ಹಲ್ದ್ವಾನಿ ಒತ್ತುವರಿ ಪ್ರದೇಶದಲ್ಲಿ 50000 ಜನರ ವಾಸ, ಜಾಗದ ಕುರಿತು ಹಲವು ವಿವಾದ, ತೆರವಿಗೆ ತೊಂದರೆ, ರಾಜಕೀಯ, ಕಾನೂನು ಜಂಜಾಟದಿಂದ ತೆರವಿಗೆ ಅಡ್ಡಿ

ನವದೆಹಲಿ(ಜ.10): ಉತ್ತರಾಖಂಡದ ಹಲ್ದ್ವಾನಿಯಲ್ಲಿ ರೈಲ್ವೆಗೆ ಸೇರಿದ ಜಾಗ ಒತ್ತುವರಿ ಮಾಡಿಕೊಂಡು ನೆಲೆಸಿದ್ದ 50 ಸಾವಿರ ಜನರ ತೆರವಿಗೆ ಹೈಕೋರ್ಟ್‌ ಅದೇಶ, ಅದರ ಬೆನ್ನಲ್ಲೇ ತೆರವಿಗೆ ಸುಪ್ರೀಂಕೋರ್ಟ್‌ ತಡೆ ನೀಡಿದ್ದು ಇಡೀ ಪ್ರಕರಣಕ್ಕೆ ಹೊಸ ತೆರವು ನೀಡಿದೆ. ದೇಶದ ಅತಿದೊಡ್ಡ ಉದ್ಯೋಗದಾತ ಸಂಸ್ಥೆಯಾದ, ಸಂಚಾರ ವ್ಯವಸ್ಥೆಯಾದ ಜೀವನಾಡಿಯಾದ ಭಾರತೀಯ ರೈಲ್ವೆಗೆ ಸೇರಿದ ಜಾಗ ಒತ್ತುವರಿ ಪ್ರಕರಣ ಇದೇ ಮೊದಲಲ್ಲ. ರಾಜಕೀಯ ಕಾರಣ, ರಾಜಕಾರಣಿಗಳ ಓಲೈಕೆ, ಕಾನೂನಿನ ಜಂಜಾಟ ಮೊದಲಾದ ಕಾರಣಗಳಿಂದ ಇಂಥ ಒತ್ತುವರಿ ತೆರವು ಹಲವು ದಶಕಗಳಿಂದ ದೊಡ್ಡ ಕಗ್ಗಂಟಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ಹಲ್ದ್ವಾನಿ ಪ್ರಕರಣದ ಹಿನ್ನೆಲೆ ಮತ್ತು ದೇಶಾದ್ಯಂತ ಇದೇ ರೀತಿಯಲ್ಲಿ ಆಗಿರುವ ಒತ್ತುವರಿ, ಅದಕ್ಕೆ ಕಾರಣಗಳು ಮತ್ತಿತರೆ ವಿಷಯಗಳ ಕಿರುನೋಟ ಇಲ್ಲಿದೆ.

ಹಲ್ದ್ವಾನಿಯಲ್ಲಿ 29 ಎಕರೆ ಒತ್ತುವರಿ

ಉತ್ತರಾಖಂಡದ ವಾಣಿಜ್ಯ ರಾಜಧಾನಿ ಹಲ್ದ್ವಾನಿಯಲ್ಲಿನ ರೈಲ್ವೆಗೆ ಸೇರಿದ ಒಟ್ಟು 79 ಎಕರೆ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ. ಈ ಪೈಕಿ ಪ್ರಸ್ತುತ ವಿವಾದಿತ ಜಾಗದ ವ್ಯಾಪ್ತಿ 29 ಎಕರೆ. 79 ಎಕರೆ ಜಾಗದಲ್ಲಿ 4,365 ಜನರು ಈ ಒತ್ತುವರಿ ನಡೆಸಿದ್ದು, ಅದರಲ್ಲಿ 4 ಸಾವಿರ ಕುಟುಂಬಗಳು ವಾಸಿಸುತ್ತಿವೆ. ಒತ್ತುವರಿಯಾದ ಪ್ರದೇಶದಲ್ಲಿ ಸುಮಾರು 50 ಸಾವಿರ ಜನರು ವಾಸ ಮಾಡುತ್ತಿರುವ ಅಂದಾಜಿದೆ. ಮನೆ, ವಾಣಿಜ್ಯ ಕಟ್ಟಡ, ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಒಂದು ಪ್ರಾಥಮಿಕ ಶಾಲೆ, 2 ಕಾಲೇಜು, 9 ದೇಗುಲ ಮತ್ತು 20 ಮಸೀದಿಗಳಿವೆ. ಈ ಪ್ರದೇಶದಲ್ಲಿ ವಾಸ ಮಾಡುತ್ತಿರುವವರು ಹೆಚ್ಚಿನವರು ಮುಸ್ಲಿಮರು.

