ನವದೆಹಲಿ(ಮೇ.09): ಕಳೆದ 11 ದಿನಗಳಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೊರೋನಾ ಪ್ರಕರಣಗಳು ದ್ವಿಗುಣಗೊಂಡಿವೆ ಎಂದು ಡೆಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ಕೊರೋನಾ ವಿರುದ್ಧದ ಹೋರಾಟದಲ್ಲಿ ಪಾಶ್ಚಿಮಾತ್ಯ ದೇಶಗಳ ಪರಿಸ್ಥಿತಿಗೆ ಹೋಲಿಸಿದರೆ ಭಾರತ ಉತ್ತಮವಾಗಿದೆ ಎಂದು ಅವರು ಹೇಳಿದ್ದಾರೆ. ಮೊದಲೆಲ್ಲಾ ಕೊರೋನಾ ವೈರಸ್ ಡೆಲ್ಲಿಯಲ್ಲಿ 20% ಹರಡುತಿತ್ತು. ಆದರೀಗ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಜೈನ್ ತಿಳಿಸಿದ್ದಾರೆ.

ಇದೇ ವೇಳೆ ತಬ್ಲೀಘಿಗಳ ಕ್ವಾರಂಟೈನ್ ವಿಚಾರದಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಡೆಲ್ಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ತಿಕ್ಕಾಟ ಆರಂಭವಾಗಿದೆ. ನಮ್ಮಲ್ಲಿ ತಬ್ಲೀಘಿಗಳು 28 ದಿನಗಳ ಕಾಲ ಕ್ವಾರಂಟೈನ್ ಅವಧಿ ಮುಗಿಸಿದ್ದರು ಅವರನ್ನು ಮನೆಗೆ ಕಳಿಸಲು ಕೇಂದ್ರ ಸರ್ಕಾರ ಬಿಡುತಿಲ್ಲ. ಕೇಂದ್ರಕ್ಕೆ ಈ ಬಗ್ಗೆ ಪತ್ರ ಬರೆದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಸತ್ಯೇಂದ್ರ ಜೈನ್ ಆರೋಪಿಸಿದ್ದಾರೆ.

ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಿದ್ರೆ ಹೇಗೆ? ಕೇಳಿದ್ದು ಸುಪ್ರೀಂ ಕೋರ್ಟ್!

ಡೆಲ್ಲಿಯ ನಿಜಾಮುದ್ಧೀನ್ ಮರ್ಕಜ್‌ನಲ್ಲಿ ತಬ್ಲೀಘಿ ಜಮಾತ್ ಧರ್ಮಸಭೆಯಲ್ಲಿ ಪಾಲ್ಗೊಂಡವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಡೆಲ್ಲಿಯಲ್ಲೇ ಹಲವು ತಬ್ಲೀಘಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ನಿಜಾಮುದ್ದೀನ್ ಮರ್ಕಜ್‌ನಿಂದಲೇ ನೇರವಾಗಿ 2,346 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಈ ಪೈಕಿ 536 ಮಂದಿಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಪ್ರಸ್ತುತ ಪ್ರಸ್ತುತ 3003 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಇದರಲ್ಲಿ 567 ಮಂದಿ ವಿದೇಶಿಯರು, 2, 446 ಮಂದಿ ಭಾರತೀಯರು ಇದ್ದು. ಈ ಪೈಕಿ 191 ಮಂದಿ ಡೆಲ್ಲಿಯವರಾಗಿದ್ದಾರೆ.

ನಿಗದಿತ ಅವಧಿಯಲ್ಲಿ ಕ್ವಾರಂಟೈನ್‌ನಲ್ಲಿದ್ದು, ಚಿಕಿತ್ಸೆಗೆ ಒಳಪಟ್ಟು ಕೊರೋನಾ ಸೋಂಕು ಇಲ್ಲ ಎಂದು ಖಚಿತಪಟ್ಟವರು ತಮ್ಮ ತಮ್ಮ ರಾಜ್ಯಗಳಿಗೆ ತೆರಳಬಹುದು. ಪೊಲೀಸ್ ತನಿಖೆಗಳೇನಿದ್ದರೂ ಅದನ್ನು ಪೊಲೀಸರು ನೋಡಿಕೊಳ್ಳುತ್ತಾರೆ ಎಂದು ಇದೇ ವೇಳೆ ಸತ್ಯೇಂದ್ರ ಜೈನ್ ಅಭಿಪ್ರಾಯಪಟ್ಟಿದ್ದಾರೆ.