು ಚರ್ಚಿಸಲಾಗಿತ್ತು. ಆದರೆ ಈ ಯೋಜನೆ ಅನುಷ್ಠಾನಕ್ಕೆ ತರಲು ಇಷ್ಟುಸುದೀರ್ಘ ಅವಧಿ ಬೇಕಾಗಿದ್ದು ಏಕೆ?

ಇದೊಂದು ಕ್ರಾಂತಿಕಾರಿ ಯೋಜನೆ. ಇದು ಹಿಂದಿನ ಸಾಂಪ್ರದಾಯಿಕ ಗ್ರಹಿಕೆಗಳನ್ನು ಮುರಿದಿದೆ. ಯೋಜನೆ ಘೋಷಣೆಯಾಗಿದ್ದೇ ಅದರ ಪರ-ವಿರೋಧದ ಚರ್ಚೆಗಳಾಗಿದ್ದವು. ಹಲವಾರು ವರ್ಷಗಳಿಂದ ದೇಶದ ಸೇನೆಯು ನಿರ್ದಿಷ್ಟಮಾದರಿಯಲ್ಲಿ ಮುನ್ನಡೆಯುತ್ತಿದೆ. ಇಂತಹ ಕ್ರಾಂತಿಕಾರಿ ಯೋಜನೆ ಅಳವಡಿಸುವ ಮುನ್ನ ದೀರ್ಘ ಸಮಾಲೋಚನೆ ನಡೆಸುವ ಅಗತ್ಯವಿದೆ. ಪರಿಸ್ಥಿತಿ ಅನುಕೂಲಕರವಾಗಿದ್ದಾಗಲೇ ಇಂತಹ ಯೋಜನೆಗಳ ಅನುಷ್ಠಾನ ಸಾಧ್ಯ. ಹೀಗಾಗಿ ಸುಮಾರು 30 ವರ್ಷಗಳ ಬಳಿಕ ಹಲವಾರು ತಜ್ಞರ ಸಮಾಲೋಚನೆಯ ಬಳಿಕ ಇದು ಅಂತಿಮವಾಗಿ ಜಾರಿಗೆ ಬಂದಿದೆ.

ಅಗ್ನಿಪಥ ಘೋಷಣೆ ಬಳಿಕ ನಡೆದ ಪ್ರತಿಭಟನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಈ ಪ್ರತಿಭಟನೆಗಳು ಹೆಚ್ಚಾಗಿ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ಕೊರತೆಯಿಂದ ಅಥವಾ ಕೆಲವರ ಪ್ರಚೋದನೆಯಿಂದಾಗಿ ಜರುಗಿವೆ. ಈ ಪ್ರತಿಭಟನೆ ಆರಂಭವಾದಷ್ಟೇ ವೇಗದಲ್ಲಿ ತನ್ನ ಕಾವು ಕಳೆದುಕೊಂಡಿದೆ. ಈ ಯೋಜನೆಯ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ತಲುಪಿದ ನಂತರ ಜನರು ಅದನ್ನು ಸ್ವೀಕರಿಸಿದ್ದಾರೆ. ಅಗ್ನಿವೀರರಾಗಲು ಭಾರೀ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಅಗ್ನಿವೀರರ ಸೇವಾವಧಿಯನ್ನು ಕೇವಲ 4 ವರ್ಷಕ್ಕೆ ಮಾತ್ರ ಏಕೆ ಸೀಮಿತಗೊಳಿಸಲಾಗಿದೆ?

