ಅಯೋಧ್ಯೆಯಲ್ಲಿ ವೃದ್ಧ ಮಹಿಳೆಯೊಬ್ಬರನ್ನು ಕುಟುಂಬಸ್ಥರೇ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಈ ಘಟನೆ ಸೆರೆಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಸಾವನ್ನಪ್ಪಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮುಂಬೈನಲ್ಲಿ ಕ್ಯಾನ್ಸರ್ ಪೀಡಿತ ಮಹಿಳೆಯನ್ನು ಆಕೆಯ ಮೊಮ್ಮಗನೇ ರಸ್ತೆ ಬದಿ ಕಸ ಎಸೆಯುವಲ್ಲಿ ಎಸೆದು ಹೋದಂತಹ ಘಟನೆ ನಡೆದಿತ್ತು. ಮಹಿಳೆ ನೀಡಿದ ವಿಳಾಸ ಹುಡುಕಿದ ನಂತರ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದ್ದರು. ಜೊತೆಗೆ ಮಹಿಳೆಗೂ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿದ್ದರು. ಆದರೆ ಆ ಘಟನೆ ಮಾಸುವ ಮೊದಲೇ ಈಗ ಅಯೋಧ್ಯೆಯಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ.

ಕುಟುಂಬವೊಂದು ವಯಸ್ಸಾದ ಮಹಿಳೆಯನ್ನು ರಸ್ತೆ ಬದಿ ಮಲಗಿಸಿ ಹೋಗಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಮುಂಜಾನೆ ಸ್ಥಳೀಯರಿಗೆ ಈ ವಿಚಾರ ಗೊತ್ತಾಗಿ ಪೊಲೀಸರಿಗೆ ತಳಿಸಿದ್ದು, ಪೊಲೀಸರು ಆ ವೃದ್ಧ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅಸ್ಪತ್ರೆಯಲ್ಲಿ ವೃದ್ಧ ಮಹಿಳೆ ಸಾವನ್ನಪ್ಪಿದ್ದಾರೆ. ಆದರೆ ಮನೆಯವರೇ ಮಾನವೀಯತೆ ಮರೆತು ವೃದ್ಧ ಮಹಿಳೆಯನ್ನು ರಸ್ತೆ ಬದಿ ಮಲಗಿಸಿ ಹೋಗಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವೈರಲ್ ಆದ ವೀಡಿಯೋದಲ್ಲಿ ಒಬ್ಬ ಯುವಕ ಹಾಗೂ ಮಹಿಳೆ ಇಬ್ಬರು ವೃದ್ಧ ಮಹಿಳೆಯನ್ನು ಆಟೋ ರಿಕ್ಷಾದಲ್ಲಿ ಕರೆದುಕೊಂಡು ಬಂದು ರಸ್ತೆ ಬದಿ ಮಲಗಿಸಿ ಮೈಮೇಲೆ ಬೆಡ್‌ಶೀಟ್ ಹೊದೆಸಿ ಹೊರಟು ಹೋಗಿದ್ದಾರೆ. ಅಯೋಧ್ಯೆಯ ಕಿಶುನ್ ದಾಸ್ಪುರದಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆ ಆಗಿದ್ದು, ಪ್ರಜ್ಞಾಶೂನ್ಯರಾಗಿದ್ದ ಮಹಿಳೆಯನ್ನು ರಸ್ತೆ ಬದಿ ಮಲಗಿಸಿ ಪರಾರಿಯಾಗಿದ್ದಾರೆ.

ಹೀಗೆ ಮನೆಯವರೇ ತೊರೆದ ವೃದ್ಧ ಮಹಿಳೆಯ ಸ್ಥಿತಿ ಆಗಲೇ ಶೋಚನೀಯವಾಗಿತ್ತು. ಆಕೆ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಆಕೆ ಯಾರು ಎಲ್ಲಿಂದ ಬಂದಳು ಎಂದು ಸ್ಥಳೀಯರು ತಿಳಿಯುವುದಕ್ಕೆ ಪ್ರಯತ್ನಿಸಿದರೂ ವೃದ್ಧೆಯ ಶೋಚನೀಯ ಸ್ಥಿತಿಯಿಂದಾಗಿ ಆಕೆಗೆ ಏನು ಹೇಳುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಕೆಯನ್ನು ದರ್ಶನ್‌ನಗರ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋಗಿದ್ದಾರೆ.

ಅಲ್ಲಿ ವೈದ್ಯರು ಆಕೆಗೆ ಚಿಕಿತ್ಸೆ ನೀಡಿದ್ದು, ಆಕೆಯ ಸ್ಥಿತಿ ಬಹಳ ಗಂಭೀರವಾಗಿದೆ ಎಂದು ಹೇಳಿದ್ದಾರ. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಆಕೆ ಪ್ರಾಣ ಬಿಟ್ಟಿದ್ದಾಳೆ. ಈ ಘಟನೆಯ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದು, ಸಿಸಿಟಿವಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಪ್ರಸ್ತುತ ಆ ಮಹಿಳೆಯ ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆ ಆಗಿತ್ತುಈಗ ಆಕೆಯ ಸಾವಿಗೆ ಕಾರಣವಾದ ಆರೋಪಿಗಳನ್ನು ಪತ್ತೆ ಮಾಡುವುದು ಅಷ್ಟೇ ಅಗತ್ಯವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ, ಶೇಕಡಾ 5ಕ್ಕಿಂತ ಹೆಚ್ಚು ವೃದ್ಧರನ್ನು ಕುಟುಂಬ ಸದಸ್ಯರು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. 2022ರಲ್ಲಿ ಹಿರಿಯ ನಾಗರಿಕರ ವಿರುದ್ಧ ನಡೆಸಿದ ಅಪರಾಧ ಪ್ರಕರಣಗಳು 28,000ಕ್ಕೂ ಹೆಚ್ಚು.

View post on Instagram