ರಾಜಸ್ತಾನದಲ್ಲಿ ಕಚೋರಿಗಾಗಿ ರೈಲು ನಿಲ್ಲಿಸಿದ ಚಾಲಕ....
- ಕಚೋರಿಗಾಗಿ ರೈಲು ನಿಲ್ಲಿಸಿದ ಚಾಲಕ
- ರಾಜಸ್ಥಾನದ ಅಲ್ವಾರ್‌ನಲ್ಲಿ ಘಟನೆ
- ತನಿಖೆ ಆರಂಭಿಸಿದ ರೈಲ್ವೆ ಇಲಾಖೆ
ಕೆಲದಿನಗಳ ಹಿಂದೆ ಪಾಕಿಸ್ತಾನದಲ್ಲಿ ರೈಲು ಚಾಲಕ ಮೊಸರಿಗಾಗಿ ರೈಲು ನಿಲ್ಲಿಸಿದ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಈಗ ಭಾರತದಲ್ಲೂ ಅಂತಹದೇ ಘಟನೆಯೊಂದು ನಡೆದಿದೆ. ಕಚೋರಿಗಾಗಿ ಚಾಲಕನೋರ್ವ ರೈಲು ನಿಲ್ಲಿಸಿದ್ದು, ಘಟನೆ ಈಗ ವಿವಾದಕ್ಕೆ ಕಾರಣವಾಗಿದೆ. ರಾಜಸ್ಥಾನದ ಅಲ್ವಾರ್‌ನಲ್ಲಿ ಘಟನೆ ನಡೆದಿದೆ. ಕಚೋರಿ ಪ್ಯಾಕೆಟ್ ಸಂಗ್ರಹಿಸಲು ರೈಲೊಂದು ಕ್ರಾಸಿಂಗ್‌ನಲ್ಲಿ ನಿಂತಿದ್ದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಾಲಕನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆಗಿರುವ ವೀಡಿಯೊದಲ್ಲಿ, ವ್ಯಕ್ತಿಯೊಬ್ಬರು ಅಪಾಯಕಾರಿಯಾಗಿ ಟ್ರ್ಯಾಕ್‌ಗಳ ಹತ್ತಿರ ಕಾಯುತ್ತಿರುವುದನ್ನು ಕಾಣಬಹುದು. ಈ ವ್ಯಕ್ತಿಯ ಸುರಕ್ಷತೆಯ ಬಗ್ಗೆ ಕೆಲವರು ಚಿಂತಿತರಾಗಿದ್ದರೂ ಲೊಕೊಮೊಟಿವ್‌ನೊಳಗೆ ಒಬ್ಬ ವ್ಯಕ್ತಿಗೆ ಪ್ಯಾಕೇಜ್ ಅನ್ನು ಈ ವ್ಯಕ್ತಿ ಹಸ್ತಾಂತರಿಸುತ್ತಿದ್ದು, ಇದೇ ವೇಳೆ ಅವನ ಮುಂದೆಯೇ ರೈಲೊಂದು ಬಂದು ನಿಲ್ಲುವುದನ್ನು ನೋಡಬಹುದು. ಇದಾದ ನಂತರ ಯಾವುದೇ ಚಿಂತೆ ಇಲ್ಲದೆ, ಲೊಕೊ ಪೈಲಟ್ ಇಂಜಿನ್‌ನ ಹಾರ್ನ್ ಅನ್ನು ಚಲಾಯಿಸುತ್ತಾನೆ ಮತ್ತು ರೈಲು ಹೊರಡುತ್ತದೆ. ಆದರೆ ರೈಲ್ವೆ ಗೇಟ್‌ನ ಇನ್ನೊಂದು ಬದಿಯಲ್ಲಿ ಹಲವಾರು ವಾಹನಗಳು ಕಾಯುತ್ತಿರುವುದನ್ನು ಕಾಣಬಹುದು.
ವೀಡಿಯೊ ವೈರಲ್ ಆಗುತ್ತಿದ್ದಂತೆ ಆನ್‌ಲೈನ್‌ನಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಹಿಂದಿ ಪತ್ರಿಕೆ ದೈನಿಕ ಭಾಸ್ಕರ್ ವರದಿ ಮಾಡಿದ್ದು, ಇದೇನು ಹೊಸ ಪ್ರಕರಣವಲ್ಲ, ಅಲ್ವಾರ್‌ನ ದೌದ್‌ಪುರ ಗೇಟ್‌ನಲ್ಲಿ (Daudpur gate) ಪ್ರತಿದಿನ ಬೆಳಗ್ಗೆ 8 ಗಂಟೆಗೆ ಇದೇ ರೀತಿಯ ದೃಶ್ಯವನ್ನು ಕಾಣಬಹುದು. ಹಾರ್ನ್ ಮೊಳಗಿದ ತಕ್ಷಣ ರೈಲು ಗೇಟ್ ಸ್ವಲ್ಪ ಹೊತ್ತು ಮುಚ್ಚುತ್ತದೆ. ಲೋಕೋ ಪೈಲಟ್ ಕಚೋರಿಯೊಂದಿಗೆ ಎಂಜಿನ್ ಅನ್ನು ಮುಂದಕ್ಕೆ ತೆಗೆದುಕೊಳ್ಳುವವರೆಗೆ ಎರಡೂ ಬದಿಗಳಲ್ಲಿ ಜನರು ಹಾಗೂ ವಾಹನಗಳು ಕಾಯುತ್ತಿರುತ್ತಾರೆ ಎಂದು ಅದು ವರದಿ ಮಾಡಿದೆ.
