ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಹೊತ್ತಿ ಉರಿದ ಪ್ರಯಾಣಿಕರ ಬಸ್, 45 ಮಂದಿ ಪ್ರಾಣ ಉಳಿಸಿದ ಚಾಲಕ, ಬಸ್ ಸಂಪೂರ್ಣ ಹೊತ್ತಿ ಉರಿದಿದೆ. ಚಾಲಕನ ಸಾಹಸ ಹಾಗೂ ಧೈರ್ಯದಿಂದ ಪ್ರಯಾಣಿಕರ ಪ್ರಾಣ ಉಳಿದಿದೆ.
ಗ್ವಾಲಿಯರ್ (ನ.25) ಪ್ರಯಾಣಿಕರ ಹೊತ್ತು ಚಲಿಸುತ್ತಿದ್ದ ಬಸ್ ಹೆದ್ದಾರಿಯಲ್ಲಿ ಹೊತ್ತಿ ಉರಿದ ಘಟನೆ ನಡೆದಿದೆ. 45 ಪ್ರಯಾಣಿಕರಿದ್ದ ಬಸ್ ವೇಗವಾಗಿ ಸಾಗುತ್ತಿದ್ದ ವೇಳೆ ಟೈಯರ್ ಸ್ಫೋಟಗೊಂಡ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಹರ್ಯಾಣಗ ಗುರುಗ್ರಾಂನಿಂದ ಮಧ್ಯಪ್ರದೇಶದ ಪನ್ನಾಗೆ ತೆರಳುತ್ತಿದ್ದ ನಡುವೆ ಬಸ್ ಹೊತ್ತಿ ಉರಿದಿದೆ. ಘಟನೆಯಲ್ಲಿ UP93 CT-6747 ಬಸ್ ಸಂಪೂರ್ಣ ಹೊತ್ತಿ ಉರಿದಿದೆ. ಆದರೆ ಚಾಲಕನ ಸಮಯಪ್ರಜ್ಞೆ, ಧೈರ್ಯದಿಂದ ಎಲ್ಲಾ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ರಕ್ಷಣೆ ಮಾಡಲಾಗಿದೆ.
ಪುರಾನಿ ಚವಾನಿ ವಲಯದಲ್ಲಿ ಸಂಚರಿಸುತ್ತಿದ್ದ ವೇಳೆ ಬಸ್ ಟೈಯರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ವೇಗವಾಗಿ ಸಾಗುತ್ತಿದ್ದ ವೇಳೆ ಟೈಯರ್ ಸ್ಫೋಟಗೊಂಡು ಬಸ್ ನಿಯಂತ್ರಣ ತಪ್ಪಿದೆ. ಆದರೆ ಚಾಲಕ ಸತತ ಪ್ರಯತ್ನದ ಮೂಲಕ ಬಸ್ ನಿಯಂತ್ರಣಕ್ಕೆ ತಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾನೆ. ತಕ್ಷಣವೇ ಪ್ರಯಾಣಿಕರಿಗೆ ಬಸ್‌ನಿಂದ ಇಳಿಯಲು ಸೂಚಿಸಿದ್ದಾನೆ. ಇಷ್ಟೇ ಅಲ್ಲ ಬಸ್ ಎಮರ್ಜೆನ್ಸಿ ಡೋರ್ ತೆರೆದು ಪ್ರಯಾಣಿಕರನ್ನು ತಕ್ಷಣವೇ ಸುರಕ್ಷಿತವಾಗಿ ಇಳಿಸಿದ್ದಾನೆ. ಬಸ್ ನಿಲ್ಲಿಸಿದ 20 ನಿಮಿಷದಲ್ಲಿ ಸಂಪೂರ್ಣ ಹೊತ್ತಿ ಉರಿದಿದೆ. ಅಷ್ಟರಲ್ಲೇ ಬಸ್‌ನ 45 ಪ್ರಯಾಣಿಕರು ಸುರಕ್ಷಿತವಾಗಿ ಇಳಿದಿದ್ದಾರೆ.
ನಿದ್ದೆಗೆ ಜಾರಿದ್ದ ಪ್ರಯಾಣಿಕರು
ಸುದೀರ್ಘ ಬಸ್ ಪ್ರಯಾಣವಾಗಿದ್ದ ಕಾರಣ ಪ್ರಯಾಣಿಕರು ನಿದ್ದೆಗೆ ಜಾರಿದ್ದರು. ಆದರೆ ಟೈಯರ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬಸ್ ಚಾಲಕ ಪ್ರಯಾಣಿಕರಿಗೆ ಸಂದೇಶ ನೀಡಿದ್ದಾನೆ. ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ ನಿಲ್ಲಿಸುತ್ತಿದ್ದೇನೆ, ತಕ್ಷಣ ಇಳಿಯಬೇಕು ಎಂದು ಸೂಚಿಸಿದ್ದಾನೆ. ಕೆಲ ಪ್ರಯಾಣಿಕರು ನಿದ್ದೆಗೆ ಜಾರಿದ್ದರೆ, ಹಲವರು ನಿದ್ದೆ ಮಾಡಲು ಮುಂದಾಗಿದ್ದರು. ಚಾಲಕನ ಸಂದೇಶದ ಬೆನ್ನಲ್ಲೇ ಎಲ್ಲರೂ ಅಲರ್ಟ್ ಆಗಿದ್ದಾರೆ. ಬಸ್ ನಿಲ್ಲಿದ ತಕ್ಷಣವೇ ಇಳಿಯಲು ಆರಂಭಿಸಿದ್ದಾರೆ. ಎಮರ್ಜೆನ್ಸಿ ಡೋರ್ ಮೂಲಕವೂ ಪ್ರಯಾಣಿಕರು ಇಳಿದಿದ್ದಾರೆ. ಹೀಗಾಗಿ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ.
ಬೆಂಕಿ ನಂದಿಸಿದ ಅಗ್ನಿಶಾಮಕ ದಳ
ಬಸ್ ನಿಲ್ಲಿಸಿದ ಪ್ರಯಾಣಿಕರ ಇಳಿಸಿದ ಬೆನ್ನಲ್ಲೇ ಅಗ್ನಿಶಾಮಕ ದಳಕ್ಕೂ ಮಾಹತಿ ನೀಡಲಾಗಿದೆ.ಹೀಗಾಗಿ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ. ಇತ್ತ ಪೊಲೀಸರು ಆಗಮಿಸಿದ್ದಾರೆ. ಆದರೆ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ದಳ ಯಶಸ್ವಿಯಾಗಿದೆ. ಘಟನೆ ಕುರಿತು ಮಾಹಿತಿ ನೀಡಿದ ಪೊಲೀಸರು, ಚಾಲಕನ ಸಮಯಪ್ರಜ್ಞೆ, ಜೊತೆಗೆ ಎಚ್ಚರಿಕೆ ಚಾಲನೆಯಿಂದ ಅನಾಹುತ ತಪ್ಪಿದೆ ಎಂದಿದ್ದಾರೆ.