ನಾವು 17ರಿಂದ 21 ವರ್ಷದ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದೇವೆ. ಈ ವರ್ಷ ಮಾತ್ರ 17ರಿಂದ 23 ವರ್ಷದವರನ್ನು ನೇಮಕ ಮಾಡಿಕೊಳ್ಳಲಿದ್ದೇವೆ. ಸಾಮಾನ್ಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿ ಹೊರಬೀಳುವ ಯುವಕರ ಗರಿಷ್ಠ ವಯಸ್ಸು 25 ವರ್ಷವಾಗಿರಲಿದೆ. ಈ 25-30 ವರ್ಷದ ಯುವಕರಿಗೆ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ವ್ಯಾಪಕವಾದ ಉದ್ಯೋಗಾವಕಾಶಗಳಿವೆ. ನಾವು ಅಗ್ನಿವೀರರ ಸೇವಾವಧಿಯನ್ನು ಹೆಚ್ಚಿಸಿದಂತೆ ಅವರಿಗೆ ಇನ್ನಿತರ ಕ್ಷೇತ್ರಗಳಲ್ಲಿ ಉದ್ಯೋಗ ಸಿಗುವ ಅವಕಾಶಗಳು ಕಡಿಮೆಯಾಗುತ್ತ ಹೋಗುತ್ತವೆ. ನನ್ನ ಪ್ರಕಾರ 4 ವರ್ಷಗಳ ಅವಧಿ ಉತ್ತಮ ತರಬೇತಿ ಹಾಗೂ ಅನುಭವ ನೀಡಲು ಸಾಕಷ್ಟುದೀರ್ಘವಾದ ಅವಧಿಯೇ ಆಗಿದೆ. ಅಗ್ನಿವೀರರಿಗೆ ಸೇನೆಯಲ್ಲೇ ಮುಂದುವರೆಯುವ ಅವಕಾಶ ಕೂಡಾ ಇದೆ.

ಪ್ರತಿವರ್ಷ ಆಯ್ಕೆಯಾದವರಲ್ಲಿ ಕೇವಲ ಶೇ.25 ರಷ್ಟುಜನರಿಗೆ ಮಾತ್ರ ಸೇನೆಯಲ್ಲಿ ಕಾಯಂ ನೇಮಕಾತಿ ಮಾಡಿಕೊಳ್ಳಲಾಗುವುದು. ಈ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯಲಿದೆ?

ಇದೊಂದು ಸಂಪೂರ್ಣ ಪಾರದರ್ಶಕ ಪ್ರಕ್ರಿಯೆಯಾಗಿದೆ. ನಾವು 3 ಪರೀಕ್ಷೆಗಳನ್ನು ನಡೆಸುತ್ತೇವೆ. ಮೊದಲನೆಯದು ಎಂಟ್ರಿ ಲೆವಲ್‌ ಪರೀಕ್ಷೆ, ತರಬೇತಿ ಪಡೆದ 6 ತಿಂಗಳ ಬಳಿಕ ಮತ್ತೊಂದು ಪರೀಕ್ಷೆ ಹಾಗೂ ಕೊನೆಯಲ್ಲಿ ಮೂರುವರೆ ವರ್ಷದ ಬಳಿಕ ಇನ್ನೊಂದು ಪರೀಕ್ಷೆ ನಡೆಸಲಾಗುವುದು. ಇದರೊಂದಿಗೆ ವಿವಿಧ ಶೈಕ್ಷಣಿಕ ಕೋರ್ಸುಗಳನ್ನೂ ಅಗ್ನಿವೀರರು ಆಯ್ಕೆ ಮಾಡಿಕೊಂಡಿರುತ್ತಾರೆ. ಅವುಗಳಿಗಾಗಿ ಅವರಿಗೆ ಕ್ರೆಡಿಟ್‌ ನೀಡಲಾಗುತ್ತದೆ. ಇದರೊಂದಿಗೆ ಆರೋಗ್ಯ, ಶಿಸ್ತು ಪಾಲನೆ, ದೈಹಿಕ ಫಿಟ್‌ನೆಸ್‌, ತರಬೇತಿ ವೇಳೆ ಕ್ಷಮತೆ ಮೊದಲಾದವುಗಳನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ನಡೆಸಲಾಗುವುದು. ಇವರಲ್ಲಿ ವಾಯುಪಡೆಯ ಅವಶ್ಯಕತೆಗೆ ತಕ್ಕಂತೆ ಅತ್ಯುತ್ತಮ ಶೇ.25ರಷ್ಟುಅಗ್ನಿವೀರರಿಗೆ ವಾಯುಪಡೆಯಲ್ಲಿ ಕಾಯಂ ನೇಮಕಾತಿ ಮಾಡಿಕೊಳ್ಳಲಾಗುವುದು.

