ನಿರ್ಮಾಣ ಹಂತದ ಫ್ಲೈಒವರ್‌ನಿಂದ ಕಾಂಕ್ರೀಟ್ ಬೀಮೊಂದು ಕಾರಿನ ಮೇಲೆ ಬಿದ್ದು, ಕಾರಿನ ಮುಂಭಾಗದ ಗಾಜು ಸಂಪೂರ್ಣ ನಜ್ಜುಗುಜ್ಜಾದಂತಹ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಈ ಅವಘಡದಲ್ಲಿ ಕಾರು ಚಾಲಕ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ
ಮುಂಬೈ: ನಿರ್ಮಾಣ ಹಂತದ ಫ್ಲೈಒವರ್‌ನಿಂದ ಕಾಂಕ್ರೀಟ್ ಬೀಮೊಂದು ಕಾರಿನ ಮೇಲೆ ಬಿದ್ದು, ಕಾರಿನ ಮುಂಭಾಗದ ಗಾಜು ಸಂಪೂರ್ಣ ನಜ್ಜುಗುಜ್ಜಾದಂತಹ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಈ ಅವಘಡದಲ್ಲಿ ಕಾರು ಚಾಲಕ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಈ ಘಟನೆಯ ವೀಡಿಯೋ ಈಗ ವೈರಲ್ ಆಗುತ್ತಿದೆ.ಈ ದೃಶ್ಯವನ್ನು ನೆಟ್ಟಿಗರು ಹಾಲಿವುಡ್ ಸಿನಿಮಾ Final Destinationಗೆ ಹೋಲಿಕೆ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾ ರೆಡಿಟ್‌ನಲ್ಲಿ ವೈರಲ್ ಆದ ವೀಡಿಯೋದಲ್ಲಿ ಕಾಂಕ್ರೀಟ್ ಬೀಮೊಂದು ಸೀದಾ ನೇರವಾಗಿ ಕಾರಿನ ಮುಂಭಾಗದ ಗ್ಲಾಸ್ ಮೇಲೆ ಬಿದ್ದಿದೆ. ಮುಂಬೈನ ಮೀರಾ ರೋಡ್‌ನಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಯ ಬೀಮ್ ಇದಾಗಿದೆ. ವೈರಲ್ ಆದ ವೀಡಿಯೋದಲ್ಲಿ ಈ ಕಾಂಕ್ರೀಟ್ ಬೀಮ್ ನೇರವಾಗಿ ಡ್ರೈವರ್ ಕುಳಿತಿದ್ದ ಸ್ಥಳದಲ್ಲೇ ಬಿದ್ದಿರುವುದನ್ನು ಕಾಣಬಹುದಾಗಿದ್ದು, ಈ ಆಘಾತಕಾರಿ ಅವಘಡದಿಂದ ಡ್ರೈವರ್ ಹೇಗೆ ಎಸ್ಕೇಪ್ ಆದ ಎಂಬುದು ತಿಳಿದು ಬಂದಿಲ್ಲ.
ಮೆಟ್ರೋ ಕಾಮಗಾರಿ ವೇಳೆ ಕುಸಿದು ಬಿದ್ದ ಕ್ರೇನ್, ವಿಡಿಯೋ ವೈರಲ್!
ಈಗ ಸೋಶಿಯಲ್ ಮೀಡಿಯದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಕಾರು ಚಾಲಕ ಕಾರಿನ ಡೋರನ್ನು ಕ್ಲೋಸ್ ಮಾಡಿ ಮುಂದೆ ಬಂದು ಕಾರಿಗೆ ಏನಾಗಿದೆ ಎಂಬುದನ್ನು ನೋಡುವುದನ್ನು ಕಾಣಬಹುದಾಗಿದೆ. ಅಲ್ಲಿ ಆಗಲೇ ಪೊಲೀಸ್ ಕೂಡ ಹಾಜರಿದ್ದು, ಅವರು ಈ ಘಟನೆಯಲ್ಲಿ ಹಾನಿಗೀಡಾದ ಫೋಟೋವನ್ನು ಮೊಬೈಲ್‌ನಲ್ಲಿ ತೆಗೆಯುತ್ತಿರುವುದನ್ನು ಕಾಣಬಹುದಾಗಿದೆ. ಹಾಗೆಯೇ ಅಲ್ಲಿ ಆದ ಅನಾಹುತ ನೋಡಿ ದಾರಿಯಲ್ಲಿ ಹೋಗುವವರು ಕೂಡ ನಿಂತುಕೊಂಡು ಹಾನಿಗೀಡಾದ ಕಾರನ್ನು ನೋಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ನಂತರ ಕ್ಯಾಮರಾ ಫ್ಲೈವರ್ ಕೆಳಭಾಗವನ್ನು ತೋರಿಸುತ್ತಿದ್ದು, ಅಲ್ಲಿ ಕಾಂಕ್ರೀಟ್ ಬೀಮ್ ಮಿಸ್ ಆಗಿರುವುದು ಕಾಣಿಸುತ್ತಿದೆ. ಅನೇಕರು ಈ ವೀಡಿಯೋವನ್ನು ಹಾಲಿವುಡ್‌ನ ಹಾರರ್ ಥ್ರಿಲ್ಲರ್ ಸಿನಿಮಾ ಫೈನಲ್ ಡೆಸ್ಟಿನೇಷನ್‌ಗೆ ಹೋಲಿಕೆ ಮಾಡಿದ್ದಾರೆ. ಈ ವೀಡಿಯೋ ನಿಜಕ್ಕೂ ಭಯಹುಟ್ಟಿಸುತ್ತಿದೆ, ಸೀದಾ ಫೈನಲ್ ಡೆಸ್ಟಿನೇಷನ್ ಸಿನಿಮಾದಿಂದ ಈ ಸೀನ್ ತೆಗೆದಂತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮುಂಬೈನ ಮುಲುಂದ್‌ನಲ್ಲಿರುವ ಆರ್ ಮಾಲ್ ಎದುರಿಗಿರುವ ಮೆಟ್ರೋ ಸೇತುವೆ ಕೂಡ ಕಳಪೆ ಸ್ಥಿತಿಯಲ್ಲಿ ಇರುವಂತೆ ಕಂಡು ಬರುತ್ತಿದೆ. ಏನಾದರೂ ಮೇಲಿನಿಂದ ಬೀಳಬಹುದು ಎಂಬಂತೆ ಈ ಮೆಟ್ರೋ ಸೇತುವೆ ಇದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಿನ್ನೆಯಷ್ಟೇ ಈ ದಾರಿಯಲ್ಲಿ ಹೋಗುವಾಗ ಇದು ಒಂದು ದಿನ ಪಕ್ಕಾ ಬೀಳುತ್ತದೆ ಎಂದು ಯೋಚನೆ ಮಾಡಿದ್ದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಘಟನೆಯ ಭಯಾನಕ ವೀಡಿಯೋ ಇಲ್ಲಿದೆ ನೋಡಿ
