ಬ್ಯಾಂಕ್ ಲಾಕರಲ್ಲಿತ್ತು 530 ಗ್ರಾಂ ಶಿವಲಿಂಗ ತಂಜಾವೂರಲ್ಲಿ ಪತ್ತೆ, ಪೊಲೀಸರಿಂದ ತನಿಖೆ .500 ಕೋಟಿ ಬೆಲೆಯ ‘ಪಚ್ಚೆ ಶಿವಲಿಂಗ’ ವಶಕ್ಕೆ
ತಂಜಾವೂರು(ಜ.02): ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿರುವ ತಮಿಳುನಾಡಿನ ಸಿಐಡಿ ಪೊಲೀಸರು, ವ್ಯಕ್ತಿಯೊಬ್ಬರು ಬ್ಯಾಂಕ್ ಲಾಕರ್‌ನಲ್ಲಿ ಅಡಗಿಸಿಟ್ಟಿದ್ದ ಅಂದಾಜು 500 ಕೋಟಿ ರು. ಮೌಲ್ಯದ ಪುರಾತನ ಪಚ್ಚೆ ಶಿವಲಿಂಗವನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆಗಳ ಅನ್ವಯ ಇದನ್ನು ತಮಿಳುನಾಡಿನ ಪ್ರಾಚೀನ ದೇಗುಲದಿಂದ ಕದ್ದಿರುವ ಶಂಕೆ ಇದ್ದು, ಆ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಇಲ್ಲಿನ ಮನೆಯೊಂದರಲ್ಲಿ ಪುರಾತನ ಶಿವಲಿಂಗವಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಶನಿವಾರ ತಂಜಾವೂರಿನ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಆದರೆ ಮನೆಯಲ್ಲಿ ಅಂಥ ಯಾವುದೇ ಶಿವಲಿಂಗ ಪತ್ತೆಯಾಗಿರಲಿಲ್ಲ. ಆದರೆ ತೀವ್ರ ವಿಚಾರಣೆ ಬಳಿಕ ಮನೆಯ ಮಾಲೀಕ ಸಾಮಿಯಪ್ಪನ್‌ರ ಪುತ್ರ ಅರುಣ್ ಎಂಬಾತ, ತಮ್ಮ ತಂದೆ ಬ್ಯಾಂಕ್ ಲಾಕರ್‌ನಲ್ಲಿ ಶಿವಲಿಂಗ ಇಟ್ಟಿರುವ ಮಾಹಿತಿ ನೀಡಿದ್ದ. ಅಲ್ಲದೆ ಇದು ಅವರಿಗೆ ಹೇಗೆ ಸಿಕ್ಕಿತು ಎಂಬುದರ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದ.
ಈ ಮಾಹಿತಿ ಆಧರಿಸಿ ಬ್ಯಾಂಕ್ ಲಾಕರ್ ತೆಗೆದಾಗ ಅಲ್ಲಿ 8 ಸೆಂ.ಮೀ. ಎತ್ತರ, 530 ಗ್ರಾಂ ತೂಕವಿರುವ ಪಚ್ಚೆಯ ಅಪರೂಪದ ಶಿವಲಿಂಗ ಪತ್ತೆಯಾಗಿದೆ. ಬಳಿಕ ವಿಗ್ರಹವನ್ನು ರತ್ನಶಾಸ್ತ್ರಜ್ಞರ ಬಳಿ ಕೊಂಡೊಯ್ಯಲಾಗಿದ್ದು ಅವರು ಕೂಡಾ ಇದು ಪಚ್ಚೆಯ ಶಿವಲಿಂಗ ಎಂದು ಖಚಿತಪಡಿಸಿದ್ದಾರೆ. ಜೊತೆಗೆ ಇದರ ಮೌಲ್ಯ 500 ಕೋಟಿ ರು. ಆಗಬಹುದು ಎಂದು ಅಂದಾಜಿಸಿದ್ದಾರೆ.
ಈ ನಡುವೆ ಶಿವಲಿಂಗ ಅಡಗಿಸಿಟ್ಟಿದ್ದ ಸಾಮಿಯಪ್ಪನ್, ಇದು ತನಗೆ ಸೇರಿದ್ದು ಎಂದು ಖಚಿತಪಡಿಸುವ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ ಇದು ಆತನ ಕೈಸೇರಿದ್ದು ಹೇಗೆ ಎಂಬುದು ಸೇರಿದಂತೆ ನಾನಾ ವಿಷಯಗಳ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ. ವೈಜ್ಞಾನಿಕ ಆಧಾರಗಳ ಮೂಲಕ ಇದು ಯಾವ ದೇಗುಲಕ್ಕೆ ಸೇರಿರಬಹುದು ಎಂಬುದರ ಪತ್ತೆ ನಡೆಸಿದ್ದೇವೆ ಎಂದು ಸಿಐಡಿ ಪೊಲೀಸರು ಹೇಳಿದ್ದಾರೆ.
ಅನುಮಾನ:
ಆದರೆ ಭಾರತದಲ್ಲಿ 80ರ ದಶಕದಿಂದಲೂ ದೇವಸ್ಥಾನಗಳು ಮತ್ತು ಮಠಗಳಿಂದ ಲಿಂಗಗಳನ್ನು ಕಳವು ಮಾಡುವ ಕೃತ್ಯಗಳು ನಡೆಯುತ್ತಿದ್ದು, ಈ ಲಿಂಗ 500 ಕೋಟಿ ಮೌಲ್ಯದ್ದು ಎಂಬುದು ಹಾಸ್ಯಾಸ್ಪದ ಎಂದು ಇಂಡಿಯಾ ಪ್ರೈಡ್ ಪ್ರಾಜೆಕ್ಟ್ ಸಂಸ್ಥಾಪಕ ಎಸ್. ವಿಜಯ್ ಕುಮಾರ್ ಹೇಳಿದ್ದಾರೆ.
