ಕಾಶ್ಮೀರದ ಅನಂತ್‌ನಾಗ್‌ನ ಕೋಕರ್‌ನಾಗ್‌ನಲ್ಲಿ ಎನ್‌ಕೌಂಟರ್‌ ಸತತ ಮೂರನೇ ದಿನವೂ ಮುಂದುವರಿದಿದೆ. ಮೊದಲ ದಿನದ ಎನ್‌ಕೌಂಟರ್‌ನಲ್ಲಿ ಸಾವು ಕಂಡಿದ್ದ 19 ರಾಷ್ಟ್ರೀಯ ರೈಫಲ್ಸ್‌ನ ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ ಅವರ ಅಂತ್ಯಸಂಸ್ಕಾರ ಶುಕ್ರವಾರ ನೆರವೇರಿದೆ. 

ನವದೆಹಲಿ (ಸೆ.15): ಆರು ವರ್ಷದ ಹುಡುಗನಿಗೆ ತನ್ನ ತಂದೆಯನ್ನು ಬಾಕ್ಸ್‌ನಲ್ಲಿ ಯಾಕೆ ಇಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ಇಲ್ಲಿಯವರೆಗೂ ಅಪ್ಪ ಏನು ಮಾಡ್ತಾ ಇದ್ರೂ ಅನ್ನೋದು ಗೊತ್ತಿರಲಿಲ್ಲ. ಆದರೆ, ಸೇನಾ ಸಮವಸ್ತ್ರದಲ್ಲಿದ್ದ ಆ ಹುಡುಗ ತಂದೆಯ ಶವಪೆಟ್ಟಿಗೆಗೆ ಕೊನೆಯ ಬಾರಿಗೆ ತನಗೆ ಗೊತ್ತಿರುವ ರೀತಿಯಲ್ಲಿ ಸೆಲ್ಯುಟ್‌ ಹೊಡೆದಾಗ ಅಲ್ಲಿದ್ದವರ ಕಣ್ಣಾಲಿಗಳು ತೇವವಾಗಿದ್ದವು. ಈ ಕ್ಷಣಗಳು ದಾಖಲಾಗಿದ್ದು ಪಂಜಾಬ್‌ನ ಮೊಹಾಲಿ ಜಿಲ್ಲೆಯ ಮಲ್ಲನ್‌ಪುರದಲ್ಲಿ. ಜಮ್ಮು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಕೋಕರ್‌ನಾಗ್‌ನಲ್ಲಿ ಪಾಪಿ ಪಾಕಿಸ್ತಾನದ ಭಯೋತ್ಪಾದಕ ಜೊತೆಗಿನ ಎನ್‌ಕೌಂಟ್‌ ಸತತ ಮೂರನೇ ದಿನ ಮುಂದುವರಿದಿದೆ. ಎನ್‌ಕೌಂಟರ್‌ನ ಮೊದಲ ದಿನ ಭಯೋತ್ಪಾದಕರ ಗುಂಡೇಟಿಗೆ 19 ರಾಷ್ಟ್ರೀಯ ರೈಫಲ್ಸ್‌ನ ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ ಸಾವು ಕಂಡಿದ್ದರು. ಅವರೊಂದಿಗೆ ಮೇಜರ್‌ ಆಶೀಶ್‌ ಧೋನ್‌ಚಾಕ್‌ ಹಾಗೂ ಜಮ್ಮು ಕಾಶ್ಮೀರ ಪೊಲೀಸ್‌ ಡಿವೈಎಸ್‌ಪಿ ಹಿಮಾಯೂನ್‌ ಮುಜಾಮಿಲ್‌ ಭಟ್‌ ಕೂಡ ಸಾವು ಕಂಡಿದ್ದರು. ಶುಕ್ರವಾರ ಮನ್‌ಪ್ರೀತ್‌ ಸಿಂಗ್‌ ಅವರ ಪಾರ್ಥಿವ ಶರೀರ ಪಂಜಾಬ್‌ನ ಅವರ ಸ್ವಗ್ರಾಮಕ್ಕೆ ಬಂದಾಗ ಇಡೀ ಪ್ರದೇಶ ಭಾವುಕವಾಗಿತ್ತು. ಅವರ ಸೇನಾ ಸಮವಸ್ತ್ರದಲ್ಲಿಯೇ ನಿಂತಿದ್ದ ಅವರ ಆರು ವರ್ಷದ ಪುತ್ರ ಹಾಗೂ ಎರಡು ವರ್ಷದ ಆತನ ತಂಗಿ ಸೆಲ್ಯುಟ್‌ ಹೊಡೆದು ತಂದೆಗೆ ಬೀಳ್ಕೊಟ್ಟರು. ಬಹುಶಃ ತಮ್ಮ ಕುಟುಂಬಕ್ಕೆ ಆಗಿರುವಂಥ ಗಾಯ ಎಷ್ಟು ಗಾಢವಾದದ್ದು ಎನ್ನುವ ಸಣ್ಣ ಅರಿವೂ ಆ ಪುಟ್ಟ ಮಕ್ಕಳಿಗೆ ಇದ್ದಿರಲಿಲ್ಲ. ಬಳಿಕ ಇಬ್ಬರು ಮಕ್ಕಳನ್ನು ಅವರ ಸಂಬಂಧಿಗಳು ಎತ್ತಿಕೊಂಡರೆ, ಮನ್‌ಪ್ರೀತ್‌ ಸಿಂಗ್‌ ಅವರ ಅಂತಿಮ ಯಾತ್ರೆಗೆ ಇಡೀ ಮಲ್ಲನ್‌ಪುರ ಅಲ್ಲಿ ನೆರೆದಿತ್ತು.

