Asianet Suvarna News Asianet Suvarna News

ಶೇಷನ್‌ರಂಥವರು ಚುನಾವಣಾ ಆಯೋಗಕ್ಕೆ ಬೇಕು: ಸುಪ್ರೀಂಕೋರ್ಟ್

ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರು ಚುನಾವಣಾ ಆಯುಕ್ತರ ದುರ್ಬಲ ಹೆಗಲಿನ ಮೇಲೆ ಸಂವಿಧಾನ ಅಗಾಧ ಅಧಿಕಾರವನ್ನು ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ದಿವಂಗತ ಟಿ.ಎನ್‌.ಶೇಷನ್‌ ರೀತಿಯ ಬಲಿಷ್ಠ ವ್ಯಕ್ತಿಗಳು ಚುನಾವಣಾ ಆಯೋಗದ ಮುಖ್ಯಸ್ಥರಾಗಬೇಕಾಗಿದೆ ಎಂದು ಹೇಳಿದೆ.

Election Commission needs people like T N Sheshan, Supreme court akb
Author
First Published Nov 24, 2022, 9:45 AM IST

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರು ಚುನಾವಣಾ ಆಯುಕ್ತರ ದುರ್ಬಲ ಹೆಗಲಿನ ಮೇಲೆ ಸಂವಿಧಾನ ಅಗಾಧ ಅಧಿಕಾರವನ್ನು ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ದಿವಂಗತ ಟಿ.ಎನ್‌.ಶೇಷನ್‌ ರೀತಿಯ ಬಲಿಷ್ಠ ವ್ಯಕ್ತಿಗಳು ಚುನಾವಣಾ ಆಯೋಗದ ಮುಖ್ಯಸ್ಥರಾಗಬೇಕಾಗಿದೆ ಎಂದು ಹೇಳಿದೆ. ಚುನಾವಣಾ ಆಯೋಗದ ಮುಖ್ಯಸ್ಥ ಹುದ್ದೆಗೆ ಅತ್ಯುತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವಂತಹ ವ್ಯವಸ್ಥೆ ರೂಪಿಸುವ ಪ್ರಯತ್ನ ನಮ್ಮದು. ಚುನಾವಣಾ ಆಯುಕ್ತರ ನೇಮಕಾತಿಗೆ ಕಾನೂನೇ ಇಲ್ಲದಿರುವುದು ಗೊಂದಲಕಾರಿ ಸ್ಥಿತಿ. ಸಂವಿಧಾನದ ಮೌನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಾವು ಅಸಹಾಯಕರು, ಈ ವಿಚಾರದಲ್ಲಿ ಏನನ್ನೂ ಮಾಡಲಾಗದು ಎಂದು ಹೇಳಲಾಗದು. ಈಗಿರುವ ವ್ಯವಸ್ಥೆಗಿಂತ ಭಿನ್ನವಾದ ವ್ಯವಸ್ಥೆ ರೂಪಿಸಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಚುನಾವಣಾ ಆಯೋಗಕ್ಕೆ (Election Commission) ಹಲವಾರು ಮುಖ್ಯಸ್ಥರು ಬಂದಿದ್ದಾರೆ. ಆದರೆ ಟಿ.ಎನ್‌.ಶೇಷನ್‌ರಂಥವರು (TN Sheshan) ಬರುವುದು ಒಮ್ಮೆ ಮಾತ್ರ. ಮುಖ್ಯ ಚುನಾವಣಾ ಆಯುಕ್ತ ಹುದ್ದೆಗೆ ನಾವು ಅತ್ಯುತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಆದರೆ ಅವರನ್ನು ಹುಡುಕುವುದು ಹೇಗೆ ಹಾಗೂ ನೇಮಕ ಮಾಡುವುದು ಹೇಗೆ ಎಂಬುದೇ ಪ್ರಶ್ನೆ’ ಎಂದು ನ್ಯಾ.ಕೆ.ಎಂ.ಜೋಸೆಫ್‌ (KM Joseph) ನೇತೃತ್ವದ ಪಂಚಸದಸ್ಯ ಪೀಠ ಹೇಳಿತು. ಚುನಾವಣಾ ಆಯೋಗಕ್ಕೂ (Election Commission) ನ್ಯಾಯಾಧೀಶರ ನೇಮಕಾತಿಗೆ ಇರುವ ಕೊಲಿಜಿಯಂ ವ್ಯವಸ್ಥೆ ರೂಪಿಸಬೇಕು ಎಂಬ ಅರ್ಜಿ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಕೇಂದ್ರ ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಗೆ ಸುಪ್ರೀಂಕೋರ್ಟ್‌ ತೀವ್ರ ಅತೃಪ್ತಿ

ಮೊಯ್ಲಿ, ಖುರೇಷಿ ಸ್ವಾಗತ:

ಚುನಾವಣಾ ಆಯೋಗಕ್ಕೆ ಅತ್ಯುತ್ತಮ ವ್ಯಕ್ತಿಗಳನ್ನು ನೇಮಕ ಮಾಡಬೇಕು. ಸ್ವತಂತ್ರ ನ್ಯಾಯಾಂಗ ಹಾಗೂ ಚುನಾವಣಾ ಆಯೋಗ ಬೇಕೆಂದರೆ ಮುಖ್ಯ ಚುನಾವಣಾ ಆಯುಕ್ತರಿಗೆ ಆರು ವರ್ಷಗಳ ಅವಧಿ ನಿಗದಿಗೊಳಿಸಬೇಕು. ನೇಮಕಾತಿ ಕೊಲಿಜಿಯಂ ಮೂಲಕ ಆಗಬೇಕು. ಈ ಕುರಿತು ಎರಡನೇ ಆಡಳಿತ ಸುಧಾರಣಾ ಆಯೋಗದ ವರದಿಯಲ್ಲೂ ಶಿಫಾರಸು ಮಾಡಿದ್ದೇನೆ ಎಂದು ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ (Veerappa Moily) ತಿಳಿಸಿದ್ದಾರೆ. ಕೊಲಿಜಿಯಂ ನೇಮಕಾತಿ ನಮ್ಮ 20 ವರ್ಷಗಳ ಬೇಡಿಕೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ.ಖುರೇಷಿ (S.Y. Qureshi) ಕೂಡ ಹೇಳಿದ್ದಾರೆ.

ಚುನಾವಣಾ ಬಾಂಡ್‌ ಯೋಜನೆ ವಿಚಾರಣೆ: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಒಪ್ಪಿಗೆ

ಯಾರು ಶೇಷನ್‌?

ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ. 1990ರ ಡಿ.12ರಂದು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡು ಆಯೋಗದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದ್ದರು. ಮಾದರಿ ನೀತಿ ಸಂಹಿತೆ, ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚ ನಿಗದಿ, ಮತದಾರರಿಗೆ ಗುರುತಿನ ಚೀಟಿ ಜಾರಿಗೆ ತಂದರು. ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಿ, ಶಾಂತಿಯುತ ಚುನಾವಣಾ ವ್ಯವಸ್ಥೆಯನ್ನು ರೂಪಿಸಿದರು. 1996ರ ಡಿ.11ರಂದು ನಿವೃತ್ತರಾದರು. 2019ರ ನ.10ರಂದು ನಿಧನರಾದರು.
 

Follow Us:
Download App:
  • android
  • ios