ಅಂಬೇಡ್ಕರ್‌ ಅವರನ್ನು ಸಂವಿಧಾನ ಶಿಲ್ಪಿ, ನಿಯಮಗಳ ಅನುಷ್ಠಾನಕಾರ, ಸಮಾನತೆಯ ಹರಿಕಾರ, ಮೀಸಲಾತಿ ನೀಡಿಕೆಯ ಮಹಾತಪಸ್ವಿ ಎಂಬಂತೆ ವರ್ಣಿಸುವುದು, ವಿಶ್ಲೇಷಿಸುವುದು, ವಿಮರ್ಶಿಸುವುದು ಉಂಟು. ಅದರಲ್ಲೂ, ನವೆಂಬರ್‌ 26ರ ಸಂವಿಧಾನ ದಿನಾಚರಣೆ ದಿವಸ ರಾಷ್ಟ್ರವ್ಯಾಪಿ ಅಂಬೇಡ್ಕರ್‌ ಅವರನ್ನು ಕಾನೂನಿನ ಕಣ್ಣಿನಿಂದ ನೋಡುವುದು ಸಹಜ ಪ್ರಕ್ರಿಯೆ.

ಅದೇ ರೀತಿ ಏಪ್ರಿಲ್ 14 ಮತ್ತು ಡಿಸೆಂಬರ್‌ 6ರಂದು ವಿಶೇಷವಾಗಿ ಅಂಬೇಡ್ಕರರ ಸ್ಮರಣೆ ದೇಶದುದ್ದಗಲದ ಜೊತೆಜೊತೆಗೆ ದೇಶದ ಗಡಿ ಮಿರಿ ಹರಿದಾಡುತ್ತದೆ. ಶೋಷಿತವರ್ಗ, ನಮ್ಮ ಉಸಿರ ಬಿಸಿ ತಗ್ಗಿದ್ದು ಅಂಬೇಡ್ಕರದಿಂದಲೇ ಎಂಬ ಭಾವವನ್ನು ಇಂದಿಗೂ ಇರಿಸಿಕೊಂಡಿದೆ. ಇಷ್ಟಾಗಿಯೂ ಅಭಿಮಾನ, ಶ್ಲಾಘನೆ ಎಲ್ಲವೂ ಕೂಡ ಅಂಕಿ ಸಂಖ್ಯೆಗಳು, ನಿಯಮಗಳನ್ನು ಅನುಸರಿಸಿಯೇ ಇರುತ್ತವೆ. ಅವರ ಕುರಿತಾದ ಚರ್ಚೆಗಳೆಲ್ಲ ಅಂಬೇಡ್ಕರರು ಕೊಟ್ಟಹಕ್ಕುಗಳ ಬಗ್ಗೆ, ನ್ಯಾಯಿಕ ನಿಯಮಗಳ ಬಗ್ಗೆ, ಪೌರತ್ವದ ಬಗ್ಗೆ ಗಿರಕಿ ಹೊಡೆಯುತ್ತವೆ. ಸಂವಿಧಾನದ ಕರಡು ರಚನೆಯ ಸಂದರ್ಭ ಸದಸ್ಯರ ಅಲಭ್ಯತೆ ಜೊತೆಗೆ, ಅಂಬೇಡ್ಕರರು ವಹಿಸಿದ ಅಪಾರ ಶ್ರಮದ ಕುರಿತು ಚರ್ಚೆಗಳಾಗುತ್ತವೆ.

ಅಂಬೇಡ್ಕರ್‌ ರಾಷ್ಟ್ರೀಯ ಪ್ರಜ್ಞೆ

ಸಂವಿಧಾನ ರಚನೆಯ ನೆಲೆಗಟ್ಟಿನಿಂದ ವಿಶ್ವದ ಅನೇಕ ಸಂವಿಧಾನಗಳ ಅಧ್ಯಯನ, ಮೀಸಲಾತಿಯ ವಿಸ್ತರಣೆ ಕುರಿತ ಚಿಂತನೆ ಇವುಗಳೇ ಚರ್ಚೆಯ ಆದ್ಯ ಭಾಗವಾಗುತ್ತವೆ. ಇವೆಲ್ಲವೂ ಸ್ವೀಕೃತವೇ ಹೌದು. ಅಂಬೇಡ್ಕರರನ್ನು ಹೊರತುಪಡಿಸಿದ ಸಂವಿಧಾನದ ಪರಿಕಲ್ಪನೆ ಅಂಗವೈಕಲ್ಯವೆನಿಸುತ್ತದೆ. ಇದರಿಂದ ಆಚೆಗೆ ಬಾಬಾಸಾಹೇಬರನ್ನು ಒಬ್ಬ ಶ್ರೇಷ್ಠ ಆರ್ಥಿಕ ತಜ್ಞ ಎಂದೂ ಬೆರಳೆಣಿಕೆಯ ಜನ ನೆನಪಿಸಿಕೊಳ್ಳುವುದಿದೆ.

