ಯಸ್ ಬ್ಯಾಂಕ್‌ನ ಸಂಸ್ಥಾಪಕ ಹಾಗೂ ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಭಾನುವಾರ ನಸುಕಿನ ಜಾವ 3 ಗಂಟೆ ವೇಳೆಗೆ ಬಂಧಿಸಿದ್ದಾರೆ.
ನವದೆಹಲಿ/ಮುಂಬೈ [ಮಾ.06] : ಹಗರಣದಿಂದಾಗಿ ಸುದ್ದಿಯಲ್ಲಿರುವ ಯಸ್ ಬ್ಯಾಂಕ್‌ನ ಸಂಸ್ಥಾಪಕ ಹಾಗೂ ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಭಾನುವಾರ ನಸುಕಿನ ಜಾವ 3 ಗಂಟೆ ವೇಳೆಗೆ ಬಂಧಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಸುಮಾರು 20 ತಾಸು ವಿಚಾರಣೆ ನಡೆಸಿದ ಬಳಿಕ, ವಿಚಾರಣೆಗೆ ಸೂಕ್ತ ಸಹಕಾರ ನೀಡುತ್ತಿಲ್ಲ ಎಂಬ ಕಾರಣ ನೀಡಿ ಅಧಿಕಾರಿಗಳು ರಾಣಾ ಅವರನ್ನು ಬಂಧಿಸಿದರು. ಬಳಿಕ ಭಾನುವಾರ ಬೆಳಗ್ಗೆ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ರಾಣಾ ಅವರನ್ನು ಮಾ.11ರವರೆಗೆ ಇ.ಡಿ. ವಶಕ್ಕೆ ಒಪ್ಪಿಸಿತು.
ಈ ನಡುವೆ ಯಸ್ ಬ್ಯಾಂಕ್ ಹಗರಣ ಸಂಬಂಧ ರಾಣಾ ಕಪೂರ್, ಡಿಎಚ್‌ಎಫ್‌ಎಲ್, ಡುಇಟ್ ಅರ್ಬನ್ ವೆಂಚರ್ಸ್ ವಿರುದ್ಧ ಸಿಬಿಐ ಕೂಡಾ ಕೇಸು ದಾಖಲಿಸಿಕೊಂಡಿದೆ. ಕಪೂರ್ ಮತ್ತು ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಸಂಚು, ವಂಚನೆ ಮತ್ತು ಭ್ರಷ್ಟಾಚಾರದ ಆರೋಪದಡಿ ಕೇಸು ದಾಖಲಿಸಲಾಗಿದೆ.
ಆತಂಕದಲ್ಲಿದ್ದ ಯಸ್ ಬ್ಯಾಂಕ್ ಗ್ರಾಹಕರಿಗೆ ಬಿಗ್ ರಿಲೀಫ್!...
ರಾಣಾ ಕಪೂರ್, ತಮ್ಮ ಪತ್ನಿ ಮತ್ತು ಮಕ್ಕಳ ಹೆಸರಲ್ಲಿ ಡುಇಟ್ ಅರ್ಬನ್ ವೆಂಚರ್ಸ್ ಎಂಬ ಕಂಪನಿ ಸ್ಥಾಪಿಸಿದ್ದರು. ಈ ಕಂಪನಿಗೆ ಡಿಎಚ್‌ಎಫ್‌ಎಲ್ 600 ಕೋಟಿ ರು. ಸಾಲ ನೀಡಿತ್ತು. ಈ ಹಣವು, ಡಿಎಚ್‌ಎಫ್‌ಎಲ್‌ಗೆ ಯಸ್ ಬ್ಯಾಂಕ್ ನೀಡಿದ್ದ 3000 ಕೋಟಿ ರು. ಸಾಲಕ್ಕೆ ಪ್ರತಿಯಾಗಿ ನೀಡಿದ ಲಂಚ ಹಣ ಎಂಬ ಗುಮಾನಿ ಸಿಬಿಐನದ್ದು. ಹೀಗಾಗಿಯೇ ಎಲ್ಲರ ವಿರುದ್ಧವೂ ಸಿಬಿಐ ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
ಪುತ್ರಿಗೆ ತಡೆ: ಈ ನಡುವೆ ಹಗರಣದಲ್ಲಿ ಭಾಗಿಯಾಗಿರುವ ಶಂಕೆ ಎದುರಿಸುತ್ತಿರುವ ರಾಣಾ ಕಪೂರ್ ಅವರ ಪುತ್ರ ರೋಶನಿ, ಭಾನುವಾರ ಮುಂಬೈನಿಂದ ಲಂಡನ್‌ಗೆ ತೆರಳಲು ಯತ್ನಿಸುತ್ತಿದ್ದ ವೇಳೆ, ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆಹಿಡಿಯಲಾಗಿದೆ. ಯಸ್ ಬ್ಯಾಂಕ್ ಹಗರಣದ ಹಿನ್ನೆಲೆಯಲ್ಲಿ ರಾಣಾ ಕಪೂರ್, ಅವರ ಪತ್ನಿ ಮತ್ತು ಮೂವರು ಪುತ್ರಿಯರಿಗೆ ದೇಶ ಬಿಡದಂತೆ ಸೂಚಿಸಲಾಗಿದೆ. ಅವರ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಲಾಗಿದೆ.