ಮನ್‌ಪ್ರೀತ್‌ ಸಿಂಗ್‌ ಅವರ ಪತ್ನಿ ಜಗ್‌ಮೀತ್‌ ಕೌರ್‌, ಅವರ ತಾಯಿ ಹಾಗೂ ಕುಟುಂಬದ ಇತರರನ್ನು ಸಮಾಧಾನ ಮಾಡುವುದೇ ಕಷ್ಟವಾಗಿತ್ತು. ಕಣ್ಣೀರಿಡುತ್ತಲೇ ಮನ್‌ಪ್ರೀತ್‌ ಸಿಂಗ್‌ ಅವರನ್ನು ಬೀಳ್ಕೊಟ್ಟಿದ್ದಾರೆ. 41 ವರ್ಷದ ಮನ್‌ಪ್ರೀತ್‌ ಸಿಂಗ್‌, 19 ರಾಷ್ಟ್ರೀಯ ರೈಫಲ್ಸ್‌ನ ಕಮಾಂಡಿಂಗ್‌ ಆಫೀಸರ್‌ ಆಗಿ ಎನ್‌ಕೌಂಟರ್‌ಅನ್ನು ಮುನ್ನಡೆಸಿದ್ದರು. ಪ್ರತಿಷ್ಠಿತ ಸೇನಾ ಪದಕ (ಶೌರ್ಯ) ಪುರಸ್ಕೃತರಾಗಿದ್ದ ಇವರು, ಬುಧವಾರ ರಾತ್ರಿ ಗುಂಡೇಟಿನಿಂದ ಸಾವನ್ನಪ್ಪಿದರು, ಭಯೋತ್ಪಾದಕರ ಬಗ್ಗೆ ನಿರ್ದಿಷ್ಟ ಮಾಹಿತಿ ಪಡೆದಿದ್ದ ಸೇನೆ ಹಾಗೂ ಜಮ್ಮು ಕಾಶ್ಮೀರ ಪೊಲೀಸ್‌, ಇದಕ್ಕೆ ಪ್ರತಿಕ್ರಿಯೆಯಾಗಿ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭ ಮಾಡಿತ್ತು.
ಬುಧವಾರ ಕಾಶ್ಮೀರ ಕಣಿವೆಯ ಕೊಕೊರೆನಾಗ್ ಪ್ರದೇಶದ ಎತ್ತರದ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ನ ಡಿವೈಎಸ್‌ಪಿ ಹಾಗೂ ಭಾರತೀಯ ಸೇನೆಯ ಕರ್ನಲ್‌ ಹಾಗೂ ಮೇಜರ್‌ ಸಾವು ಕಂಡಿದ್ದರು. 2020ರ ಬಳಿಕ ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ಭಾರತ ಕಳೆದುಕೊಂಡಿದ್ದು ಇದೇ ಮೊದಲ ಬಾರಿಯಾಗಿದೆ.