ಆದರೆ ಅಂಬೇಡ್ಕರರನ್ನು ಮತ್ತೊಂದು ಮಜಲಿನಲ್ಲಿ ದೃಷ್ಟಿಸುವ ಅನಿವಾರ್ಯತೆ ಈವರೆಗೂ ಕಾಣಿಸಿದಂತಿಲ್ಲ. ಅದು ಅವರೊಳಗಿನ ರಾಷ್ಟ್ರೀಯ ಪ್ರಜ್ಞೆ. ವಾಸ್ತವವಾಗಿ ಅಂಬೇಡ್ಕರ್‌ ಅವರೊಳಗೆ ಐಕ್ಯತೆ, ರಾಷ್ಟ್ರ ಪ್ರೇಮ ಜಾಗೃತ ಜ್ಯೋತಿ ಆಗಿತ್ತು. ಆ ಅದಮ್ಯ ಧ್ಯೇಯವನ್ನು ಸಾರ್ವತ್ರಿಕವಾಗಿ ವಿಮರ್ಶೆಗೆ ಹಚ್ಚಿದ್ದು ತೀರಾ ವಿರಳ. ಭೀಮನೊಳಗಣ ನೈಜ ರಾಷ್ಟ್ರ ಪ್ರೇಮ ಒರೆಗೆ ಹಚ್ಚುವ ಅವಶ್ಯಕತೆ ಇದೆ.

ಐಕ್ಯ ರಾಷ್ಟ್ರದ ಪ್ರತಿಪಾದನೆ

ಸಂವಿಧಾನ ರಚನಾ ಸಭೆಯ ತಮ್ಮ ಸುದೀರ್ಘ ಪಯಣದಲ್ಲಿ ನಿಯಮಕ್ಕೆ ಕೊಟ್ಟಸ್ಥಾನಮಾನವನ್ನು ನೈತಿಕತೆಗೂ ಹಂಚಿದ ಕೀರ್ತಿ ಅವರದ್ದು. ಕಾನೂನುಗಳ ಅಳವಡಿಕೆಗೆ ಹೊಂದಿದ್ದ ಕಟಿಬದ್ಧತೆಯನ್ನು ರಾಷ್ಟ್ರ ಸ್ಥಿರತೆಗೂ ಅವರು ನೀಡಿದ್ದರು. 17 ಡಿಸೆಂಬರ್‌ 1949ರ ಸಂವಿಧಾನ ರಚನಾ ಸಭೆಯಲ್ಲಿನ ತಮ್ಮ ಮೊದಲ ಭಾಷಣದಲ್ಲಿ ಅವರು ಉಲ್ಲೇಖಿಸಿದ ಅನೇಕ ಸಂಗತಿಗಳು ರಾಷ್ಟ್ರಪ್ರೇಮದ ಸೆಲೆಯನ್ನು ಅನಾವರಣ ಮಾಡುತ್ತವೆ. ಉದಾಹರಣೆಗೆ, ನೆಹರೂ ಮಂಡಿಸಿದ ಗಣರಾಜ್ಯದ ನಿರ್ಣಯವನ್ನು ಕುರಿತು ರಾಷ್ಟ್ರಗಳ ಗಂತವ್ಯಗಳನ್ನು ನಿರ್ಧರಿಸುವಾಗ ವ್ಯಕ್ತಿಗಳ, ಪಕ್ಷಗಳ ಗಂತವ್ಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು. ಎಲ್ಲದರಲ್ಲೂ ರಾಷ್ಟ್ರವನ್ನೇ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಅಭಿಪ್ರಾಯಿಸಿದ್ದಾರೆ.