4000 ಮನೆ ಧ್ವಂಸ ವಿರುದ್ಧ ನಿವಾಸಿಗಳು ಸುಪ್ರೀಂಕೋರ್ಟ್‌ಗೆ

ತೆರವಿಗೆ ಕೋರ್ಟ್‌ಗೆ ರೈಲ್ವೆ ಮೊರೆ

ಒತ್ತುವರಿಯಾದ ಜಾಗ ತೆರವಿಗೆ ರೈಲ್ವೆ, ದಶಕಗಳಿಂದ ಕಾನೂನು ಹೋರಾಟ ನಡೆಸುತ್ತಿದೆ. ಈ ಬಗ್ಗೆ ಡಿ.20ರಂದು ಆದೇಶ ಹೊರಡಿಸಿದ್ದ ಉತ್ತರಾಖಂಡ ಹೈಕೋರ್ಟ್‌, ಎಲ್ಲಾ ಒತ್ತುವರಿದಾರರಿಗೆ ಒಂದು ವಾರದ ನೋಟಿಸ್‌ ಕೊಟ್ಟು ಬಳಿಕ ತೆರವುಗೊಳಿಸಬೇಕೆಂದು ಹೇಳಿತ್ತು. ಅದರಂತೆ ರೈಲ್ವೆ ನೋಟಿಸ್‌ ನೀಡಿದ ಬೆನ್ನಲ್ಲೇ ನಿವಾಸಿಗಳು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದವು. ಈ ವೇಳೆ ಸುಪ್ರೀಂಕೋರ್ಟ್‌, ಇದೊಂದು ಮಾನವೀಯ ವಿಷಯ. ಈ ವಿವಾದದಲ್ಲಿ ಸಾಕಷ್ಟು ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಿದೆ. ಹೀಗಾಗಿ ಏಕಾಏಕಿ ತೆರವು ಸರಿಯಲ್ಲ ಎಂದು ಹೇಳಿ ತೆರವು ಆದೇಶಕ್ಕೆ ತಡೆ ನೀಡಿದೆ.

ನಿವಾಸಿಗಳ ವಾದ ಏನು?

ನಾವು ಹಲವು ದಶಕಗಳಿಂದ ಇದೇ ಜಾಗದಲ್ಲಿ ವಾಸವಿದ್ದೇವೆ. ನಮಗೆ ಭೂಮಿಯ ಮಾಲೀಕತ್ವ ನೀಡುವ ದಾಖಲೆಗಳೂ ಇವೆ ಎಂಬುದು ಅರ್ಜಿದಾರರ ವಾದ. ‘1947ರ ದೇಶ ವಿಭಜನೆ ವೇಳೆ ಸರ್ಕಾರ ಭೂಮಿಯನ್ನು ಹರಾಜು ಹಾಕಿದ ವೇಳೆ ನಾವು ಖರೀದಿಸಿದ್ದೇವೆ’ ಎಂಬುದು ಇನ್ನು ಕೆಲವರ ವಾದ. ಜೊತೆಗೆ, ‘ಭೂಮಿಯ ಮಾಲೀಕತ್ವದ ಕುರಿತು ವ್ಯಾಜ್ಯ ಈಗಾಗಲೇ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇದನ್ನು ಪರಿಗಣಿಸದೆಯೇ ಹೈಕೋರ್ಚ್‌ ಮನೆ, ಶಾಲೆ, ಕಟ್ಟಡ, ಉದ್ಯಮ, ಮಂದಿರ, ಮಸೀದಿಗಳನ್ನು ಒಳಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಲು ಆದೇಶಿಸುವ ಮೂಲಕ ಲೋಪ ಎಸಗಿದೆ’ ಎಂದು ಅರ್ಜಿದಾರರು ವಾದಿಸಿದ್ದಾರೆ.