ಅಗ್ನಪಥ್ ವಿರೋಧ: ಪಿಎಂ ಮೋದಿಗೆ 420 ರೂ ಚೆಕ್ ಕಳುಹಿಸಲಿದೆ ಆಪ್!

ಅಗ್ನಿವೀರರಿಗೆ ಯಾವ ರೀತಿಯ ತರಬೇತಿ ನೀಡಲಾಗುವುದು?

ವ್ಯಕ್ತಿತ್ವ ವಿಕಸನದ ತರಬೇತಿ, ಭಾಷೆ ಹಾಗೂ ಸಂವಹನದ ಕೌಶಲ್ಯಗಳ ಅಭಿವೃದ್ಧಿ , ಶಿಸ್ತು ಪಾಲನೆ, ಮೂಲಭೂತ ಸೇನಾ ತರಬೇತಿಗಳು, ಬದುಕುಳಿಯುವ ಕೌಶಲ್ಯ, ಅಗ್ನಿಶಾಮಕ ಕೌಶಲ್ಯ, ಶಸ್ತ್ರಾಸ್ತ್ರಗಳ ಬಳಕೆ, ದೈಹಿಕ ಫಿಟ್‌ನೆಸ್‌, ಸಮಯ ಪಾಲನೆಗಳ ಬಗ್ಗೆ ತರಬೇತಿ ನೀಡಲಾಗುವುದು. ವಾಯುಪಡೆಯು ಒಂದು ದೊಡ್ಡ ವೇದಿಕೆಯಾಗಿದ್ದು, ವ್ಯಕ್ತಿಯ ಸಾಮರ್ಥ್ಯ ಹಾಗೂ ಆಸಕ್ತಿಯ ಆಧಾರದ ಮೇಲೆ ವಿವಿಧ ಕೌಶಲ್ಯಗಳ ತರಬೇತಿ ಒದಗಿಸಲಾಗುವುದು.

ಅಗ್ನಿವೀರರು ಸೇನೆಯಿಂದ ಹೊರಬಂದ ಬಳಿಕ ಯಾವ ಮಾದರಿಯ ಉದ್ಯೋಗಾವಕಾಶಗಳು ಯುವಕರಿಗೆ ಲಭಿಸಲಿವೆ?

ಲಾಜಿಸ್ಟಿಕ್‌ ನಿರ್ವಹಣೆಯಲ್ಲಿ, ಎಲೆಕ್ಟ್ರಿಕ್‌ ಅಥವಾ ಶಕ್ತಿ ಸಂಗ್ರಹದ ವಿಭಾಗದಲ್ಲಿ, ಏರ್‌ಕ್ರಾಫ್‌್ಟನಿರ್ವಹಣೆಯಲ್ಲಿ, ನಾಗರಿಕ ವಿಮಾನಯಾನ ಕ್ಷೇತ್ರ ಹೀಗೆ ಹಲವಾರು ಕ್ಷೇತ್ರದಲ್ಲಿ ಇವರಿಗೆ ಉದ್ಯೋಗಾವಕಾಶಗಳು ಲಭಿಸಲಿವೆ.

ಅಗ್ನಿವೀರರಿಗೆ ವಿಶೇಷ ರಾರ‍ಯಂಕಿಂಕ್‌ ವ್ಯವಸ್ಥೆ ಇದೆಯೇ?