ಮನ್‌ಪ್ರೀತ್‌ ಸಿಂಗ್‌ ಅವರ ಜೊತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮೇಜರ್‌ ಆಶೀಶ್‌ ಧೋನ್‌ಚಾಕ್‌ ಅವರ ಮೃತದೇಹವನ್ನು ಪಾಣಿಪತ್‌ನ ಸ್ವಗ್ರಾಮಕ್ಕೆ ತರಲಾಗಿದೆ. ಈ ವೇಳೆ ಅವರ ಅಂತಿಮಯಾತ್ರಗೆ ಸ್ಥಳೀ ಸೇನಾಧಿಕಾರಿಗಳು ಹಾಗೂ ಕುಟುಂಬದವರು ಭಾಗಿಯಾಗಿದ್ದರು. ಶುಕ್ರವಾರ ಬೆಳಗ್ಗೆ ಪಾಣಿಪತ್‌ನಲ್ಲಿರುವ ಅವರ ನಿವಾಸಕ್ಕೆ ಮೃತದೇಹವನ್ನು ತರಲಾಗಿತ್ತು. ಬಳಿಕ ಸೇನಾ ವಾಹನದಲ್ಲಿಯೇ ಪಾರ್ಥೀವವನ್ನು ಬಿಂಝೋಲ್‌ ಗ್ರಾಮಕ್ಕೆ ತರಲಾಗಿತ್ತು. ಬಳಿಕ ಗನ್‌ ಸೆಲ್ಯೂಟ್‌ ನೀಡಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಅಂತ್ಯಕ್ರಿಯೆಯ ಮೆರವಣಿಗೆಯು ಅವರ ಬಿಂಜೋಲ್ ಗ್ರಾಮವನ್ನು ತಲುಪಲು ಪಟ್ಟಣದಲ್ಲಿರುವ ಮೇಜರ್ ಅವರ ಮನೆಯಿಂದ ಸುಮಾರು ಎಂಟು ಕಿ.ಮೀ ದೂರವನ್ನು ಕ್ರಮಿಸಲು ಸುಮಾರು ಮೂರು ಗಂಟೆಗಳನ್ನು ತೆಗೆದುಕೊಂಡಿತು. ತಮ್ಮೂರಿನ ಸೈನಿಕನಿಗೆ ಜನ ಕಣ್ಣೀರಿನ ವಿದಾಯ ಹೇಳಲು ದೊಡ್ಡ ಮಟ್ಟದಲ್ಲಿ ಜಮಾಯಿಸಿದ್ದರು.

ಅನಂತ್‌ನಾಗ್‌ ಎನ್‌ಕೌಂಟರ್‌, ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ ವೀರಮರಣ

ಬುಧವಾರ ಬುದ್ಗಾಮ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಉಪ ಅಧೀಕ್ಷಕ 33 ವರ್ಷದ ಹಿಮಯುನ್ ಮುಜಾಮಿಲ್ ಭಟ್ ಅವರ ಅಂತ್ಯಕ್ರಿಯೆಯಲ್ಲೂ ದೊಡ್ಡ ಮಟ್ಟದ ಜನ ಜಮಾಯಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಅವರು ಪೊಲೀಸ್ ಅಧಿಕಾರಿಗೆ ಗೌರವ ಸಲ್ಲಿಸಿದರು.

ಕಾಶ್ಮೀರದಲ್ಲಿ ಉಗ್ರರ ಎನ್‌ಕೌಂಟರ್; ಕರ್ನಲ್, ಮೇಜರ್, ಪೊಲೀಸ್ ಅಧಿಕಾರಿ ಹುತಾತ್ಮ!

Scroll to load tweet…