ಲೋಕಸಭಾ ಚುನಾವಣಗೆ ಕೆಲ ತಿಂಗಳು ಮಾತ್ರ ಬಾಕಿ. ಇದೀಗ ಎಲ್ಲರ ಚಿತ್ತ ಚುನಾವಣಾ ಆಯೋಗದತ್ತ ನೆಟ್ಟಿದೆ. ಕೆಲವೇ ದಿನಗಳಲ್ಲಿ ಆಯೋಗ ಮತದಾನ ದಿನಾಂ ಕ ಘೋಷಣೆ ಮಾಡಲಿದೆ. ಮೂಲಗಳ ಪ್ರಕಾರ ಮಾರ್ಚ್ 13ರ ಬಳಿಕ ಮತದಾನ ದಿನಾಂಕ ಘೋಷಣೆಯಾಗಲಿದೆ. ಇಷ್ಟೇ ಅಲ್ಲ ಈ ಬಾರಿ ಮತದಾನಕ್ಕೆ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆ ಮಾಡಲಾಗುತ್ತಿದೆ.

ನವದೆಹಲಿ(ಫೆ.23) ಲೋಕಸಭಾ ಚುನಾವಣೆ 2024ರ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಈಗಾಗಲೇ ಅಭ್ಯಾಸ ಆರಂಭಿಸಿದೆ. ಇತ್ತ ಚುನಾವಣಾ ಆಯೋಗ ಮತದಾನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೀಗ ಚುನಾವಣಾ ದಿನಾಂಕ ಕುರಿತು ಕುತೂಹಲ ಹೆಚ್ಚಾಗುತ್ತಿದೆ. ನೀತಿ ಸಂಹಿತೆ ಜಾರಿ ಸೇರಿದಂತೆ ಹಲವು ಪ್ರಶ್ನೆಗಳು ಎದುರಾಗಿದೆ. ಇದರ ನಡುವೆ ಚುನಾವಣಾ ಆಯೋಗ ಮಾರ್ಚ್ 13ರ ಬಳಿಕ ಲೋಕಸಭಾ ಚುನಾವಣಾ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. 

ಚುನಾವಣಾ ಆಯೋಗ ಈಗಾಗಲೇ ಹಲವು ರಾಜ್ಯಗಳಿಗೆ ಭೇಟಿ ನೀಡಿ ಸಿದ್ದತೆ ಕುರಿತು ಚರ್ಚೆ ನಡೆಸಿದೆ. ಇದೀಗ ತಮಿಳುನಾಡಿಗೆ ಭೇಟಿ ನೀಡಿರುವ ಆಯೋಗ, ಬಳಿಕ ಉತ್ತರ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದೆ. ಈ ಭೇಟಿಯಲ್ಲಿ ಆಯಾ ರಾಜ್ಯದಲ್ಲಿನ ಚುನಾವಣೆ ಸಿದ್ದತೆ, ಸುಗಮ ಮತದಾನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಿದೆ. ಇದೇ ವೇಳೆ ಸಿದ್ಥತೆಗಳ ಕುರಿತು ಪರಿಶೀಲನೆ ನಡೆಸಲಿದೆ. ರಾಜ್ಯಗಳ ಭೇಟಿ ಬಳಿಕ ಮಾರ್ಚ್ 13 ಅಥವಾ ಅದೇ ವಾರದಲ್ಲಿ ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗವು ಸಾಧ್ಯತೆ ಇದೆ.

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಮೋದಿ ಅಧ್ಯಕ್ಷತೆಯಲ್ಲಿ ಮಂತ್ರಿ ಪರಿಷತ್ ಸಭೆ!

ಕಳೆದ ಕೆಲ ತಿಂಗಳಿಂದ ಚುನಾವಣಾ ಆಯೋಗ ಎಲ್ಲಾ ರಾಜ್ಯಗಳ ಚುನಾವಣಾ ಆಯೋಗದ ಅಧಿಕಾರಿಗಳ ಜೊತೆ ನಿರಂತರ ಸಭೆ ನಡೆಸುತ್ತಿದೆ. ಇವಿಎಂ ಪೂರೈಕೆ, ಭದ್ರತೆ, ಮತಗಟ್ಟೆಗಳ ವಿವರ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿ ವರದಿ ತಯಾರಿಸುತ್ತಿದೆ. ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಈಬಾರಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆ ಮಾಡಲು ಆಯೋಗ ನಿರ್ಧರಿಸಿದೆ. ಸುಗಮ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆ ಮಾಡಲು ಆಯೋಗ ಮುಂಜಾಗಿದೆ.

ಚುನಾವಣಾ ದಿನಾಂಕ ಘೋಷಣೆಗೆ ಕೆಲ ದಿನಗಳು ಮಾತ್ರ ಬಾಕಿ ಇವೆ. ಇದರ ಬೆನ್ನಲ್ಲೇ ಬಿಜೆಪಿ ಮಾರ್ಚ್ 3 ರಂದು ಮಂತ್ರಿ ಪರಿಷತ್ ಸಭೆ ಕರೆದಿದೆ. ಸಭೆಯಲ್ಲಿ ಸಂಪುಟ ದರ್ಜೆ ಹಾಗೂ ಎಲ್ಲ ರಾಜ್ಯ ದರ್ಜೆ ಸಚಿವರು ಭಾಗಿಯಾಗಲಿದ್ದಾರೆ.ಚಾಣಕ್ಯಪುರಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಮಂತ್ರಿಮಂಡಲದ ಸಭೆ ನಡೆಯಲಿದೆ. ಪ್ರಮುಖ ನೀತಿ ವಿಷಯಗಳ ಬಗ್ಗೆ ಚರ್ಚಿಸಲು, ವಿವಿಧ ಉಪಕ್ರಮಗಳ ಅನುಷ್ಠಾನದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮತ್ತು ಆಡಳಿತದ ವಿಷಯಗಳ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ಪ್ರಧಾನಿ ಈ ಸಭೆ ಕರೆದಿದ್ದಾರೆ. ಮುಂದಿನ ಚುನಾವಣೆ ಬಗ್ಗೆಯೂ ಚರ್ಚೆ ಆಗುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

ಲೋಕಸಭೆ ಚುನಾವಣೆ 2024: ಬಿಜೆಪಿಯಲ್ಲಿ ಟಿಕೆಟ್‌ಗಾಗಿ ನಡೆದಿದೆ ಭಾರೀ ಕಸರತ್ತು..!