ಚಮೋಲಿ(ಫೆ.09): ಉತ್ತರಾಖಂಡದ ಜೋಶಿಮಠದ ಬಳಿ ಭಾನುವಾರ ಸಂಭವಿಸಿದ ಹಿಮಕುಸಿತ ನೈಸರ್ಗಿಕ ಪ್ರಕೋಪವೇ ಅಥವಾ ಶತ್ರುಗಳು ಎಸಗಿದ ದುಷ್ಕೃತ್ಯವೇ ಎಂಬ ಜಿಜ್ಞಾಸೆ ಈಗ ಆರಂಭವಾಗಿದೆ. ಖುದ್ದು ರಕ್ಷಣಾ ವಿಜ್ಞಾನಿಗಳೇ ಈ ಅನುಮಾನ ವ್ಯಕ್ತಪಡಿಸಿದ್ದು, ವಿಸ್ತೃತ ಅಧ್ಯಯನಕ್ಕೆ ಮುಂದಾಗಿದ್ದಾರೆ.

ಇದರ ಬೆನ್ನಲ್ಲೇ ಘಟನೆಯ ನಿಖರ ಕಾರಣದ ಅಧ್ಯಯನಕ್ಕೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ಇತರ ಸಂಸ್ಥೆಗಳ ವಿಜ್ಞಾನಿಗಳು ಸೋಮವಾರ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಇಸ್ರೋ ಸಹಾಯವನ್ನೂ ಪಡೆಯಲಾಗುತ್ತದೆ ಎಂದು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಸೋಮವಾರ ತಿಳಿಸಿದ್ದಾರೆ.

ಕಾರಣ ಏನು?:

ಘಟನೆಯು ದುಷ್ಕೃತ್ಯ ಆಗಿರಬಹುದು ಎಂದು ರಕ್ಷಣಾ ಇಲಾಖೆ ತಜ್ಞರು ಶಂಕಿಸುವುದಕ್ಕೆ ಕಾರಣ ಈಗಿನ ಹವಾಮಾನ. ಉತ್ತರಾಖಂಡದಲ್ಲೀಗ ಭಾರಿ ಚಳಿಗಾಲವಿದ್ದು, ಉಷ್ಣತೆ ಸುಮಾರು ಮೈನಸ್‌ 20 ಡಿಗ್ರಿ ಸೆಲ್ಸಿಯಸ್‌ ಇದೆ. ಹಿಮಕುಸಿತ ಸಂಭವಿಸಿದ ಪ್ರದೇಶವು ಗಟ್ಟಿಯಾದ ನೀರ್ಗಲ್ಲಿನಿಂದ ಆವೃತವಾಗಿದೆ. ನೀರ್ಗಲ್ಲುಗಳ ಬಗ್ಗೆ ಸಂಶೋಧನೆ ನಡೆಸುವ ವಿಜ್ಞಾನಿಗಳ ಪ್ರಕಾರ ಚಳಿಗಾಲದಲ್ಲಿ ಹಿಮಕುಸಿತ ಸಂಭವಿಸಲು ಸಾಧ್ಯವೇ ಇಲ್ಲ. ಘಟನೆಯಲ್ಲಿ ಅಣೆಕಟ್ಟೆಯೊಂದು ಕೊಚ್ಚಿಕೊಂಡು ಹೋಗಿರುವುದರಿಂದ ಭಾರತದ ಜಲವಿದ್ಯುತ್‌ ಯೋಜನೆಯನ್ನು ಹಾಳುಗೆಡವಲು ಶತ್ರುಗಳು ಈ ಕೃತ್ಯ ಎಸಗಿರುವ ಸಾಧ್ಯತೆಯೂ ಇದೆ. ಜಗತ್ತಿನಾದ್ಯಂತ ಹಲವಾರು ಮಿಲಿಟರಿಗಳು ಪರ್ವತ ಪ್ರದೇಶಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಶತ್ರುಗಳ ಮೇಲೆ ದಾಳಿ ನಡೆಸಲು ಬಳಸುತ್ತವೆ ಎಂದು ರಕ್ಷಣಾ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ವಿಜ್ಞಾನಿಗಳ ದೌಡು:

ಇದರ ಬೆನ್ನಲ್ಲೇ ಅಧ್ಯಯನಕ್ಕೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಡಿಫೆನ್ಸ್‌ ಜಿಯೋಇನ್‌ಫಾರ್ಮೆಟಿಕ್ಸ್‌ ರೀಸಚ್‌ರ್‍ ಎಸ್ಟಾಬ್ಲಿಷ್‌ಮೆಂಟ್‌ (ಡಿಜಿಆರ್‌ಇ) ವಿಜ್ಞಾನಿಗಳು ಉತ್ತರಾಖಂಡಕ್ಕೆ ದೌಡಾಯಿಸಿದ್ದಾರೆ.

ಈ ಕುರಿತು ಉಪಗ್ರಹಗಳ ಚಿತ್ರ ಹಾಗೂ ಘಟನೆಯ ಸ್ಥಳ ಪರಿಶೀಲನೆ ನಡೆಸಿ ಕಾರಣ ಪತ್ತೆಹಚ್ಚಲು ಮುಂದಾಗಿದ್ದೇವೆ. ಇಸ್ರೋ ಸಹಾಯವನ್ನೂ ಪಡೆಯಲಿದ್ದೇವೆ ಎಂದು ಮುಖ್ಯಮಂತ್ರಿ ರಾವತ್‌ ಹೇಳಿದ್ದಾರೆ.

ವಿಜ್ಞಾನಿಗಳ ಅನುಮಾನಕ್ಕೆ ಕಾರಣ ಏನು?

- ಉತ್ತರಾಖಂಡದಲ್ಲೀಗ ಭಾರಿ ಚಳಿಗಾಲವಿದ್ದು, ಉಷ್ಣತೆ ಸುಮಾರು ಮೈನಸ್‌ 20 ಡಿಗ್ರಿ ಸೆ.

- ಹಿಮಕುಸಿತ ಸಂಭವಿಸಿದ ಪ್ರದೇಶವು ಗಟ್ಟಿಯಾದ ನೀರ್ಗಲ್ಲಿನಿಂದ ಆವೃತ

- ಇಷ್ಟೊಂದು ಚಳಿ ವಾತಾವರಣದಲ್ಲಿ ಹಿಮಕುಸಿತ ಸಾಧ್ಯವೇ ಇಲ್ಲ

- ಹೀಗಾಗಿ ಇದು ಶತ್ರುಗಳ ದುಷ್ಕೃತ್ಯ ಇರಲೂಬಹುದು ಎಂಬುದು ವಿಜ್ಞಾನಿಗಳ ಶಂಕೆ