ಅಂತೆಯೇ ಸಂವಿಧಾನ ರಚನಾ ಸಭೆಯಲ್ಲಿ ಮುಸ್ಲಿಂ ಲೀಗನ್ನು ಸೇರಿಸಿಕೊಳ್ಳಬೇಕೆಂದು ಸಲಹೆ ನೀಡುತ್ತಾ, ‘ಒಂದು ತಿದ್ದುಪಡಿಯನ್ನು ಸದಾ ಬಲತ್ಕಾರವಾಗಿ ಹೇರುತ್ತಾ ಭೀತಿಯನ್ನುಂಟು ಮಾಡುವುದು ವಿಜಯವಲ್ಲ. ನೀವು ಯಶಸ್ವಿಯಾಗದಿದ್ದರೆ, ನಿಮಗೆ ಯಾವ ಅಧಿಕಾರವೂ ಉಳಿಯುವುದಿಲ್ಲ. ಶಾಂತಿ-ಸಂಧಾನ ವಿಫಲವಾದರೆ ಬಲಪ್ರಯೋಗ ಉಳಿಯುತ್ತದೆ. ಆದರೆ ಬಲಪ್ರಯೋಗವೂ ವಿಫಲವಾದರೆ ಶಾಂತಿ ಸಂಧಾನದ ಯಾವ ನಿರೀಕ್ಷೆಯೂ ಉಳಿಯುವುದಿಲ್ಲ’ ಎಂದಿದ್ದರು.

ಈ ಹೇಳಿಕೆ ಅಂಬೇಡ್ಕರರು ಐಕ್ಯ ರಾಷ್ಟ್ರವನ್ನು ಎಷ್ಟುಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದರು ಎಂಬುದರ ದ್ಯೋತಕವಾಗಿದೆ. ‘ರಾಷ್ಟ್ರ ಕಟ್ಟುವಾಗ ಜನಗಳನ್ನು ಭೀತಿಗೀಡು ಮಾಡುವಂತಹ ಶಬ್ದಗಳನ್ನು ಪಕ್ಕಕ್ಕಿಡೋಣ, ನಾವು ಕೇವಲ ಘೋಷವಾಕ್ಯಗಳಿಂದ ದೇಶ ಕಟ್ಟಲಾಗುವುದಿಲ್ಲ’ ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು.

ಬಹುತ್ವದಲ್ಲೂ ಏಕತೆ ಸಾಧ್ಯ

ಮತ್ತೊಂದು ಸಂದರ್ಭದಲ್ಲಿ, ‘ನಮ್ಮಲ್ಲಿ ಜಾತಿ ಮತಗಳ ನಡುವೆಯೂ ನಾವು ಯಾವುದೋ ಒಂದು ರೂಪದಲ್ಲಿ ಸಂಯುಕ್ತ ಜನಾಂಗವಾಗುತ್ತೇವೆ ಎನ್ನುವುದರಲ್ಲಿ ನನಗೆ ಅನುಮಾನವೇ ಇಲ್ಲ. ಸದರಿ ದೃಷ್ಟಿಕೋನ ಬಹುತ್ವದಲ್ಲೂ ಏಕತೆ ಸಾಧ್ಯವೆಂಬ ಆಶಾವಾದ ಇಟ್ಟುಕೊಂಡಿದ್ದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಸಮಯ ಮತ್ತು ಸನ್ನಿವೇಶ ಒಟ್ಟುಗೂಡಿದರೆ ಈ ದೇಶವು ಒಂದಾಗುವುದನ್ನು ಜಗತ್ತಿನ ಯಾವುದೇ ಶಕ್ತಿಯೂ ತಡೆಯಲಾರದು. ಈ ಸಭೆಯು ಸಾರ್ವಭೌಮ ಅಧಿಕಾರವನ್ನು ತನ್ನದನ್ನಾಗಿ ಮಾಡಿಕೊಂಡಿದ್ದರೆ, ಅದನ್ನು ವಿವೇಕದಿಂದ ಪ್ರಯೋಗಿಸಲು ಸಿದ್ಧವಾಗಿದೆ ಎನ್ನುವುದನ್ನು ನಮ್ಮ ನಡವಳಿಕೆಯಿಂದ ಸಾಧಿಸಿ ತೋರಿಸೋಣ.

ದೇಶದ ಎಲ್ಲ ವಿಭಾಗಗಳೊಡನೆ ವ್ಯವಹರಿಸುವಾಗ ನಮಗೆ ಇರುವುದು ಅದೊಂದೇ ಮಾರ್ಗ. ಒಗ್ಗಟ್ಟಿನೆಡೆಗೆ ನಮ್ಮನ್ನು ಕರೆದೊಯ್ಯಲು ಬೇರೆ ಮಾರ್ಗ ಇಲ್ಲ, ಈ ವಿಷಯವಾಗಿ ನಾವು ಯಾವುದೇ ಅನುಮಾನ ಇಟ್ಟುಕೊಳ್ಳದಿರೋಣ’ ಎಂದಿದ್ದರು. ಈ ಸಾಲುಗಳು, ಒಟ್ಟುಗೂಡಿಸುವ ಪ್ರಕ್ರಿಯೆಯಲ್ಲಿ ಸಂಯಮ ಮತ್ತು ಪ್ರಜ್ಞೆ ಎಷ್ಟುಮುಖ್ಯ ಎಂಬುದನ್ನು ಸಮರ್ಥಿಸುತ್ತವೆ.

