ನ್ಯಾಷನಲ್ ಹೆರಾಲ್ಡ್ ಕಚೇರಿ ಮೇಲೆ ಇಡಿ ರೇಡ್; ದಾಖಲೆಗಳ ಪರಿಶೀಲನೆ
ನ್ಯಾಷನಲ್ ಹೆರಾಲ್ಡ್ ಕೇಸ್ ದಿನೇ ದಿನೇ ಒಂದೊಂದು ರೀತಿತಿಯ ತಿರುವು ಪಡೆಯುತ್ತಿದ್ದು, ಜಾರಿ ನಿರ್ದೇಶನಾಲಯ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಹಲವು ಕಚೇರಿಗಳ ಮೇಲೆ ರೇಡ್ ಮಾಡಿ, ಪರಿಶೀಲನೆ ನಡೆಸುತ್ತಿದೆ.
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (Enforcement Directorate) (ED) ಮಂಗಳವಾರ ಪತ್ರಿಕೆಯ ಹಲವು ಕಚೇರಿಗಳ ಮೇಲೆ ರೇಡ್ ಮಾಡಿದೆ. ನ್ಯಾಷನಲ್ ಹೆರಾಲ್ಡ್‌ನ ದೆಹಲಿ ಹಾಗೂ ಇತರೆ ಹಲವು ಸ್ಥಳಗಳ ಕಚೇರಿಗಳ ಮೇಲೆ ಇಡಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಇತ್ತೀಚೆಗೆ ಹಲವು ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ನ್ಯಾಷನಲ್ ಹೆರಾಲ್ಡ್‌ನ ದೆಹಲಿಯ ಪ್ರಧಾನ ಕಚೇರಿ ಸೇರಿದಂತೆ 11 ಇತರೆ ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯ ಮಂಗಳವಾರ ಬೆಳಗ್ಗೆಯಿಂದ ರೇಡ್ ಮಾಡಿದ್ದು, ಆ ಕಚೇರಿಗಳಲ್ಲಿರುವ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದೆ ಎಂದು ತಿಳಿದುಬಂದಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಹಣದ ಜಾಡು ಹಿಡಿದು, ಇದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪುರಾವೆಗಳನ್ನು ಸಂಗ್ರಹಿಸಲು ಹುಡುಕಾಟಗಳನ್ನು ನಡೆಸಲಾಗುತ್ತಿದೆ ಎಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಕಚೇರಿಗಳ ಮೇಲೆ ಇಡಿ ರೇಡ್‌ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಕೇಸ್, ಸೋನಿಯಾಗೆ 30 ಪ್ರಶ್ನೆ: ಇಂದು ಮತ್ತೆ ವಿಚಾರಣೆ
ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (Prevention of Money Laundering Act) (ಪಿಎಂಎಲ್‌ಎ) ಅಡಿ ಹಣಕಾಸು ಅಕ್ರಮ ನಡೆದಿರುವ ಆರೋಪ ಸಂಬಂಧ ಈ ತನಿಖೆ ನಡೆಯುತ್ತಿದೆ. ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ 2013 ರಲ್ಲಿ ನೀಡಿದ್ದ ಖಾಸಗಿ ದೂರಿನ ಆಧಾರದ ಮೇಲೆ ನ್ಯಾಯಾಲಯವೊಂದರ ಸೂಚನೆ ಮೇರೆಗೆ ಆದಾಯ ತೆರಿಗೆ ಇಲಾಖೆ (Income Tax) 9 ತಿಂಗಳ ಹಿಂದೆ ತನಿಖೆ ನಡೆಸಿತ್ತು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸಿದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) (Associated Journals Limited) ಆಸ್ತಿಯನ್ನು ವಂಚನೆಯಿಂದ ಸ್ವಾಧೀನಪಡಿಸಿಕೊಂಡು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ (ವೈಐಎಲ್) ಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿ ಅರ್ಜಿದಾರರಾದ ಸುಬ್ರಮಣಿಯನ್ ಸ್ವಾಮಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಇದರಲ್ಲಿ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ಇಬ್ಬರದೂ ತಲಾ ಶೇ.38 ಒಡೆತನವಿದೆ ಎಂಬುದು ಗಮನಾರ್ಹ.
ಸೋನಿಯಾ ಗಾಂಧಿ ಸಮನ್ಸ್‌ಗೆ ಕಾಂಗ್ರೆಸ್ ಕೆಂಡ, ಹೈಕಮಾಂಡ್ ನೋಟಿಸ್‌ಗೆ ಜಮೀರ್ ಥಂಡಾ!
Young Indian Private LImited (YIL) ಪ್ರವರ್ತಕರಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದ್ದಾರೆ. ಈ ಹಿನ್ನೆಲೆ ಸೋನಿಯಾ ಗಾಂಧಿ ಕುಟುಂಬ ವಂಚನೆ ಮಾಡಿದ್ದಾರೆ ಮತ್ತು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು. AJL ಕಾಂಗ್ರೆಸ್‌ಗೆ ನೀಡಬೇಕಿದ್ದ 90.25 ಕೋಟಿ ರೂ.ಗಳನ್ನು ವಸೂಲಿ ಮಾಡುವ ಹಕ್ಕನ್ನು ಪಡೆಯಲು YIL ಕೇವಲ 50 ಲಕ್ಷ ರೂ. ನೀಡುವ ಮೂಲಕ ವಂಚಿಸಿದೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು.
ಇತ್ತೀಚೆಗೆ ಕಾಂಗ್ರೆಸ್ ಪ್ರತಿಭಟನೆ, ರಾಜಕೀಯ ದ್ವೇಷದ ಆರೋಪಗಳ ನಡುವೆಯೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಸಮನ್ಸ್ ನೀಡಿದ್ದ ಜಾರಿ ನಿರ್ದೇಶನಾಲಯ ಹಲವು ದಿನಗಳ ಕಾಲ ವಿಚಾರಣೆ ನಡೆಸಿ, ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು.