57 ರಾಜ್ಯಸಭಾ ಸ್ಥಾನಗಳಿಗೆ ಜೂ.10ರಂದು ಚುನಾವಣೆ
* 22 ಸ್ಥಾನದಲ್ಲಿ ಗೆದ್ದರೆ ಬಿಜೆಪಿಗೆ ಬಹುಮತ
* 57 ರಾಜ್ಯಸಭಾ ಸ್ಥಾನಗಳಿಗೆ ಜೂ.10ರಂದು ಚುನಾವಣೆ
ನವದೆಹಲಿ(ಮೇ.13): ಕರ್ನಾಟಕ ಸೇರಿದಂತೆ 15 ರಾಜ್ಯಗಳ 57 ರಾಜ್ಯಸಭೆ ಸ್ಥಾನಗಳಿಗೆ ಜೂ.10 ಚುನಾವಣೆ ನಡೆಯಲಿದೆ. 2022ರ ಜೂನ್‌ನಿಂದ ಆಗಸ್ಟ್‌ವರೆಗೆ 57 ರಾಜ್ಯಸಭೆ ಸ್ಥಾನಗಳು ತೆರವಾಗಲಿವೆ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ.
ಹಾಲಿ ಬಿಜೆಪಿ 101 ಸ್ಥಾನವನ್ನು ರಾಜ್ಯಸಭೆಯಲ್ಲಿ ಹೊಂದಿದ್ದು ಬಹುಮತಕ್ಕೆ 123 ಸ್ಥಾನ ಬೇಕು. ಹೀಗಾಗಿ 57ರ ಪೈಕಿ 22 ಸ್ಥಾನದಲ್ಲಿ ಗೆದ್ದರೆ ಬಹುಮತ ಸಂಪಾದಿಸಲಿದೆ.
ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್, ಜೈರಾಮ್ ರಮೇಶ್, ಕೆ.ಸಿ.ರಾಮಮೂರ್ತಿ ಹಾಗೂ ದಿವಂಗತ ಆಸ್ಕರ್ ಫರ್ನಾಂಡಿಸ್ ಅವರ ಸ್ಥಾನಗಳು ಜೂ.30ರಂದು ತೆರವಾಗಲಿವೆ. ಉತ್ತರ ಪ್ರದೇಶದಿಂದ ಅತಿ ಹೆಚ್ಚು 11 ಸಂಸದರು ನಿವೃತ್ತರಾಗಲಿದ್ದಾರೆ. ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ 6, ಬಿಹಾರದಲ್ಲಿ 5, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಕರ್ನಾಟಕದಲ್ಲಿ ತಲಾ 4, ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿ 3, ತೆಲಂಗಾಣ, ಛತ್ತೀಸ್‌ಗಢ, ಪಂಜಾಬ್, ಹರ್ಯಾಣ ಮತ್ತು ಜಾರ್ಖಂಡ್‌ನಿಂದ 2, ಉತ್ತರಾಖಂಡದಿಂದ 1 ಸ್ಥಾನಗಳು ತೆರವಾಗಲಿವೆ.
ಚುನಾವಣೆ ನಡೆಯಲಿರುವ ಜೂ.10ರ ಸಾಯಂಕಾಲವೇ ಮತ ಎಣಿಕೆ ನಡೆಯಲಿದೆ. ಹೊಸದಾಗಿ ಆಯ್ಕೆಯಾಗುವ ಸಂಸದರು ರಾಷ್ಟ್ರಪತಿ ಚುನಾವಣೆಯಲ್ಲಿ ಮತಚಲಾಯಿಸುವ ಸಾಧ್ಯತೆ ಇದೆ.