ಪ್ರಕೃತಿದತ್ತವಾಗಿಯೇ ಅಖಂಡ

ಹೀಗೆ ಒಟ್ಟು ಸಂವಿಧಾನ ರಚನಾ ಸಭೆಯ ಕಾರ್ಯಚಟುವಟಿಕೆಯಲ್ಲಿ ರಾಷ್ಟ್ರೀಯತೆಯ, ಐಕ್ಯತೆಯ ಚೌಕಟ್ಟು ಮೀರಲಾರದ ಹಾಗೆ ಎಚ್ಚರವಹಿಸಿ ಅಂತಹ ಮೂಲಾಂಶಗಳು ಸಂವಿಧಾನದ ಭಾಗವಾಗುವಂತೆ ಅಂಬೇಡ್ಕರರು ಪರಿಶ್ರಮಿಸಿದ್ದರು. ‘ಥಾಟ್ಸ್‌ ಆನ್‌ ಪಾಕಿಸ್ತಾನ’ ಕೃತಿಯಲ್ಲಿ ಅಖಂಡ ಭಾರತದ ಕುರಿತು ಪ್ರಸ್ತಾಪಿಸುತ್ತಾ, ‘ಅಖಂಡ ಭಾರತವೆಂಬುದು ಕೇವಲ ಕಲ್ಪನೆಯಲ್ಲ, ಭಾರತ ಪ್ರಕೃತಿದತ್ತವಾಗಿಯೇ ಅಖಂಡವಾದದ್ದು. ಭಾರತವನ್ನು ವಿಭಜಿಸುವುದು ಎಂದರೆ ವಿಭಾಗ ಮಾಡುವುದು ಎಂದಲ್ಲ, ಒಂದು ಭಾಗವನ್ನು ಕತ್ತರಿಸುವುದು ಎಂದೇ ಅರ್ಥ ಎಂದಿದ್ದಾರೆ.

ಅಕ್ಟೋಬರ್‌ 17, 1949ರ ಸಂವಿಧಾನ ರಚನಾ ಸಭೆಯಲ್ಲಿ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ, ‘ಈ ಸಂವಿಧಾನದಲ್ಲಿ ಬ್ರಿಟಿಷರ ಸಂವಿಧಾನದ ಸಾರ್ವಭೌಮತ್ವದಿಂದ ಪಡೆದಿರುವ ಯಾವುದೇ ಅಂಶವನ್ನೂ ಈ ಸದನದ ಯಾವ ವ್ಯಕ್ತಿಯೂ ಆಶಿಸುವುದಿಲ್ಲ. ವಾಸ್ತವವಾಗಿ ಈ ಸಂವಿಧಾನವು ಕಾರ್ಯ ಪ್ರಾರಂಭಿಸುವ ಮೊದಲು ಬ್ರಿಟಿಷ್‌ ಸಂಸತ್ತಿನ ಸಾರ್ವಭೌಮತ್ವದ ಎಲ್ಲಾ ಕುರುಹುಗಳನ್ನು ತೆಗೆದುಹಾಕಲು ಇಷ್ಟಪಡುತ್ತೇವೆ’ ಎಂದಿದ್ದರು.

ಅಂಬೇಡ್ಕರರ ರಾಷ್ಟ್ರಪ್ರೇಮದ ವ್ಯಾಖ್ಯಾನಕ್ಕೆ ಇದಕ್ಕಿಂತಲೂ ಘನೀಭೂತವಾದ ಆಧಾರದ ಅವಶ್ಯಕತೆಯಿಲ್ಲ. ಆದ್ದರಿಂದ ಈ ನೆಲೆಯಲ್ಲೂ, ಅಂಬೇಡ್ಕರರ ಬೋಧನೆಗಳು, ಸಂದೇಶಗಳನ್ನು ಯುವ ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಅಭ್ಯಸಿಸುವುದು, ಅವಲೋಕಿಸುವುದು, ವಿಮರ್ಶಿಸುವುದು ಈ ಹೊತ್ತಿನ ಜರೂರು.

- ಡಾ. ಸುಧಾಕರ ಹೊಸಳ್ಳಿ, ಧಾರವಾಡ