ಮುಂಬೈ(ಸೆ.06): ನಟ ಸುಶಾಂತ್‌ ರಜಪೂತ್‌ ನಿಗೂಢ ಸಾವಿನ ಕೇಸಲ್ಲಿ ಪ್ರಮುಖ ಆರೋಪಿ ರಿಯಾಳ ಸೋದರ ಶೋವಿಕ್‌ನನ್ನು ಬಂಧಿಸಿರುವ ಮಾದಕ ವಸ್ತು ನಿಯಂತ್ರಣಾ ದಳ, ನಾವು ದೊಡ್ಡ ಮೀನಿಗೆ ಬಲೆ ಬೀಸಿರುವುದಾಗಿ ಹೇಳಿದೆ. ಈ ಮೂಲಕ ಪ್ರಕರಣದಲ್ಲಿ ಬಾಲಿವುಡ್‌ನ ಇನ್ನಷ್ಟುದೊಡ್ಡ ಕುಳಗಳನ್ನು ಶೀಘ್ರವೇ ವಶಕ್ಕೆ ಪಡೆಯುವ ಸುಳಿವನ್ನು ನೀಡಿವೆ.

ಶೋವಿಕ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ಎನ್‌ಸಿಬಿ ಅಧಿಕಾರಿಗಳು, ಮಾದಕ ವಸ್ತು ಜಾಲವು ಬಾಲಿವುಡ್‌ನಲ್ಲಿ ಸಾಕಷ್ಟುಆಳವಾಗಿ ನಂಟು ಹೊಂದಿರುವುದು ಕಂಡುಬಂದಿದೆ. ಹೀಗಾಗಿ ಶೋವಿಕ್‌ನನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡಬೇಕು. ಇದರಿಂದಾಗಿ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಮತ್ತು ಅಂತಾರಾಜ್ಯ ನಂಟಿನ ಬಗ್ಗೆ ಇನ್ನಷ್ಟುಬೆಳಕು ಚೆಲ್ಲುವುದು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಧಿತ ಶೋವಿಕ್‌ ಹಾಗೂ ನಟ ಸುಶಾಂತ್‌ ಮ್ಯಾನೇಜರ್‌ ಸ್ಯಾಮ್ಯುಯೆಲ್‌ ಅವರನ್ನು ಕೋರ್ಟ್‌ ಸೆ.9ರ ವರೆಗೂ ಎನ್‌ಸಿಬಿ ವಶಕ್ಕೆ ಒಪ್ಪಿಸಿದೆ.

ಇದೇ ವೇಳೆ ಶೀಘ್ರವೇ ರಿಯಾಗೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಿದ್ದೇವೆ. ಬಳಿಕ ರಿಯಾ, ಶೋವಿಕ್‌ ಮತ್ತು ಸುಶಾಂತ್‌ರ ಮ್ಯಾನೇಜರ್‌ ಮಿರಾಂಡನನ್ನು ಮುಖಾಮುಖಿ ಕೂರಿಸಿ ಪ್ರಶ್ನೆಗೆ ಒಳಪಡಿಸಲಿದ್ದೇವೆ ಎಂದು ಎನ್‌ಸಿಬಿ ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.