ನ್ಯಾಷನಲ್ ಹೆರಾಲ್ಡ್ ಕೇಸ್, ಸೋನಿಯಾಗೆ 30 ಪ್ರಶ್ನೆ: ಇಂದು ಮತ್ತೆ ವಿಚಾರಣೆ
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಪಟ್ಟರು.
ನವೆದಹಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಪಟ್ಟರು. 6 ತಾಸುಗಳ ಕಾಲ ಸೋನಿಯಾರನ್ನು ಸುದೀರ್ಘ ವಿಚಾರಣೆಗೆ ಗುರಿಪಡಿಸಿದ ಇ.ಡಿ. ಅಧಿಕಾರಿಗಳು, ಬುಧವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಮಂಗಳವಾರದ ವಿಚಾರಣೆ ವೇಳೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮತ್ತು ಯಂಗ್ ಇಂಡಿಯನ್ ಪ್ರೈ.ಲಿ.ಗೆ ಬಗ್ಗೆ ಸೋನಿಯಾರಿಗೆ ಇ.ಡಿ. ಅಧಿಕಾರಿಗಳು ಸುಮಾರು 30 ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ರಾಹುಲ್ ಗಾಂಧಿ ಅವರನ್ನು ಇದೇ ಪ್ರಕರಣದ ಬಗ್ಗೆ ಇ.ಡಿ. ಅಧಿಕಾರಿಗಳು 50 ಗಂಟೆ ವಿಚಾರಣೆಗೆ ಒಳಪಡಿಸಿದ್ದರು. ಆಗ ರಾಹುಲ್ ಇದೇ ರೀತಿಯ ಪ್ರಶ್ನೆಗಳಿಗೆ ನೀಡಿದ್ದ ಉತ್ತರವನ್ನು ಇದೀಗ ಸೋನಿಯಾ ನೀಡಿದ ಉತ್ತರಕ್ಕೆ ತಾಳೆ ಹಾಕಲಿರುವ ಇ.ಡಿ. ಅಧಿಕಾರಿಗಳು ಬಳಿಕ ವಿಚಾರಣೆಯ ಮುಂದಿನ ಹಂತವನ್ನು ನಿರ್ಧರಿಸಲಿದ್ದಾರೆ ಎನ್ನಲಾಗಿದೆ.
ಸೋನಿಯಾ ಗಾಂಧಿ ಸಮನ್ಸ್‌ಗೆ ಕಾಂಗ್ರೆಸ್ ಕೆಂಡ, ಹೈಕಮಾಂಡ್ ನೋಟಿಸ್‌ಗೆ ಜಮೀರ್ ಥಂಡಾ!
ವಿಚಾರಣೆಗೆ ಹಾಜರ್:
ಸೋನಿಯಾ ಮಂಗಳವಾರ ಝಡ್ ಪ್ಲಸ್ ಭದ್ರತೆಯೊಂದಿಗೆ ಮುಂಜಾನೆ 11 ಗಂಟೆಗೆ ಇಡಿ ಕಚೇರಿಗೆ ಹಾಜರಾಗಿದ್ದರು. ಈ ವೇಳೆ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಕೂಡಾ ಜೊತೆಗಿದ್ದರು. ಸೋನಿಯಾ ಅವರನ್ನು ಇ.ಡಿ. ಕಚೇರಿಗೆ ಬಿಟ್ಟು ರಾಹುಲ್ ತೆರಳಿದರೆ, ಇ.ಡಿ.ಯ ಇನ್ನೊಂದು ಕೊಠಡಿಯಲ್ಲಿ ಪ್ರಿಯಾಂಕಾ, ತಾಯಿ ಸೋನಿಯಾಗೆ ಔಷಧಿ ಹಾಗೂ ಅಗತ್ಯ ವೈದ್ಯಕೀಯ ನೆರವು ಒದಗಿಸಲು ಜೊತೆಗಿದ್ದರು.
ಸೋನಿಯಾ ವಿಚಾರಣೆ ಮುಂಜಾನೆ 11.15ಕ್ಕೆ ಆರಂಭವಾಗಿತ್ತು. ಸುಮಾರು ಎರಡೂವರೆ ಗಂಟೆ ವಿಚಾರಣೆ ನಂತರ 2 ಗಂಟೆಗೆ ಸೋನಿಯಾ ಇಡಿ ಕಚೇರಿಯಿಂದ ಹೊರ ಬಂದಿದ್ದಾರೆ. ಊಟದ ವಿರಾಮದ ನಂತರ 3:30ಗೆ ಮತ್ತೆ ಹಾಜರಾದ ಸೋನಿಯಾ ಹೇಳಿಕೆಯನ್ನು ರೆಕಾರ್ಡ್ ಮಾಡಿದ ಬಳಿಕ ಸಾಯಂಕಾಲ 7 ಗಂಟೆಗೆ ಸೋನಿಯಾ ಇಡಿ ಕಚೇರಿಯಿಂದ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜು. 21ರಂದು ಸೋನಿಯಾ ಮೊದಲ ಬಾರಿ ಇಡಿ ಎದುರು ವಿಚಾರಣೆಗೆ ಹಾಜರಾಗಿದ್ದರು. ಆಗ ಸುಮಾರು 28 ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಅವರಿಗೆ ಕೇಳಿದ್ದರು.
National Herald Case ಸತತ 6 ಗಂಟೆ ವಿಚಾರಣೆ ಬಳಿಕ ಸೋನಿಯಾ ಗಾಂಧಿಗೆ ಮತ್ತೆ ಇಡಿ ಸಮನ್ಸ್!
ಇ.ಡಿ.ಯಿಂದ ಸೋನಿಯಾ ಗಾಂಧಿ ಅವರ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಪಕ್ಷವು ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ಮಂಗಳವಾರ ಪ್ರತಿಭಟನೆ ಹಮ್ಮಿಕೊಂಡಿತ್ತು. ಬುಧವಾರವೂ ಸೋನಿಯಾ ವಿಚಾರಣೆ ಹಿನ್ನೆಲೆಯಲ್ಲಿ ಮತ್ತೆ ಪ್ರತಿಭಟನೆ ನಡೆಸಲು ಪಕ್ಷ ಕರೆ ಕೊಟ್ಟಿದೆ. ಮತ್ತೊಂದೆಡೆ ನರೇಂದ್ರ ಮೋದಿ ಸರ್ಕಾರವು ಕೇಂದ್ರೀಯ ತನಿಖಾ ಸಂಸ್ಥೆಗಳ ವ್ಯಾಪಕ ದುರ್ಬಳಕೆ ಮಾಡಿಕೊಂಡು ರಾಜಕೀಯ ವಿರೋಧಿಗಳ ವಿರುದ್ಧ ಬಳಸಿಕೊಳ್ಳುತ್ತಿದೆ. ಕೂಡಲೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪ್ರತಿಪಕ್ಷ ನಾಯಕರು ಪತ್ರ ಬರೆದಿದ್ದಾರೆ.