ಶ್ರೀನಗರ(ಂಆ.30): ಪೊಲೀಸರು ಪ್ರತಿಕೂಲ ವರದಿ ನೀಡಿದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರು ಸಲ್ಲಿಸಿದ್ದ ಪಾಸ್‌ಪೋರ್ಟ್‌ ಅರ್ಜಿಯನ್ನು ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ತಿರಸ್ಕರಿಸಿದೆ.

ತಮಗೆ ಪಾಸ್‌ಪೋರ್ಟ್‌ ನೀಡಬಾರದು ಎಂದು ಜಮ್ಮು-ಕಾಶ್ಮೀರದ ಸಿಐಡಿ ವರದಿ ಶಿಫಾರಸು ಮಾಡಿದೆ. ಆದ ಕಾರಣ, ತಮ್ಮ ಪಾಸ್‌ಪೋರ್ಟ್‌ ಅರ್ಜಿಯನ್ನು ತಿರಸ್ಕರಿಸಲಾಗಿದೆ. ವಿದೇಶಾಂಗ ಸಚಿವಾಲಯ ಒದಗಿಸುವ ಉನ್ನತ ವೇದಿಕೆಯಲ್ಲಿ ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು ಎಂದು ಪಾಸ್‌ಪೋರ್ಟ್‌ ಕಚೇರಿ ಮೆಹಬೂಬಾ ಅವರಿಗೆ ಪತ್ರ ಬರೆದು ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಹಬೂಬಾ, ತಾವು ದೇಶದ ಭದ್ರತೆಗೆ ಅಪಾಯಕಾರಿ ಎಂದು ಸಿಐಡಿ ವರದಿ ನೀಡಿದೆ. ಹೀಗಾಗಿ ಪಾಸ್‌ಪೋರ್ಟ್‌ ಕಚೇರಿ ನನಗೆ ಪಾಸ್‌ಪೋರ್ಟ್‌ ಒದಗಿಸಲು ನಿರಾಕರಿಸಿದೆ. ಒಬ್ಬ ಮಾಜಿ ಮುಖ್ಯಮಂತ್ರಿ ಪಾಸ್‌ಪೋರ್ಟ್‌ ಹೊಂದಿರುವುದು ಬಲಿಷ್ಠ ದೇಶದ ಸಾರ್ವಭೌಮತೆಗೆ ಅಪಾಯಕಾರಿ ಎನ್ನುವುದು 2019ರ ಬಳಿಕ ಕಾಶ್ಮೀರದಲ್ಲಿ ಯಾವ ರೀತಿಯ ಸಹಜ ಸ್ಥಿತಿ ಇದೆ ಎಂಬುದನ್ನು ತೋರಿಸುತ್ತದೆ ಎಂದು ಟ್ವೀಟ್‌ ಮಾಡಿ ಅವರು ಆಕ್ರೋಶ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ಪಾಸ್‌ಪೋರ್ಟ್‌ ನೀಡುವಂತೆ ತಮಗೆ ಸೂಚಿಸಬೇಕು ಎಂಬ ಅವರ ಅರ್ಜಿಯನ್ನು ಜಮ್ಮು-ಕಾಶ್ಮೀರ ಹೈಕೋರ್ಟ್‌ ವಜಾ ಮಾಡಿದೆ.