* ನಿತೀಶ್ ಆಡಳಿತವಿರುವ ಬಿಹಾರದಲ್ಲಿ ಇದೆಂತಹಾ ವ್ಯವಸ್ಥೆ* ಶವವಿಟ್ಟು ಲಂಚ ಕೇಳಿದ ಸಿಬ್ಬಂದಿ* ಭಿಕ್ಷೆ ಬೇಡೋದೊಂದೇ ಈ ಹೆತ್ತವರಿಗಿದ್ದ ಆಪ್ಶನ್
ಪಾಟ್ನಾ(ಜೂ.09): ಮುಖ್ಯಮಂತ್ರಿ ನಿತೀಶ್ ಕುಮಾರ್ ಆಡಳಿತ ನಡೆಸುತ್ತಿರುವ ಬಿಹಾರದಲ್ಲಿ ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಸಮಸ್ತಿಪುರದ ಸದರ್ ಆಸ್ಪತ್ರೆಯಲ್ಲಿ ನಾಚಿಕೆಗೇಡಿನ ಕೃತ್ಯ ನಡೆದಿದ್ದು, ಇಡೀ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ವಾಸ್ತವವಾಗಿ, ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ, ಕಾರ್ಮಿಕನೊಬ್ಬನಿಗೆ ಆತನ ಮಗನ ಶವವನ್ನು ನೀಡಲು ನಿರಾಕರಿಸಿದ್ದಾರೆ. ವಯೋವೃದ್ಧ ಪೋಷಕರು ಪರಿ ಪರಿಯಾಗಿ ಬೇಡಿಕೊಂಡ ಬಳಿಕ ಅವರು 50 ಸಾವಿರ ರೂಪಾಯಿ ತನ್ನಿ, ನಂತರ ಶವ ಸಿಗುತ್ತದೆ ಎಂದು ಹೇಳಿದ್ದಾರೆ. ಅಸಹಾಯಕ ಪೋಷಕರ ಬಳಿ ಅಷ್ಟು ಹಣವಿರಲಿಲ್ಲ. ಕಿತ್ತು ತಿನ್ನುವ ಬಡತನವಿದ್ದರೂ ಮಗನ ಅಂತ್ಯ ಸಂಸ್ಕಾರವನ್ನು ಮಾಡಲೆಂದು ಪೋಷಕರು ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಲು ಪ್ರಾರಂಭಿಸಿದ್ದಾರೆ.
ಮೇ 25ರಂದು ಮಗ ನಾಪತ್ತೆಯಾಗಿದ್ದ
ವಾಸ್ತವವಾಗಿ, ತಾಜ್‌ಪುರ ಪೊಲೀಸ್ ಠಾಣೆಯ ಆಹಾರ್ ಗ್ರಾಮದ ನಿವಾಸಿ 25 ವರ್ಷದ ಸಂಜೀವ್ ಠಾಕೂರ್ ಮೇ 25 ರಂದು ನಾಪತ್ತೆಯಾಗಿದ್ದರು. ತಂದೆ ಮಹೇಶ್ ಠಾಕೂರ್ ಮಗನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ನಂತರ ಜೂನ್ 7 ರಂದು ಮುಸ್ರಿಘರಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ ಎಂಬ ಸುದ್ದಿ ಅವರಿಗೆ ಬಂದಿತ್ತು. ಪಾಲಕರು ಅಲ್ಲಿಗೆ ತಲುಪಿದಾಗ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಠಾಣೆಯಿಂದ ಮಾಹಿತಿ ಪಡೆದರು. ಪೋಷಕರು ಓಡಿ ಹೋಗಿ ಆಸ್ಪತ್ರೆ ತಲುಪಿದರು.