ಇತರೆ ಹಲವೆಡೆ ನಡೆದ ತೆರವು ಗದ್ದಲ: ಅಸ್ಸಾಂನ ನೌಗಾಂವ್‌ನಲ್ಲಿ ನೂರಾರು ಮನೆಗಳ ತೆರವು

2022ರ ನವೆಂಬರ್‌ನಲ್ಲಿ ಅಸ್ಸಾಂನ ನೌಗಾಂವ್‌ನಲ್ಲಿ ರೈಲ್ವೆ ಹಳಿ ಪಕ್ಕ ನಿರ್ಮಾಣಗೊಂಡಿದ್ದ ನೂರಾರು ಮನೆಗಳನ್ನು ಜಿಲ್ಲಾಡಳಿತ ನೋಟಿಸ್‌ ನೀಡಿ ಧ್ವಂಸಗೊಳಿಸಿತ್ತು. ಈ ಪ್ರದೇಶದಲ್ಲಿ ಸಾವಿರಾರು ಜನರು ನೆಲೆಸಿದ್ದರು.

ಸೂರತ್‌- ಜಲಗಾಂವ್‌ ಮಾರ್ಗದ 5000 ಮನೆಗಳ ತೆರವು

2021ರ ಆಗಸ್ಟ್‌ನಲ್ಲಿ ಸೂರತ್‌-ಜಲಗಾಂವ್‌ ರೈಲ್ವೆ ಮಾರ್ಗ ನಿರ್ಮಾಣಕ್ಕಾಗಿ ಸೂರತ್‌ ಜಿಲ್ಲಾಡಳಿತ 5000 ಕೊಳಚೆ ಪ್ರದೇಶಗಳ ತೆರವಿಗೆ ಯೋಜನೆ ರೂಪಿಸಿತು. ಅದರಂತೆ ಮೊದಲ ಹಂತದಲ್ಲಿ 300 ಸ್ಲಂಗಳ 9000ಕ್ಕೂ ಹೆಚ್ಚು ಮನೆಗಳನ್ನು ತೆರವುಗೊಳಿಸಿತು. ಮೊದಲಿಗೆ ನೋಟಿಸ್‌ ನೀಡಿ ಬಳಿಕ ನೀರು, ವಿದ್ಯುತ್‌ ಸಂಪರ್ಕ ಕಟ್‌ ಮಾಡಿ ಜನರೇ ಜಾಗ ತೆರವು ಮಾಡುವಂತೆ ಮಾಡಲಾಯಿತು. ಆದರೆ ಬಳಿಕ ಸುಪ್ರೀಂಕೋರ್ಚ್‌ನ ಸೂಚನೆ ಅನ್ವಯ ತೆರವು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ರೈಲ್ವೆ ಯೋಜನೆ ಪೂರ್ಣಗೊಳಿಸಲಾಗಿಲ್ಲ.

ಅಸ್ಸಾಂನಲ್ಲಿ ತೆರವುಗೊಳಿಸಿದರೂ ಮರಳಿದರು

2020ರ ಜೂನ್‌ನಲ್ಲಿ ಅಸ್ಸಾಂನ ನರೆಂಗಿ ಮತ್ತು ಅಮಿನ್‌ಗಾಂವ್‌ ನಡುವಿನ ಪ್ರದೇಶಗಳಲ್ಲಿ ಒತ್ತುವರಿ ಮಾಡಲಾಗಿದ್ದ ರೈಲ್ವೆ ಮಾರ್ಗದ ಪಕ್ಕದ 70 ಹೆಕ್ಟೇರ್‌ ಪ್ರದೇಶದಿಂದ ಜನರನ್ನು ತೆರವು ಮಾಡಲಾಗಿತ್ತು. ಆದರೆ ತೆರವು ಮಾಡಿದವರು ಮತ್ತೆ ಅದೇ ಸ್ಥಳಕ್ಕೆ ಬಂದು ನೆಲೆಸಿರುವ ಕಾರಣ ಸಮಸ್ಯೆ ಮರುಕಳಿಸಿದೆ.