ಕಚೋರಿ ಮಾರಿ ವರ್ಷಕ್ಕೆ 60 ಲಕ್ಷ: ಟ್ಯಾಕ್ಸ್ ನೋಟಿಸ್!
ಆದಾಗ್ಯೂ, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜೈಪುರದ ವಿಭಾಗೀಯ ರೈಲ್ವೆ ಮ್ಯಾನೇಜರ್ (DRM) ಈ ವಿಚಾರದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಐವರು ಲೊಕೊ ಪೈಲಟ್‌ಗಳು, ಇಬ್ಬರು ಗೇಟ್‌ಮೆನ್ ಮತ್ತು ಒಬ್ಬ ಬೋಧಕರನ್ನು ಅಮಾನತುಗೊಳಿಸಲಾಗಿದೆ ಎಂದು ಡಿಆರ್‌ಎಂ ನರೇಂದ್ರ ಕುಮಾರ್ (Narendra Kumar) ತಿಳಿಸಿದ್ದಾರೆ. ಮುಂದಿನ ತನಿಖೆ ಮುಗಿದ ಮೇಲೆ ಅಂತಿಮ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
Viral video: ಮೊಸರಿಗಾಗಿ ರೈಲು ನಿಲ್ಲಿಸಿದ ಚಾಲಕ
ಕಳೆದ ವರ್ಷದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣವೊಂದರಲ್ಲಿ ವೀಡಿಯೋವೊಂದು ವೈರಲ್(viral) ಆಗಿತ್ತು. ಅದರಲ್ಲಿ ಪಾಕಿಸ್ತಾನ(Pakistan) ರೈಲು ಚಾಲಕ ಹಾಗೂ ಆತನ ಸಹಾಯಕ ಮೊಸರು ಕೊಳ್ಳುವುದಕ್ಕೋಸ್ಕರ ಸಾವಿರಾರು ಜನರು ಪ್ರಯಾಣಿಸುತ್ತಿದ್ದ ರೈಲನ್ನು ನಿಲ್ಲಿಸಿದ ಘಟನೆ ಸೆರೆಯಾಗಿತ್ತು. ಲಾಹೋರ್(Lahore)ನ ರೈಲ್ವೆ ನಿಲ್ದಾಣದ ಸಮೀಪ ಈ ಘಟನೆ ನಡೆದಿತ್ತು. ರೈಲಿನ ಚಾಲಕನ ಸಹಾಯಕ ಅಲ್ಲೇ ಸಮೀಪದ ಅಂಗಡಿಯೊಂದರಿಂದ ಮೊಸರು ಖರೀದಿಸಿ ತರುತ್ತಿರುವ ಚಿತ್ರಣ ಈ ವಿಡಿಯೋದಲ್ಲಿದೆ. ಈ ಘಟನೆಯೂ ಪಾಕಿಸ್ತಾನದಲ್ಲಿ ರೈಲಿನ ಸುರಕ್ಷತೆ ಹಾಗೂ ನಿಯಮಗಳ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿತ್ತು.
ಕಾಡಾನೆ ಮತ್ತು ಮರಿ ಹಳಿ ದಾಟಲು ರೈಲು ನಿಲ್ಲಿಸಿದ ಚಾಲಕ
ಕಳೆದ ವರ್ಷ ಪಶ್ಚಿಮ ಬಂಗಾಳದ ಅಲಿಪುರ್ದ್ವಾರ್ ರೆಲ್ವೇ ಟ್ವೀಟರ್ ಖಾತೆಯಿಂದ ವೀಡಿಯೋವೊಂದನ್ನು ಪೋಸ್ಟ್ ಮಾಡಲಾಗಿದ್ದು ಕಾಡು ಆನೆ ಮತ್ತು ಅದರ ಮರಿ ರೈಲು ಹಳಿ ದಾಟುವ ವೇಳೆಯಲ್ಲಿ ಚಾಲಕ ರೈಲನ್ನು ಸ್ವಲ್ಪ ದೂರದಲ್ಲೇ ನಿಲ್ಲಿಸಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಾಡು ಆನೆಯನ್ನು ನೋಡುತ್ತಿದ್ದಂತೆಯೇ ಎಮರ್ಜನ್ಸಿ ಬ್ರೇಕ್ ಹಾಕಿದ ರೈಲು ಚಾಲಕರು ರೈಲನ್ನು ಸ್ವಲ್ಪ ದೂರದಲ್ಲೇ ನಿಲ್ಲಿಸಿದ್ದಾರೆ. ಕಾಡು ಆನೆ ಮತ್ತು ಮರಿ ರೈಲಿನ ಟ್ರ್ಯಾಕ್ ದಾಟಿದ ನಂತರ ಮತ್ತೆ ರೈಲು ಮುಂದಕ್ಕೆ ಸಾಗಿದೆ.