ಮೃತ ದೇಹ ತೋರಿಸಲು ಹಿಂದೇಟು ಹಾಕಿ 50 ಸಾವಿರ ಕೇಳಿದ್ದಾರೆ
ಮೃತ ದೇಹವನ್ನು ತೋರಿಸಲು ಶವಾಗಾರದ ನೌಕರನನ್ನು ಪೋಷಕರು ಕೇಳಲು ಪ್ರಾರಂಭಿಸಿದರು ಆದರೆ ಅವರು ಇದಕ್ಕೆ ನಿರಾಕರಿಸಿದ್ದಾರೆ. ಅನೇಕ ಬಾರಿ ಮನವಿ ಮಾಡಿದ ಬಳಿಕ ಅಂತಿಮವಾಗಿ ಒಪ್ಪಿಕೊಂಡರು ಮತ್ತು ಮೃತ ದೇಹವನ್ನು ತೋರಿಸಿದರು, ನಂತರ ಪೋಷಕರು ಅದು ತಮ್ಮ ಮಗನೆಂದು ಗುರುತಿಸಿದರು. ಇದಾದ ಬಳಿಕ ಮಗನ ಶವ ಕೊಡಿ ಎಂದು ಕೇಳಿದಾಗ ನೌಕರ ನಿರಾಕರಿಸಿದ್ದಾನೆ. ಅಲ್ಲದೇ 50 ಸಾವಿರ ಕೊಟ್ಟರಷ್ಟೇ ಮೃತದೇಹ ನೀಡುವುದಾಗಿ ಹೇಳಿದ್ದಾನೆ.
ಅಸಹಾಯಕ ಪೋಷಕರು ಭಿಕ್ಷೆ ಬೇಡಲಾರಂಭಿಸಿದರು
ಮಗನ ಶವಕ್ಕಾಗಿ ಹೆತ್ತವರ ಬಳಿ ಅಷ್ಟು ದೊಡ್ಡ ಮೊತ್ತ ಇರಲಿಲ್ಲ. ಹಣದ ವ್ಯವಸ್ಥೆ ಮಾಡಲು ಏನು ಮಾಡುವುದೆಂದು ತೋಚದೆ, ಅಂತಿಮವಾಗಿ ಭಿಕ್ಷೆ ಬೇಡಲು ನಿರ್ಧರಿಸಿದರು. ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಮಗನ ಪಾರ್ಥಿವ ಶರೀರದ ಅಂತಿಮ ಸಂಸ್ಕಾರಕ್ಕೂ ಹಣವಿಲ್ಲದಂತಾಗಿದೆ. ಹಿರಿಯರಿಬ್ಬರೂ ಮಗನ ಮೃತದೇಹಕ್ಕೆ ಹಣ ಕೇಳುತ್ತಾ ಮನೆ ಮನೆಗೆ ತೆರಳಿದರು. ಈ ವೇಳೆ ಯಾರೋ ಅವರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಈ ವಿಷಯ ಆಸ್ಪತ್ರೆಯ ಆಡಳಿತ ಮಂಡಳಿಗೆ ತಲುಪಿದ್ದು, ಕೂಡಲೇ ಶವವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಂತ್ಯಕ್ರಿಯೆ ನಡೆಯಿತು
ಬಳಿಕ ಪೊಲೀಸರು ಕುಟುಂಬಸ್ಥರನ್ನು ಕರೆಸಿ ಶವವನ್ನು ಹಸ್ತಾಂತರಿಸಿದ್ದಾರೆ. ನಂತರ ಹೆತ್ತವರು ಮಗನ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಇತ್ತ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಎಸ್.ಕೆ.ಚೌಧರಿ ಅವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಈ ವಿಷಯ ಮಾಧ್ಯಮಗಳ ಮೂಲಕ ಅವರಿಗೆ ತಲುಪಿದಾಗ ಅವರೂ ಒಮ್ಮೆ ಬೆಚ್ಚಿಬಿದ್ದರು. ಇದು ಮಾನವರು ತಲೆ ತಗ್ಗಿಸುವ ವಿಚಾರ, ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ಬಿಡಲಾಗುವುದಿಲ್ಲ ಎಂದಿದ್ದಾರೆ.
