* ಕೋವಿಡ್‌ ನಿಗ್ರಹಕ್ಕೆ  ಅಭಿವೃದ್ಧಿಪಡಿಸಿರುವ 2-ಡಿಆಕ್ಸಿ-ಡಿ-ಗ್ಲುಕೋಸ್‌ (2ಡಿಜಿ) ಔಷಧ* 2-ಡಿಜಿ ಕೋವಿಡ್‌ ಔಷಧ ತಂತ್ರಜ್ಞಾನ ಹಸ್ತಾಂತರಕ್ಕೆ ಡಿಆರ್‌ಡಿಒ ನಿರ್ಧಾರ* ಆಸಕ್ತ ಕಂಪನಿಗಳಿಂದ ಅರ್ಜಿ ಆಹ್ವಾನ

ಹೈದ್ರಾಬಾದ್‌(ಜೂ.10): ಕೋವಿಡ್‌ ನಿಗ್ರಹಕ್ಕೆ ತಾನು ಅಭಿವೃದ್ಧಿಪಡಿಸಿರುವ 2-ಡಿಆಕ್ಸಿ-ಡಿ-ಗ್ಲುಕೋಸ್‌ (2ಡಿಜಿ) ಔಷಧದ ತಂತ್ರಜ್ಞಾನವನ್ನು ಖಾಸಗಿ ಔಷಧ ಉತ್ಪಾದನಾ ಕಂಪನಿಗಳಿಗೆ ಹಸ್ತಾಂತರಿಸಲು ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಿರ್ಧರಿಸಿದೆ. ದೊಡ್ಡ ಮಟ್ಟದಲ್ಲಿ 2ಡಿಜಿ ಔಷಧ ಉತ್ಪಾದನೆಯ ನಿಟ್ಟಿನಲ್ಲಿ ಅದು ಈ ನಿರ್ಧಾರಕ್ಕೆ ಬಂದಿದೆ.

ಈ ಕುರಿತು ಅದು ಆಸಕ್ತ ಕಂಪನಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಔಷಧ ಕಂಪನಿಗಳು ಜೂ.17ರೊಳಗೆ ತಂತ್ರಜ್ಞಾನ ಪಡೆಯುವ ಕುರಿತು ಆಸಕ್ತಿಯ ಅರ್ಜಿ ಸಲ್ಲಿಸಬಹುದಾಗಿದೆ. ಎಪಿಐ ಉತ್ಪಾದನೆ ಕುರಿತು ಔಷಧ ಲೈಸೆನ್ಸ್‌ ಹೊಂದಿರುವ ಕಂಪನಿಗಳು ಮಾತ್ರವೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇಲೆ 15 ಸಂಸ್ಥೆಗಳಿಗೆ ಮಾತ್ರವೇ ತಂತ್ರಜ್ಞಾನ ಹಸ್ತಾಂತರ ಮಾಡಲಾಗುವುದು ಎಂದು ಡಿಆರ್‌ಡಿಒ ತಿಳಿಸಿದೆ.

2ಡಿಜಿ ಔಷಧ ಸೇವಿಸಿದ ಕೊರೋನಾ ಸೋಂಕಿತರು, ಸೋಂಕಿನಿಂದ ಶೀಘ್ರವೇ ಚೇತರಿಸಿಕೊಳ್ಳುವುದು ಕ್ಲಿನಿಕಲ್‌ ಪ್ರಯೋಗದ ವೇಳೆ ಸಾಬೀತಾಗಿದೆ. ಪೌಡರ್‌ ಸ್ವರೂಪದಲ್ಲಿರುವ ಈ ಔಷಧವನ್ನು ಇದೀಗ ಹೈದ್ರಾಬಾದ್‌ನ ಡಾ. ರೆಡ್ಡೀಸ್‌ ಲ್ಯಾಬ್‌ ಮಾತ್ರವೇ ಉತ್ಪಾದಿಸುತ್ತಿದ್ದು, 1 ಪ್ಯಾಕ್‌ಗೆ 990 ರು. ದರ ನಿಗದಿ ಪಡಿಸಿದೆ.