ಮುಂಬೈ- ಅಹಮದಾಬಾದ್‌ ಬುಲೆಟ್‌ ರೈಲಿಗೂ ಅಡ್ಡಿ

ದೇಶದ ಮೊದಲ ಬುಲೆಟ್‌ ರೈಲು ಯೋಜನೆಗೂ ರೈಲ್ವೆ ಭೂಮಿ ಒತ್ತುವರಿ ಅಡ್ಡಿಯಾಗಿದೆ. ಗುಜರಾತ್‌ನ ಸಬರ್‌ಮತಿ ಪ್ರದೇಶದಲ್ಲಿ ರೈಲ್ವೆಗೆ ಸೇರಿದ ಜಾಗದಲ್ಲಿ ಸಾವಿರಾರು ಜನರು ಭೂಮಿ ಒತ್ತುವರಿ ಮಾಡಿದ್ದಾರೆ. 2018ರಿಂದಲೇ ಈ ಜಾಗ ತೆರವಿಗೆ ಸರ್ಕಾರ ಯತ್ನಿಸಿದ್ದರೂ ಅದು ಫಲ ಕೊಟ್ಟಿಲ್ಲ. 3 ದಶಕಗಳಿಂದ ತಾವು ಇಲ್ಲಿ ವಾಸ ಮಾಡುತ್ತಿರುವ ಕಾರಣ ಸೂಕ್ತ ಪುನಾವಸತಿ ಒದಗಿಸದೇ ಜಾಗ ತೆರವು ಮಾಡುವುದಿಲ್ಲ ಎಂದು ಕೊಳಚೆ ಪ್ರದೇಶದ ನಿವಾಸಿಗಳು ಸಡ್ಡು ಹೊಡೆದಿದ್ದಾರೆ.

ದೇಶಾದ್ಯಂತ 2011 ಎಕರೆ ರೈಲ್ವೆ ಭೂಮಿ ಒತ್ತುವರಿ

ರೈಲ್ವೆ ಜಾಗ ಒತ್ತುವರಿಯಾಗಿದ್ದು ಕೇವಲ ಹಲ್ದ್ವಾನಿಯಲ್ಲಿ ಮಾತ್ರವಲ್ಲ. ಕಳೆದ ವರ್ಷ ಕೇಂದ್ರ ಸರ್ಕಾರ ಸಂಸತ್ತಿಗೆ ನೀಡಿದ ಮಾಹಿತಿ ಅನ್ವಯ ದೇಶಾದ್ಯಂತ 2011 ಎಕರೆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಈ ಪೈಕಿ ಬಹುತೇಕ ಪ್ರದೇಶ ಮೆಟ್ರೋ ನಗರಿ ಮತ್ತು ಇತರೆ ದೊಡ್ಡ ನಗರಗಳಲ್ಲಿ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಆಸುಪಾಸಿನ ಪ್ರದೇಶಗಳು. ಇಲ್ಲಿ ಬಹುತೇಕ ಕೊಳಚೆ ಪ್ರದೇಶಗಳು ನಿರ್ಮಾಣವಾಗಿವೆ. ಹೀಗೆ ಒತ್ತುವರಿ ಮಾಡಿದವರು ತಾತ್ಕಾಲಿಕ ಗುಡಿಸಲು ಹಾಕಿಕೊಂಡಿದ್ದರೆ ರೈಲ್ವೆ ಅಧಿಕಾರಿಗಳು ಅವುಗಳನ್ನು ರೈಲ್ವೆ ಪೊಲೀಸರ ನೆರವು ಪಡೆದು ತೆರವುಗೊಳಿಸುತ್ತಿದ್ದಾರೆ. ಅದರೆ ಒತ್ತುವರಿ ಪ್ರದೇಶ ವಿವಾದಿತ ಜಾಗವಾಗಿದ್ದರೆ, ಅಲ್ಲಿ ಶಾಶ್ವತ ಕಟ್ಟಡ ನಿರ್ಮಾಣವಾಗಿದ್ದರೆ ಅವುಗಳ ತೆರವಿಗೆ ರೈಲ್ವೆಯು ಸ್ಥಳೀಯ ರಾಜ್ಯ ಸರ್ಕಾರಗಳ ನೆರವಿನೊಂದಿಗೆ ಕಾನೂನು ಹೋರಾಟ ನಡೆಸುವ ಮೂಲಕ ಜಾಗ ತೆರವಿಗೆ ಪ್ರಯತ್ನ ಮಾಡುತ್ತಿದೆ.
ಆದರೆ ‘ರಾಜ್ಯವಾರು ರೈಲ್ವೆ ಜಾಗ ಒತ್ತುವರಿ ಬಗ್ಗೆ ಮಾಹಿತಿ ಇಲ್ಲ’ ಎಂದು ರೈಲ್ವೆ ಸಚಿವರು ಲೋಕಸಭೆಗೆ ಇತ್ತೀಚೆಗೆ ಹೇಳಿದ್ದರು.

