Asianet Suvarna News Asianet Suvarna News

ಮಣಿಪುರ ಇತಿಹಾಸದಲ್ಲೇ ಭೀಕರ ಭೂಕುಸಿತ, ಮತ್ತೆ 8 ಮೃತದೇಹ ಪತ್ತೆ!

* ಮಣಿಪುರದ ನೋನೆ ಜಿಲ್ಲೆಯ ಪ್ರಾದೇಶಿಕ ಸೇನಾ ಶಿಬಿರದಲ್ಲಿ ಭೀಕರ ಭೂಕುಸಿತ 

* ಮಣಿಪುರ ಇತಿಹಾಸದಲ್ಲೇ ಭೀಕರ ಭೂಕುಸಿತ

* ಮತ್ತೆ 8 ಮೃತದೇಹ ಪತ್ತೆ, ಮೃತರ ಸಂಖ್ಯೆ 29ಕ್ಕೆ ಏರಿಕೆ

* 34 ಮಂದಿ ನಾಪತ್ತೆ, ಮಳೆಯಿಂದ ರಕ್ಷಣಾ ಕಾರ‍್ಯ ದುಸ್ತರ

Eight more bodies retrieved, Manipur landslide toll 29 pod
Author
Bangalore, First Published Jul 3, 2022, 10:54 AM IST | Last Updated Jul 3, 2022, 10:54 AM IST

ಇಂಫಾಲ್‌(ಜು.03): ಮಣಿಪುರದ ನೋನೆ ಜಿಲ್ಲೆಯ ಪ್ರಾದೇಶಿಕ ಸೇನಾ ಶಿಬಿರದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಶನಿವಾರ ಮತ್ತೆ 8 ಮೃತದೇಹಗಳು ಪತ್ತೆಯಾಗಿವೆ. ಹೀಗಾಘಿ ಮೃತರ ಸಂಖ್ಯೆಯು 29ಕ್ಕೆ ಏರಿದೆ. ಇದು ಮಣಿಪುರ ಇತಿಹಾಸದಲ್ಲೇ ಅತಿ ಭೀಕರ ಭೂಕುಸಿತವಾಗಿದೆ.

ಈವರೆಗೆ ಭೂಕುಸಿತದಿಂದಾಗಿ 18 ಯೋಧರು ಮೃತಪಟ್ಟಿದ್ದು, 34 ಜನರು ನಾಪತ್ತೆಯಾಗಿದ್ದಾರೆ. 13 ಯೋಧರು ಹಾಗೂ 5 ನಾಗರಿಕರ ರಕ್ಷಣೆ ಮಾಡಲಾಗಿದೆ. ಶನಿವಾರ ಪತ್ತೆಯಾದ 8 ಮೃತದೇಹಗಳಲ್ಲಿ 5 ಯೋಧರು, ಒಬ್ಬ ನಿರ್ಮಾಣ ಕಂಪನಿ ಉದ್ಯೋಗಿ ಸೇರಿದ್ದಾರೆ. ಇನ್ನಿಬ್ಬರ ಗುರುತು ಇನ್ನು ಪತ್ತೆಯಾಗಿಲ್ಲ. ಶುಕ್ರವಾರ 13 ಮೃತದೇಹ ಪತ್ತೆಯಾಗಿದ್ದವು.

ಇತಿಹಾಸದಲ್ಲೇ ಭೀಕರ ಘಟನೆ:

ಭೂಕುಸಿತ ಮಣಿಪುರದ ಇತಿಹಾಸದಲ್ಲೇ ಅತ್ಯಂತ ಭೀಕರ ಘಟನೆಯಾಗಿದೆ. ಇನ್ನೂ 55 ಕ್ಕೂ ಹೆಚ್ಚು ಜನರು ಅವಶೇಷಗಳ ಅಡಿ ಸಿಲುಕಿದ್ದಾರೆ. ಎಲ್ಲರ ಮೃತದೇಹವನ್ನು ಹೊರತೆಗೆಯಲು ಇನ್ನು 2-3 ದಿನಗಳು ಬೇಕಾಗಬಹುದು ಎಂದು ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ವಿಷಾದ ವ್ಯಕ್ತಪಡಿಸಿದ್ದಾರೆ.

ಬಿರೇನ್‌ ಮೃತರ ಕುಟುಂಬಕ್ಕೆ 5 ಲಕ್ಷ ರು. ಹಾಗೂ ಗಾಯಗೊಂಡವರಿಗೆ 50,000 ರು. ಪರಿಹಾರವನ್ನು ಘೋಷಿಸಿದ್ದಾರೆ.

ಏನಾಗಿತ್ತು?

ಬುಧವಾರ ರಾತ್ರಿ ಪ್ರಾದೇಶಿಕ ಸೇನಾ ಶಿಬಿರದ ಬಳಿಯಿರುವ ಟುಪುಲ್‌ ಯಾರ್ಡ್‌ ರೇಲ್ವೆ ನಿರ್ಮಾಣ ಪ್ರದೇಶದಲ್ಲಿ ಭೂಕುಸಿತವಾಗಿತ್ತು. ಅಂದು ಮುಂಜಾನೆ 4 ಗಂಟೆಯಿಂದಲೂ ಭಾರತೀಯ ಸೇನೆ, ಆಸ್ಸಾಂ ರೈಫಲ್ಸ್‌, ಪ್ರಾದೇಶಿಕ ಸೇನೆ ಹಾಗೂ ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಘಟಕಗಳ ಒಟ್ಟು 470 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದ್ದಾರೆ.

ಆದರೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಕಷ್ಟವಾಗುತ್ತಿದೆ.

ಭೂಕುಸಿತವಾದ ಪ್ರದೇಶದಲ್ಲಿ ಇಜೈ ನದಿಯ ನೀರು ಭಾರೀ ಪ್ರಮಾಣದಲ್ಲಿ ಸಂಗ್ರಹವಾಗಿದ್ದು ಸುತ್ತಮುತ್ತಲ ಪ್ರದೇಶದಲ್ಲಿ ಇನ್ನಷ್ಟುಭೀತಿ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ಅವಶೇಷಗಳನ್ನು ತೆಗೆದು ನೀರು ಹರಿದುಹೋಗಲು ಮಾರ್ಗ ಮಾಡಿಕೊಡಲಾಗುತ್ತಿದೆ.

ವಾಲ್‌-ರಾಡಾರ್‌ ಹಾಗೂ ರಕ್ಷಣಾ ನಾಯಿಗಳನ್ನು ಬಳಸಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಪತ್ತೆ ಹಚ್ಚಲಾಗುತ್ತಿದೆ. ಮೃತರ ದೇಹವನ್ನು ಸೇನಾ ಗೌರವದೊಂದಿಗೆ ಅವರ ಸ್ವಗ್ರಾಮಕ್ಕೆ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios