ಕಾಂಗ್ರೆಸ್ ನಾಯಕ ಧರಮ್ ಸಿಂಗ್ ಮನೆ ಮೇಲೆ ಇಡಿ ದಾಳಿ, 4 ಕೋಟಿ ರೂ ಮೌಲ್ಯದ ಕಾರು, ಚಿನ್ನಾಭರಣ ಜಪ್ತಿ!
ಜಾರಿ ನಿರ್ದೇಶನಾಲಯ ಇಂದು ಕಾಂಗ್ರೆಸ್ ನಾಯಕನ ಮನೆ ಹಾಗೂ ಕಂಪನಿಗಳ ಮೇಲೆ ದಾಳಿ ಮಾಡಿದೆ. ಶಾಸಕ ಧರಮ್ ಸಿಂಗ್ ಛೋಕರ್ ಮನೆ ಹಾಗೂ ಕಚೇರಿ ಮೇಲಿನ ದಾಳಿಯಲ್ಲಿ 4 ಕೋಟಿ ರೂಪಾಯಿ ಮೌಲ್ಯದ ಕಾರು, ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಹರ್ಯಾಣ(ಜು.31): ಅಕ್ರಮ ಆಸ್ತಿಗಳಿಕೆ, ಅಕ್ರಮ ಆದಾಯ ಸೇರಿದಂತೆ ಹಲವು ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಜಾರಿ ನಿರ್ದೇಶನಾಲಯ ಇಂದು ಮತ್ತೊಂದು ದಾಳಿ ನಡೆಸಿದೆ. ಹರ್ಯಾಣ ಕಾಂಗ್ರೆಸ್ ಶಾಸಕ ಧರಮ್ ಸಿಂಗ್ ಛೋಕರ್ ಮನೆ ಹಾಗೂ ಕಂಪನಿಗಳ ಮೇಲೆ ದಾಳಿ ನಡೆಸಿರುವ ಇಡಿ 4 ಕೋಟಿ ರೂಪಾಯಿ ಮೌಲ್ಯದ ಕಾರು, ಚಿನ್ನಾಭರಣ, ನಗದು ಸೇರಿದಂತೆ ಹಲವು ವಸ್ತುಗಳನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಮನೆಗಳ ಮಾರಾಟದಲ್ಲಿ ಭಾರಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಮನೆ ಖರೀದಿಸುವವರ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಅನ್ನೋ ಆರೋಪ ಗಂಭೀರವಾಗಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಇಂದು ಧರಮ್ ಸಿಂಗ್ ಛೋಕರ್‌ಗೆ ಸೇರಿದ 11 ವಿವಿಧ ಕಡೆಗಳಲ್ಲಿರುವ ಕಂಪನಿಗಳು, ಕಚೇರಿಗಳು ಹಾಗೂ ಮನೆ ಮೇಲೆ ದಾಳಿ ನಡೆಸಲಾಗಿದೆ. ಐಷಾರಾಮಿ ಕಾರುಗಳು, 14.5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 4.5 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ನಾನಿಲ್ಲದಿದ್ರೆ ರಾಜಸ್ಥಾನ ಸಿಎಂ ಜೈಲಲ್ಲಿರ್ತಿದ್ರು; ಇಡಿ, ಐಟಿ ರೇಡ್ ವೇಳೆ ಬಚಾವ್ ಮಾಡಿದ್ದೆ: ಕಾಂಗ್ರೆಸ್ ಶಾಸಕ
ಹರ್ಯಾಣ, ಗುರುಗ್ರಾಂ, ದೆಹಲಿ ಸೇರಿದಂತೆ 11 ಕಡೆಗಳಲ್ಲಿ ಧರಮ್ ಸಿಂಗ್ ಆಸ್ತಿ ಹಾಗೂ ಕಂಪನಿಗಳನ್ನು ಹೊಂದಿದ್ದಾರೆ. ಹರ್ಯಾಣದ ಪಾನಿಪತ್ ಜಿಲ್ಲೆಯ ಸಮಲ್ಖಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಧರಮ್ ಸಿಂಗ್ ಛೋಕರ್, ಮಹಿರಾ ರಿಯಲ್ ಎಸ್ಟೇಟ್ ಗ್ರೂಪ್ ಮಾಲೀಕರಾಗಿದ್ದಾರೆ. ಗುರುಗ್ರಾಮ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಆಧಾರದಲ್ಲಿ ಇಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದರು.