ಒತ್ತುವರಿಗೆ ಪ್ರಮುಖ ಕಾರಣ ಏನು?

ಗ್ರಾಮಗಳಿಂದ ನಗರಗಳಿಗೆ ಮತ್ತು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಲಸೆ ಬರುವ ಕಡುಬಡವರು ಇಂಥ ಪ್ರದೇಶಗಳಲ್ಲಿ ನೆಲೆ ಕಾಣುತ್ತಾರೆ. ಒಮ್ಮೆ ನೆಲೆ ಕಂಡುಕೊಂಡ ಮೇಲೆ ಅವರನ್ನು ಅಷ್ಟುಸುಲಭವಾಗಿ ತೆರವುಗೊಳಿಸುವುದು ಕಷ್ಟ. ಕಾರಣ ಇಂಥ ಪ್ರತಿ ಒತ್ತುವರಿ ಮೇಲೆ ರೈಲ್ವೆ ಅಧಿಕಾರಿಗಳು ನಿಗಾ ಇಟ್ಟಿರುವುದಿಲ್ಲ. ಹೀಗೆ ಒತ್ತುವರಿಯಾದ ಪ್ರದೇಶಗಳಲ್ಲಿ ಇದೀಗ ಲಕ್ಷಾಂತರ ಜನರು ವಾಸಿಸುತ್ತಿದ್ದಾರೆ.

ಜಾಗ ತೆರವಿಗೆ ಏನು ಅಡ್ಡಿ?

ಸ್ಥಳೀಯ ರಾಜಕೀಯ ನಾಯಕರ ಕೃಪಾಕಟಾಕ್ಷ, ವೋಟ್‌ಬ್ಯಾಂಕ್‌ ರಾಜಕೀಯ ಒತ್ತುವರಿ ತೆರವಿಗೆ ಪ್ರಮುಖವಾಗಿ ಅಡ್ಡಿಯಾಗಿದೆ. ಜೊತೆಗೆ ರೈಲ್ವೆಯ ನಿರ್ಲಕ್ಷ್ಯ ಕೂಡಾ ಕಾರಣವಾಗಿದೆ. ಕಳೆದ ವರ್ಷದ ರೈಲ್ವೆ ಒತ್ತುವರಿ ಪ್ರಕರಣವೊಂದರ ವೇಳೆ ರೈಲ್ವೆ ಮೇಲೆ ತೀವ್ರ ಕಿಡಿಕಾರಿದ್ದ ಸುಪ್ರೀಂಕೋರ್ಚ್‌, ಇಂಥ ಒತ್ತುವರಿಗೆ ಸ್ವತಃ ಇಲಾಖೆಯೇ ಪ್ರಮುಖ ಕಾರಣ. ಕಾರಣ ಇಂಥ ಪ್ರಕರಣಗಳ ಮೇಲೆ ಅವರು ನಿಗಾ ಇಡುತ್ತಿಲ್ಲ. ಇದು ಕಳೆದ 75 ವರ್ಷಗಳಿಂದ ದೇಶದಲ್ಲಿನ ಕಟುವಾಸ್ತವ ಎಂದಿತ್ತು. ಜೊತೆಗೆ ತೆರವು ಪ್ರಕರಣವೊಂದರ ತೀರ್ಪಿನ ವೇಳೆ ತನ್ನ ಜಾಗವನ್ನು ಬಿಡಿಸಿಕೊಳ್ಳುವ ವೇಳೆ ರೈಲ್ವೆ, ತೆರವಾದ ವ್ಯಕ್ತಿಗಳಿಗೆ ಸೂಕ್ತ ಆರ್ಥಿಕ ಪರಿಹಾರ ಮತ್ತು ಪುನಾವಸತಿ ಕಲ್ಪಿಸಬೇಕು ಎಂದು ಸೂಚಿಸಿದೆ. ಲಕ್ಷಾಂತರ ಜನರಿಗೆ ಆರ್ಥಿಕ ಪರಿಹಾರ, ಪುನಾವಸತಿ ಕಲ್ಪಿಸುವುದು ರೈಲ್ವೆ ಪಾಲಿಗೆ ಸಂಕಷ್ಟದ ವಿಷಯ. ಇದು ರೈಲ್ವೆಯ ಸಮಸ್ಯೆಯನ್ನು ಹೆಚ್ಚಿಸಿದೆ.

ಒತ್ತುವರಿ ಏಕೆ ದೊಡ್ಡ ಸಮಸ್ಯೆ?

ಒತ್ತುವರಿಯಾಗಿರುವ ಬಹುತೇಕ ಜಾಗ ರೈಲ್ವೆ ನಿಲ್ದಾಣದ ಸಮೀಪವೇ ಇವೆ. ಇದು ರೈಲ್ವೆಗೆ ಆರ್ಥಿಕವಾಗಿ ಲಾಭ ತಂದುಕೊಡಬಹುದಾದ ಸ್ಥಳಗಳು. ಇವುಗಳ ಒತ್ತುವರಿ ಇಲಾಖೆಗೆ ಆರ್ಥಿಕ ನಷ್ಟ ಉಂಟು ಮಾಡುತ್ತಿದೆ. ಮತ್ತೊಂದೆಡೆ ರೈಲ್ವೆ ಹಳಿಯ ಪಕ್ಕವೇ ಲಕ್ಷಾಂತರ ಜನರ ವಾಸ ಅವರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಜೊತೆಗೆ ಹಳಿಗಳ ಮೇಲೆ ಸದಾಕಾಲ ಜನರ ಸಂಚಾರ ರೈಲುಗಳ ಓಡಾಟದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ರೈಲ್ವೆ ಜಾಗದಲ್ಲಿ 'ಅಕ್ರಮವಾಗಿ' ನೆಲೆಸಿದ್ದವರಿಗೆ ಸುಪ್ರೀಂ ರಿಲೀಫ್‌

ಮನೆ ನಿರ್ಮಿಸುವ ಯೋಜನೆ

ಒತ್ತುವರಿಯಾದ ಜಾಗವನ್ನು ತೆರವುಗೊಳಿಸಿ ಅವರಿಗೆ ಸಮೀಪದಲ್ಲೇ ಅಗ್ಗದ ದರ ಮನೆ ನಿರ್ಮಿಸುವ ಯೋಜನೆಯನ್ನು ಹಲವು ವರ್ಷಗಳ ಹಿಂದೆಯೇ ರೈಲ್ವೆ ಯೋಜಿಸಿತ್ತು. ಮುಂಬೈ, ಸೆಲ್ಡಾ, ಸಿಲಿಗುರಿ, ತಿರುಚಿರಾಪಳ್ಳಿ ಮತ್ತು ದೆಹಲಿಯಲ್ಲಿ ಸುಖಿ ಗೃಹ ಹೆಸರಿನ ಯೋಜನೆ ಜಾರಿಗೆ ಇಲಾಖೆ ನಿರ್ಧರಿಸಿತ್ತು.

ಗೋವಾ ರಾಜ್ಯಕ್ಕಿಂತ ಹೆಚ್ಚಿನ ಭೂಮಿ ರೈಲ್ವೆ ಬಳಿ!

ಭಾರತೀಯ ರೈಲ್ವೆ ಬಳಿ ಒಟ್ಟು 10.65 ಲಕ್ಷ ಎಕರೆ ಭೂಮಿ ಇದೆ. ಇದು ಗೋವಾದ ಒಟ್ಟು ಭೂಗಕ್ಕಿಂತಲೂ ಶೇ.22ರಷ್ಟುಹೆಚ್ಚು ಎಂಬುದು ವಿಶೇಷ. ದೇಶಾದ್ಯಂತ 31000 ಸ್ಥಳಗಳಲ್ಲಿ ಈ ಭೂಮಿ ಇದೆ. ಈ ಪೈಕಿ 2011 ಎಕರೆ ಭೂಮಿ ಒತ್ತುವರಿಯಾಗಿದೆ.

ಯಾವ ವಲಯದಲ್ಲಿ ಹೆಚ್ಚು ಒತ್ತುವರಿ?
ಉತ್ತರ ವಲಯ 220 ಹೆಕ್ಟೇರ್‌
ಈಶಾನ್ಯ ವಲಯ 167 ಹೆಕ್ಟೇರ್‌
ಆಗ್ನೇಯ ವಲಯ 162 ಹೆಕ್ಟೇರ್‌