ಚಂಡೀಗಢ(ಸೆ.09): ದನ ಹಾಗೂ ಎಮ್ಮೆ ಹಾಲುಗಳಿಗೆ ಡೈರಿಗಳು ಇರುವುದು ಹೊಸದೇನಲ್ಲ. ಆದರೆ ಇದೇ ಮೊದಲ ಬಾರಿಗೆ ಕತ್ತೆಯ ಹಾಲಿನ ಸಂಗ್ರಹ ಮತ್ತು ಮಾರಾಟಕ್ಕೆಂದೇ ಡೈರಿಯೊಂದನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ನಿಜ ಹರ್ಯಾಣ ಮತ್ತು ಗುಜರಾತ್‌ನ ವಡೋದರಾ ಭಾಗದಲ್ಲಿ ಮಾತ್ರ ಕಂಡುಬರುವ ಹಲಾರಿ ತಳಿಯ ಕತ್ತೆ ಹಾಲು ಅತ್ಯಂತ ವಿಶೇಷ ಗುಣಗಳನ್ನು ಹೊಂದಿದೆ ಎಂಬ ನಂಬಿಕೆ ಇದೆ. ಹೀಗಾಗಿ ಇದಕ್ಕೆ ಭಾರೀ ದರವು ಇದೆ. ಈ ಕಾರಣದಿಂದಾಗಿಯೇ ಹಿಸ್ಸಾರ್‌ನಲ್ಲಿ ದೇಶದ ಮೊದಲ ಕತ್ತೆ ಹಾಲು ಡೈರಿ ಆರಂಭಕ್ಕೆ ನಿರ್ಧರಿಸಲಾಗಿದೆ. ಡೈರಿ ಯೋಜನೆಗೆ ಹಿಸಾರ್‌ನಲ್ಲಿ ಈ ತಳಿಯನ್ನು ಅಭಿವೃದ್ಧಿ ಪಡಿಸುವ ಕೆಲಸ ನಡೆಯುತ್ತಿದೆ.

ವಿಶೇಷತೆ ಏನು?

ಹಲಾರಿ ತಳಿಯ ಕತ್ತೆಗಳು ಕುದುರೆಗಿಂತ ಸ್ವಲ್ಪ ಕಡಿಮೆ ಎತ್ತರ ಇರುತ್ತವೆ. ಆದರೆ ಸಾಮಾನ್ಯ ಕತ್ತೆ ತಳಿಗಿಂತ ಸಾಕಷ್ಟುಎತ್ತರವಿರುತ್ತದೆ. ಇವು ಬಿಳಿಯ ಮೈಬಣ್ಣ ಹೊಂದಿರುತ್ತವೆ. ನೋಡಲು ಬಹುತೇಕ ಕುದುರೆ ರೀತಿಯಲ್ಲೇ ಇರುತ್ತದೆ.

ಕತ್ತೆ ಹಾಲಿನ ವಿಶೇಷತೆ?

ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ದೇಹದ ಸೌಂದರ್ಯ ಹೆಚ್ಚಿಸುತ್ತದೆ. ಕ್ಯಾನ್ಸರ್‌, ಬೊಜ್ಜು, ಅಲರ್ಜಿಯಂಥ ಸಮಸ್ಯೆ ನಿವಾರಿಸುತ್ತದೆ ಎಂಬ ನಂಬಿಕೆ ಕೂಡಾ ಇದೆ. ಜೊತೆಗೆ ಕತ್ತೆ ಹಾಲಿನ ಚೀಸ್‌, ಸೋಪ್‌, ಫೇಸ್‌ವಾಷ್‌, ಸ್ಕಿನ್‌ ಕ್ರೀಮ್‌ ಕೂಡಾ ಲಭ್ಯವಿದೆ.

ಭಾರೀ ದರ

ಕತ್ತೆ ಹಾಲು ಲಭ್ಯತೆ ಕಡಿಮೆ. ಹೀಗಾಗಿ ಇದಕ್ಕೆ ಪ್ರತಿ ಲೀ.ಗೆ ಕನಿಷ್ಠ 2000 ರು. ಮತ್ತು ಗರಿಷ್ಠ 7000 ರು.ವರೆಗೂ ಮಾರಾಟವಾಗುತ್ತದೆ.