ಎನ್‌ಡಿಎ ಆಡಳಿತ ಕೊನೆಗಾಣಿಸಲು ಇಂಡಿಯಾ ಕೂಟದಲ್ಲಿ ಭಾಗಿ: ಮುಖ್ಯಮಂತ್ರಿ ಚಂದ್ರು
ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರನ್ನು ಮಣಿಸಲು ಎಎಪಿ ಇಂಡಿಯಾ ಮೈತ್ರಿಕೂಟವನ್ನು ಸೇರಿ ಕೊಂಡಿದೆ. ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧವೇ ಎಎಪಿ ಸೆಣಸಾಟ ನಡೆಸಲಿದೆ: ಮುಖ್ಯಮಂತ್ರಿ ಚಂದ್ರು
ರಾಯಚೂರು(ಅ.15): ದೇಶದಲ್ಲಿ ಬಿಜೆಪಿ ಸಾಕಷ್ಟು ಅಕ್ರಮ, ಭ್ರಷ್ಟಾಚಾರದಲ್ಲಿ ತೊಡಗಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಆಡಳಿತಕ್ಕೆ ಕೊನೆಗಾಣಿಸುವ ಉದ್ದೇಶದಿಂದಲೇ ಇಂಡಿಯಾ ಒಕ್ಕೂಟದಲ್ಲಿ ಆಮ್ ಆದ್ಮಿ ಪಾರ್ಟಿ ಭಾಗಿಯಾಗಿದೆ. ಆದರೆ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ವಿರುದ್ಧದ ಸಂಘರ್ಷ ನಿರಂತರವಾಗಿರುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸ್ಪಷ್ಟಪಡಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರನ್ನು ಮಣಿಸಲು ಎಎಪಿ ಇಂಡಿಯಾ ಮೈತ್ರಿಕೂಟವನ್ನು ಸೇರಿ ಕೊಂಡಿದೆ. ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧವೇ ಎಎಪಿ ಸೆಣಸಾಟ ನಡೆಸಲಿದೆ ಎಂದು ತಿಳಿಸಿದರು.
ಎಎಪಿ ರಾಜ್ಯದಲ್ಲಿ ಪರ್ಯಾಯ ಶಕ್ತಿಯಾಗಿ ಉದಯವಾಗಲಿದೆ: ಮುಖ್ಯಮಂತ್ರಿ ಚಂದ್ರು
ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರದಲ್ಲಿಯೇ ಮುಳುಗಿವೆ. ಹಿಂದೆ ಬಿಜೆಪಿ ಕಮಿಷನ್ ದಂಧೆ ನಡೆಸಿತ್ತು. ಇದೀಗ ಕಾಂಗ್ರೆಸ್ ಅದೇ ಹಾದಿ ತುಳಿದಿದೆ. ಜೆಡಿಎಸ್ ಸಹ ಅಕ್ರಮದ ಹೊರತಾಗಿಲ್ಲ ಎಂದು ಹರಿಹಾಯ್ದರು.