ಕಾಂಗ್ರೆಸ್‌ ಧೋರಣೆ ಬಗ್ಗೆ ನಿತೀಶ್ ಕಿಡಿ. ಕಾಂಗ್ರೆಸ್ ಇಂಡಿಯಾ ಕೂಟದತ್ತ ಗಮನ ಹರಿಸುತ್ತಿಲ್ಲ .ಕೇವಲ ಪಂಚರಾಜ್ಯ ಚುನಾವಣೆ ಮೇಲೆ ಅದರ ಗಮನ ಎಂದು ಆಕ್ರೋಶ ಅಖಿಲೇಶ್‌ ಬಳಿಕ ಇನ್ನೊಬ್ಬ ನಾಯಕನ ಅಪಸ್ವರ.

ಪಟನಾ (ಅ.3): ಕಾಂಗ್ರೆಸ್‌ ಪಕ್ಷವು ಇಂಡಿಯಾ ಕೂಟದ ಬಗ್ಗೆ ಗಮನ ಹರಿಸದೇ ಕೇವಲ ಪಂಚರಾಜ್ಯ ಚುನಾವಣೆಗಳ ಮೇಲೆ ತನ್ನ ಗಮನ ಕೇಂದ್ರೀಕರಿಸಿರುವುದು ಕಳವಳಕಾರಿ ಸಂಗತಿ ಎಂದು ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್‌ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕೂಟದ ಬಗ್ಗೆ ಎಸ್ಪಿ ನಾಯಕ ಅಖಿಲೇಶ್‌ ಯಾದವ್‌ ಬಳಿಕ ಇನ್ನೊಬ್ಬ ನಾಯಕ ಅಪಸ್ವರ ಎತ್ತಿದಂತಾಗಿದೆ.

I.N.D.I.A ಮೈತ್ರಿಕೂಟಕ್ಕೆ ಬಿಗ್‌ ಶಾಕ್! ಎಸ್‌ಪಿ ನಾಯಕ ಅಖಿಲೇಶ್ ಯಾದವ್‌ ಗುಡ್‌ಬೈ?

ಸಿಪಿಐ ಏರ್ಪಡಿಸಿದ್ದ ‘ಬಿಜೆಪಿ ತೊಲಗಿಸಿ ರಾಷ್ಟ್ರವನ್ನು ರಕ್ಷಿಸಿ’ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ನಿತೀಶ್‌, ‘ಇಂಡಿಯಾ ಕೂಟದ ನಾಯಕತ್ವ ಕಾಂಗ್ರೆಸ್‌ ವಹಿಸಿಕೊಳ್ಳಲು ಸರ್ವಾನುಮತ ಒಪ್ಪಿಗೆ ನೀಡಲಾಗಿತ್ತು. ಆದರೆ ಕಾಂಗ್ರೆಸ್‌ಗೆ ಆ ಕುರಿತು ಗಂಭೀರವಾಗಿ ಆಲೋಚಿಸುವಂತೆ ತೋರುತ್ತಿಲ್ಲ. ಕೂಟದ ಸಭೆಗಳನ್ನು ಆಯೋಜಿಸುವ ಬದಲು ಆ ಪಕ್ಷ ತನ್ನ ಗಮನವನ್ನು ಪಂಚರಾಜ್ಯ ಚುನಾವಣೆಗಳಲ್ಲಿ ಕೇಂದ್ರೀಕರಿಸಿದೆ. ಬಹುಶಃ ಪಂಚರಾಜ್ಯ ಚುನಾವಣೆ ಮುಗಿವವರೆಗೂ ಕೂಟದತ್ತ ಕಾಂಗ್ರೆಸ್‌ ಗಮನ ಹರಿಸಲ್ಲ ಎಂದು ಕಾಣುತ್ತದೆ’ ಎಂದು ಕಿಡಿಕಾರಿದರು.

ಎನ್‌ಡಿಎ ಆಡಳಿತ ಕೊನೆಗಾಣಿಸಲು ಇಂಡಿಯಾ ಕೂಟದಲ್ಲಿ ಭಾಗಿ: ಮುಖ್ಯಮಂತ್ರಿ ಚಂದ್ರು

ಮೊದಲ ಬಾರಿಗೆ ಯಶಸ್ವಿಯಾಗಿ ಇಂಡಿಯಾ ಮೈತ್ರಿಕೂಟದ ಚಿಂತನಾ ಸಭೆಯನ್ನು ಆಯೋಜಿಸಿದ್ದ ಖ್ಯಾತಿ ನಿತೀಶ್‌ಗೆ ಇದೆ. ಇತ್ತೀಚೆಗೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ವೇಳೆಯೂ ಕಾಂಗ್ರೆಸ್‌ ಪಕ್ಷ ಎಸ್ಪಿ ಹಾಗೂ ಜೆಡಿಯುಗೆ ಸೀಟು ಬಿಟ್ಟುಕೊಟ್ಟಿರಲಿಲ್ಲ. ಇದು ಇಂಡಿಯಾ ಕೂಟದಲ್ಲಿ ಒಡಕಿಗೆ ನಾಂದಿ ಹಾಡಿತ್ತು.

15 ಸ್ಥಾನ ಇಂಡಿಯಾಗೆ ಬಿಟ್ಟು 65 ಕ್ಷೇತ್ರದಲ್ಲಿ ಎಸ್‌ಪಿ ಸ್ಪರ್ಧೆ
ಲಖನೌ: ಲೋಕಸಭೆ ಚುನಾವಣೆ ವೇಳೆ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ನಡುವೆ ಸೀಟು ಹಂಚಿಕೆ ಒಪ್ಪಂದ ಕಾರ್ಯರೂಪಕ್ಕೆ ಬಂದರೆ 2014ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಒಟ್ಟು 80 ಲೋಕಸಭಾ ಕ್ಷೇತ್ರಗಳ ಪೈಕಿ 65 ಕ್ಷೇತ್ರಗಳಲ್ಲಿ ಸಮಾಜವಾದಿ (ಎಸ್‌ಪಿ) ಪಕ್ಷ ಸ್ಪರ್ಧಿಸಲಿದೆ. ಇದರೊಂದಿಗೆ ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಅಮೇಠಿ ಕ್ಷೇತ್ರವನ್ನೂ ಒಳಗೊಂಡಂತೆ ಉಳಿದ 15 ಸ್ಥಾನಗಳನ್ನು ಇಂಡಿಯಾ ಕೂಟದ ಪಕ್ಷಗಳಿಗೆ ಬಿಟ್ಟುಕೊಡಲಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಸೀಟು ಹಂಚಿಕೆ ಕುರಿತು ಮಾತನಾಡಿದ್ದ ಎಸ್‌ಪಿ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ‘ರಾಜ್ಯದ ಎಲ್ಲಾ 80 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಎಸ್‌ಪಿ ತಯಾರಿದೆ. ಒಂದು ವೇಳೆ ಪಕ್ಷವು ಇಂಡಿಯಾ ಮೈತ್ರಿಕೂಟದೊಂದಿಗೆ ಸ್ಪರ್ಧಿಸಿದರೆ 65ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧಿಸುವುದಿಲ್ಲ’ ಎಂದಿದ್ದರು. ಅಲ್ಲದೇ ರಾಜ್ಯದಲ್ಲಿ ಬಿಜೆಪಿಯನ್ನು ತಾನು ಏಕಾಂಗಿಯಾಗಿ ಎದುರಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ಇದರ ನಡುವೆ ಕಾಂಗ್ರೆಸ್‌ ಹಿರಿಯಣ್ಣನ ಧೋರಣೆ ತಾಳುತ್ತಿದೆ ಎಂದು ಇತ್ತೀಚೆಗೆ ಅವರು ಕಿಡಿಕಾರಿದ್ದರು.