ಅಗ್ನಿವೀರರಿಗೆ ಪಿಂಚಣಿ ಸೌಲಭ್ಯ ಇರುವುದಿಲ್ಲ. ಹೀಗಾಗಿ ಅವರು ಒಂದು ರಾರ‍ಯಂಕ್‌ ಒಂದು ಪಿಂಚಣಿ ವ್ಯಾಪ್ತಿಯಡಿಯಲ್ಲಿ ಬರುವುದಿಲ್ಲ. ಆದರೆ ಕಾಯಂ ನೇಮಕಾತಿಯಾಗುವ ಅಗ್ನಿವೀರರು ಮುಂದೆ ಕನಿಷ್ಠ 20 ವರ್ಷಗಳ ಕಾಲ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಅವರ ಆಸಕ್ತಿ ಕ್ಷೇತ್ರ, ಸಾಮರ್ಥ್ಯದ ಆಧಾರದ ಮೇಲೆ ಉನ್ನತ ಮಟ್ಟದ ರಾರ‍ಯಂಕ್‌ಗಳಿಗೂ ಅವರು ತಲುಪಬಹುದಾಗಿದೆ. ಹೀಗಾಗಿ ವಾಯುಪಡೆಯು ಯುವ ಯೋಧರು ಹಾಗೂ ಅನುಭವಿ ಯೋಧರನ್ನು ಜೊತೆಯಾಗಿ ಹೊಂದಿರಲಿದೆ.

ಮಾಜಿ ಅಗ್ನಿವೀರರಿಗೆ ಮದುವೆ ಅನುಮಾನ ಭೀತಿ!

ಯುವತಿಯರಿಗೆ ಭಾರತದ ವಾಯುಪಡೆಯಲ್ಲಿ ಎಷ್ಟರ ಮಟ್ಟಿಗೆ ಅವಕಾಶಗಳು ತೆರೆದಿವೆ?

ಯುವತಿಯರಿಗೆ ವಾಯುಪಡೆಯಲ್ಲಿ ಶೇ.100ರಷ್ಟುಅವಕಾಶಗಳು ತೆರೆದಿವೆ. ಆದರೆ ಈ ವರ್ಷ ಯುವತಿಯರ ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಯುವತಿಯರನ್ನು ನೇಮಕಾತಿ ಮಾಡಿಕೊಳ್ಳುವ ಬಗ್ಗೆ ವಿವರವಾದ ಅಧ್ಯಯನ ನಡೆಯುತ್ತಿದೆ. ಅಧ್ಯಯನದ ವರದಿ ಬಹುತೇಕ ಸಿದ್ಧವಾಗಿದೆ. ಅದನ್ನು ಆಡಳಿತಗಾರರಿಗೆ ಸಲ್ಲಿಸಿ ಬಳಿಕ ಅವರ ಶಿಫಾರಸ್ಸಿನ ಆಧಾರದ ಮೇಲೆ ಮುಂದೆ ಕ್ರಮ ಕೈಗೊಳ್ಳಲಾಗುವುದು.

ಅಗ್ನಿಪಥ ಯೋಜನೆಯನ್ನು ಹೊರತುಪಡಿಸಿ ವಾಯುಪಡೆಯಲ್ಲಿ ಆಧುನೀಕರಣ ಪ್ರಕ್ರಿಯೆ ಹೇಗೆ ಸಾಗುತ್ತಿದೆ?

ಆಧುನಿಕರಣವು ನಡೆಯುತ್ತಲೇ ಇದೆ. ಹೊಸ ತಂತ್ರಜ್ಞಾನದೊಂದಿಗೆ ಹೊಸ ಸವಾಲುಗಳು, ಬೆದರಿಕೆಗಳು ಬರುವುದು ಸಾಮಾನ್ಯ. ಅದನ್ನು ನಿಭಾಯಿಸಲು ವಾಯುಪಡೆಯಲ್ಲಿ ಆಧುನೀಕರಣ ಅಗತ್ಯ. ಬಾಹ್ಯಾಕಾಶ, ಸೈಬರ್‌, ಎನ್‌ಸ್ಕಿ್ರಪ್ಶನ್‌, ನಿರಂತರ ಮೇಲ್ವಿಚಾರಣೆ, ಆಯುಧಗಳ ನಿಖರತೆ, ನೆಟ್‌ವರ್ಕಿಂಗ್‌ ಇವೆಲ್ಲ ಆಧುನೀಕರಣದ ಭಾಗಗಳಾಗಿವೆ.

- ಏರ್‌ ಮಾರ್ಷಲ್‌ ಸೂರಜ್‌ ಕುಮಾರ್‌ ಝಾ, ಭಾರತೀಯ ವಾಯುಪಡೆ

Follow Us:
Download App:
  • android
  • ios