ಧರಮ್ ಸಿಂಗ್ ಛೋಕರ್ ರಿಯಲ್ ಎಸ್ಟೇಟ್ ಮೂಲಕ 1497 ಮನೆಗಳ ಮಾರಾಟದಲ್ಲಿ 360 ಕೋಟಿ ರೂಪಾಯಿ ಗೋಲ್‌ಮಾಲ್ ನಡೆದಿದೆ. ಸಾರ್ವಜನಿಕರಿಂದ ಹಣ ಪಡೆದು ವಂಚಿಸಲಾಗಿದೆ ಎಂದು ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಇಡಿ ಅಧಿಕಾರಿಗಳು ಕಳೆದ ಕೆಲ ತಿಂಗಳನಿಂದ ಮಾಹಿತಿ ಕಲೆ ಹಾಕಿದ್ದಾರೆ. ಇಂದು ಏಕಾಏಕಿ ದಾಳಿ ನಡೆಸಿದ್ದಾರೆ.
ಅಕ್ರಮ ಗಣಿಗಾರಿಕೆ ಪ್ರಕರಣ: ED ಆಸ್ತಿ ಜಪ್ತಿ ಮಾಡಿದ ಬೆನ್ನಲ್ಲೇ ಗಣಿ ಉದ್ಯಮಿ ಖಾರವಾಗಿ ಪ್ರತಿಕ್ರಿಯೆ
ಹರ್ಯಾಣದಲ್ಲಿ ಬೃಹತ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಧರಮ್ ಸಿಂಗ್ ಛೋಕರ್, 2019ರಲ್ಲಿ ಹರ್ಯಾಣ ವಿಧಾನಸಭೆಗೆ ಸ್ಪರ್ಧಿಸಿದ್ದಾರೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದ ಧರಮ್ ಸಿಂಗ್,ಕ್ಯಾಬಿನ್‌ನಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದರು. ಶಾಸಕರಾಗಿರುವ ಧರಮ್ ಸಿಂಗ್ ಇದೀಗ ಕೋಟಿ ಕೋಟಿ ರೂಪಾಯಿ ಹಗರಣದಲ್ಲಿ ಸಿಲುಕಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಭಾರತ್ ಇನ್ಫ್ರಾ ಎಕ್ಸ್‌ಪೋರ್ಟ್ ಮತ್ತು ಇಂಪೋರ್ಟ್ ಸಂಸ್ಥೆ ಮೇಲೆ ಇಡಿ ದಾಳಿ ನಡೆಸಿತ್ತು. ಬೆಂಗಳೂರು ಮತ್ತು ದಾವಣಗೆರೆಯ ಏಳು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿ ಶೋಧ ಕಾರ್ಯ ನಡೆಸಿತ್ತು. ಸ್ಟೇಟ್ ಬ್ಯಾಂಕ್ ಇಂಡಿಯಾದಿಂದ ನಗದು, ಇಪಿಸಿ/ಎಫ್‌ಬಿಡಿ ಸೇರಿದಂತೆ ವಿವಿಧ ರೂಪದಲ್ಲಿ ಸಾಲ ಸೌಲಭ್ಯಗಳನ್ನು ಸಂಸ್ಥೆಯು ಪಡೆದುಕೊಂಡಿತ್ತು. ಬ್ಯಾಂಕ್‌ನ ಸಾಲವನ್ನು ಮರುಪಾವತಿ ಮಾಡದೆ .113 ಕೋಟಿ ಬಾಕಿ ಉಳಿಸಿಕೊಂಡಿತ್ತು. ಅಲ್ಲದೇ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ .100 ಕೋಟಿ ಮೌಲ್ಯ ಸ್ಥಿರಾಸ್ತಿ ಮತ್ತು .14.5 ಲಕ್ಷ ನಗದನ್ನು ಇ.ಡಿ. ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬ್ಯಾಂಕ್‌ನಿಂದ ಪಡೆದ ಸಾಲ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡಿದೆ. ಬ್ಯಾಂಕ್‌ಗೆ ನಕಲಿ ಇನ್‌ವಾಯ್‌್ಸಗಳನ್ನು ಮತ್ತು ದಾಖಲೆಗಳನ್ನು ಸಲ್ಲಿಸಲಾಗಿದೆ. ಇದರ ಜತೆಗೆ ಒಪ್ಪಂದದ ಕಟ್ಟುಪಾಡುಗಳನ್ನು ಅನುಸರಿಸಿಲ್ಲ ಎಂದು ಶೋಧ ಕಾರ್ಯದ ವೇಳೆ ಪತ್ತೆಯಾಗಿದೆ. .101.18 ಕೋಟಿಯನ್ನು ಆರಾಧ್ಯ ವೈರ್ ರೋಫ್ಸ್ ಪ್ರೈ.ಲಿಗೆ 10 ಸಾಲದ ಪತ್ರದ ಮೂಲಕ ನೀಡಿದೆ. ಹಲವು ಬ್ಯಾಂಕ್ ಖಾತೆಗಳ ಮೂಲಕ ಹಣ ವಹಿವಾಟು ನಡೆಸಿರುವುದು ತನಿಖೆಯ ವೇಳೆ ಗೊತ್ತಾಗಿದೆ ಎಂದು ಇಡಿ ಹೇಳಿದೆ.