ಆನೆ ಮರಿಯೊಂದು ಸಂಪೂರ್ಣ ಅಸ್ವಸ್ಥಗೊಂಡ ಕಾಡಿನಲ್ಲಿ ಬಿದ್ದಿರುವುದು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಚಿಕಿತ್ಸೆ ಆರಂಭಿಸಿತ್ತು. ಆದರೆ ಆನೆ ಮರಿ ಆರೋಗ್ಯ ಕ್ಷೀಣಿಸಿದ ಕಾರಣ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಗುಜರಾತ್‌ಗೆ ವಂತಾರಾಗೆ ಏರ್‌ಲಿಫ್ಟ್ ಮಾಡಲಾಗಿದೆ.

ತಿರುವನಂತಪುರಂ (ನ.06) ಅರಣ್ಯದಲ್ಲಿ ತೀವ್ರ ಅನಾರೋಗ್ಯದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಆನೆ ಮರಿಯನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ತನ್ನ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಆರಂಭಿಸಿದ್ದಾರೆ. ಆದರೆ ಆನೆ ಮರಿಯ ಆರೋಗ್ಯ ಕ್ಷೀಣಿಸುತ್ತಾ ಸಾಗಿದೆ. 18 ತಿಂಗಳ ಆನೆ ಮರಿ ಉಳಿಸಲು ಅರಣ್ಯ ಇಲಾಖೆ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಗುಜರಾತ್‌ನಲ್ಲಿರುವ ಅನಂತ್ ಅಂಬಾನಿಯ ವಂತಾರಾಗೆ ಏರ್‌ಲಿಫ್ಟ್ ಮಾಡಿದೆ. ವಿಮಾನದ ಮೂಲಕ ಕೇರಳದಿಂದ ಗುಜರಾತ್‌ನ ವಂತಾರಾಗೆ ಆನೆ ಮರಿಯನ್ನು ಏರ್‌ಲಿಫ್ಟ್ ಮಾಡಿದ್ದಾರೆ.

ಜಾಮ್‌ನಗರದಲ್ಲಿರುವ ರಿಲಯನ್ಸ್ ವಂತಾರಾ ವನ್ಯಜೀವಿ ಪುನರ್ವತಸಿ ಕೇಂದ್ರಕ್ಕೆ ಆನೆ ಮರಿಯನ್ನು ವಿಮಾನ ಮೂಲಕ ಕರೆದೊಯ್ಯಲಾಗಿದೆ. ಭಾರತದ ವನ್ಯಜೀವಿ ಆರೈಕೆ ಇತಿಹಾಸದಲ್ಲಿ ಕೇರಳದಿಂದ ವಂತಾರಾಗೆ ಇದೇ ಮೊದಲ ಬಾರಿಗೆ ಆನೆ ಮರಿಯನ್ನು ಏರ್‌ಲಿಫ್ಟ್ ಮೂಲಕ ಕರೆದೊಯ್ಯಲಾಗಿದೆ. ಇದು ಕೇರಳ ಅರಣ್ಯ ಇಲಾಖೆ ಕೈಗೊಂಡು ಮಾನವೀಯ ಹಾಗೂ ಹೃದಯಸ್ವರ್ಶಿ ನಿರ್ಧಾರವಾಗಿದೆ.

ಮಾಯಾ ಆನೆ ಮರಿಗೆ ಚೇತರಿಕೆಗೆ ಶತಪ್ರಯತ್ನ

ಕೆಲವೇ ತಿಂಗಳ ಹಿಂದೆ ವಯನಾಡು ಅರಣ್ಯ ಗಡಿ ಭಾಗದಲ್ಲಿ ತಾಯಿಯಿಂದ ಬೇರ್ಪಟ್ಟ ಆನೆ ಮರಿಯನ್ನು ಅರಣ್ಯ ಇಲಾಖೆ ರಕ್ಷಿಸಿತ್ತು. ಮಾಯಾ ಎಂದು ಹೆಸರಿಡಲಾಗಿತ್ತು. ಕೊಯ್ಯಂ ಆನೆ ಪುನರ್ವಸತಿ ಕೇಂದ್ದಲ್ಲಿ ಆರೈಕೆ ಮಾಡುತ್ತಿದ್ದ ವೇಳೆ ಆನೆಗೆ ಕರುಳಿನ ಸೋಂಕು ಕಾಣಿಸಿಕೊಂಡಿತ್ತು. ಜೊತೆಗೆ ಅಪೌಷ್ಠಿಕತೆ, ಯಕೃತ್ ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಂಡಿತ್ತು. ಕೇರಳದ ವೈದ್ಯಕೀಯ ತಂಡ ಶಕ್ತಿ ಮೀರಿ ಪ್ರಯತ್ನಿಸಿದರೂ ಆನೆ ಮರೆಯ ಆರೋಗ್ಯ ಚೇತರಿಕೆ ಕಾಣಲಿಲ್ಲ. ತೀವ್ರ ಅಸ್ವಸ್ಥಗೊಂಡ ಆನೆ ಮರಿ ಆರೋಗ್ಯ ಕ್ಷಣದಿಂದ ಕ್ಷಣಕ್ಕೆ ಕ್ಷೀಣಿಸುತ್ತಿತ್ತು. ಹೆಚ್ಚಿನ ಚಿಕಿತ್ಸೆ ಕೊರತೆ ಕಾರಣ ವನ್ಯಜೀವಿ ತಜ್ಞರ ಸೂಚನೆಯಂತೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವ ಅನಂತ್ ಅಂಬಾನಿಯ ವಂತಾರಾ ಕೇಂದ್ರಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು.

ವಿಮಾನ ಮೂಲಕ ಏರ್‌ಲಿಫ್ಟ್

ಆನೆ ಮರಿ ಆರೋಗ್ಯ ತೀವ್ರವಾಗಿ ಹದಗೆಟ್ಟಿರುವ ಕಾರಣ ಕೇರಳ ಅರಣ್ಯ ಇಲಾಖೆ ತಕ್ಷಣವೇ ವಿಮಾನದ ಮೂಲಕ ಗುಜರಾತ್‌ನ ಜಾಮ್‌ನಗರದ ವಂತಾರಗೆ ಏರ್‌ಲಿಫ್ಟ್ ಮಾಡಲು ಸೂಚಿಸಿತ್ತು. ಇದರಂತೆ ಕೊಚ್ಟಿ ವಿಮಾನ ನಿಲ್ದಾಣದಿಂದ ವಿಶೇಷ ಸರಕು ಸಾಗಾಣೆ ವಿಮಾನದ ಮೂಲಕ ಮಾಯ ಆನೆ ಮರಿಯನ್ನು ಶಿಫ್ಟ್ ಮಾಡಲಾಗಿದೆ. ವಂತಾರಾ ವೈದ್ಯಕೀಯ ಹಾಗೂ ಲಾಜಿಸ್ಟಿಕ್ ತಂಡದ ನೆರವಿನೊಂದಿಗೆ ಮಾಯಾ ಆನೆ ಮರಿಯನ್ನು ವಿಮಾನದ ಮೂಲಕ ಏರ್‌ಲಿಫ್ಟ್ ಮಾಡಲಾಗಿದೆ. ಇದೀಗ ಮಾಯಾ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಲವರು ಪ್ರಾರ್ಥಿಸಿದ್ದಾರೆ.

Scroll to load tweet…