ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ವಿಶ್ವದ ದೊಡ್ಡಣ್ಣ ಯುಎಸ್‌ ಅಧ್ಯಕ್ಷರ ಆಗಮನ ಎಂದ ಮೇಲೆ ವಿಶೇಷ ಭದ್ರತಾ ವ್ಯವಸ್ಥೆ ಇರಲೇಬೇಕು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಟ್ರಂಪ್‌ ಸೆಕ್ಯುರಿಟಿ ಹೇಗಿದೆ ಎಂಬ ವಿವರ ಇಲ್ಲಿದೆ.

ಟ್ರಂಪ್‌ಗೆಂದೇ ಅಮೆರಿಕದಿಂದ ಬರಲಿದೆ ದಿ ಬೀಸ್ಟ್‌ ಕಾರು!

ಟ್ರಂಪ್‌ ಭಾರತಕ್ಕೆ ಫೆ.24 ರಂದು ಆಗಮಿಸಲಿದ್ದಾರೆ. ಆದರೆ ಅಮೆರಿಕ ಅಧ್ಯಕ್ಷರ ಕಾರು ‘ದಿ ಬೀಸ್ಟ್‌’ ಟ್ರಂಪ್‌ ಆಗಮನಕ್ಕೂ ಮುನ್ನವೇ ಭಾರತಕ್ಕೆ ಬಂದಿಳಿಯಲಿದೆ. ಅಹಮದಾಬಾದ್‌ ವಿಮಾನ ಇಳಿಯುತ್ತಿದ್ದಂತೆಯೇ ಟ್ರಂಪ್‌ ಮತ್ತು ಮೆಲಾನಿಯಾ ಟ್ರಂಪ್‌ ಈ ಹೈಸೆಕ್ಯುರಿಟಿ ಕಾರಿನಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಈ ವಿಶೇಷ ಕಾರಿನಲ್ಲಿ ಬೋಯಿಂಗ್‌ 757 ವಿಮಾನದಲ್ಲಿ ಬಳಸುವಂತಹ 8 ಇಂಚು ದಪ್ಪದ ಬಾಗಿಲುಗಳಿರುತ್ತವೆ.

6.5 ಟನ್‌ ತೂಕದ ಟ್ರಂಪ್‌ ಕಾರಿಂದ ಆಗ್ರಾದಲ್ಲಿ ನಡುಕ!

ಬಾಗಿಲು ಹಾಕಿಕೊಂಡಾಗ ಕಾರು 100% ರಾಸಾಯನಿಕ ಆಯುಧ ನಿರೋಧಕ ವ್ಯವಸ್ಥೆ ಹೊಂದಿರುತ್ತದೆ. ಪಂಕ್ಚರ್‌ ನಿರೋಧಕ ಬಲಿಷ್ಠ ಟಯರ್‌ಗಳನ್ನು ಅಳವಡಿಸಲಾಗಿರುತ್ತದೆ. ಟಯರ್‌ ಸ್ಫೊಟಗೊಂಡಾಗಲೂ ಕಾರು ಚಲಿಸುವಂತಹ ಮಾದರಿಯಲ್ಲಿ ಸ್ಟಿಲ್‌ ರಿಮ್‌ಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಕಾರಿನ ಮುಂಭಾಗದಲ್ಲಿಅಶ್ರುವಾಯು ಗ್ರೆನೇಡ್‌ ಲಾಂಚರ್‌, ರಾತ್ರಿ ವೇಳೆಯೂ ಸ್ಪಷ್ಟವಾಗಿ ಕಾರ್ಯನಿರ್ವಹಿಸುವ ಕ್ಯಾಮೆರಾಗಳಿರುತ್ತವೆ.

ಸಂವಹನ ವ್ಯವಸ್ಥೆ ಮತ್ತು ಜಿಪಿಎಸ್‌ ಟ್ರ್ಯಾಕಿಂಗ್‌ ವ್ಯವಸ್ಥೆ ಇರುತ್ತದೆ. ಅಧ್ಯಕ್ಷರಿಗೆ ಗಾಜಿನ ಕ್ಯಾಬಿನ್‌ ಇರಲಿದ್ದು, ತುರ್ತು ಪರಿಸ್ಥಿತಿಗಳಲ್ಲಿ ಬಳಸಲು ಪ್ರತಿಯೊಬ್ಬರಿಗೂ ಪ್ರತ್ಯೇಕ ಆಮ್ಲಜನಕ ಪೂರೈಕೆ ವ್ಯವಸ್ಥೆ ಇರುತ್ತದೆ. ಅಧ್ಯಕ್ಷರ ರಕ್ತದ ಮಾದರಿ ಸಹ ಇರುತ್ತದೆ. ದೇಶದ ಉಪಾಧ್ಯಕ್ಷರು ಮತ್ತು ಪೆಂಟಗನ್‌ ಜೊತೆಗೆ ಅಧ್ಯಕ್ಷರಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಸಂವಹನ ವ್ಯವಸ್ಥೆ ಇರುತ್ತದೆ.

ದಿ ಬೀಸ್ಟ್‌ ಜೊತೆಗೆ ಸಾಲು ಸಾಲು ಬೆಂಗಾವಲು ಪಡೆಗಳು

‘ದಿ ಬೀಸ್ಟ್‌’ ಜೊತೆಗೆ ಬೆಂಗಾವಲು ವಾಹನಗಳಾಗಿ ಅಣ್ವಸ್ತ್ರ, ರಾಸಾಯನಿಕ ಅಥವಾ ಜೈವಿಕ ಆಯುಧಗಳಿಂದ ದಾಳಿ ನಡೆದಾಗ ತಕ್ಷಣ ಪ್ರತಿದಾಳಿ ನಡೆಸುವ ವ್ಯವಸ್ಥೆ ಹಾಗೂ ಯೋಧರನ್ನು ಹೊಂದಿರುವ ಬ್ಲಾಕ್‌ ಟ್ರಕ್‌, ಸ್ಯಾಟಲೈಟ್‌ ಸಂವಹನ ವ್ಯವಸ್ಥೆ ಹೊಂದಿರುವ ಎಸ್‌ಯುವಿ, ಯಾವುದೇ ಸಂವಹನ ವ್ಯವಸ್ಥೆಯನ್ನು ‘ಜಾಮ್‌’ ಮಾಡಬಲ್ಲ ಹಾಗೂ ಮಾನವರಹಿತ ಏರ್‌ ವೆಹಿಕಲ್‌ಗಳನ್ನು ಗುರುತಿಸುವ ವ್ಯವಸ್ಥೆಯ ವಾಹನ ಮತ್ತು ಅಧ್ಯಕ್ಷರ ವೈದ್ಯರು, ಸಂಪುಟ ಸದಸ್ಯರು, ಸೇನಾಧಿಕಾರಿಗಳನ್ನು ಹೊತ್ತ ವಾಹನ, ಭದ್ರತಾ ಸಿಬ್ಬಂದಿಯನ್ನು ಹೊತ್ತ ವಾಹನಗಳು ಇರುತ್ತವೆ. ಜೊತೆಗೆ ಎಸ್‌ಪಿಜಿ, ಎನ್‌ಎಸ್‌ಜಿ ಕಮಾಂಡೋಸ್‌, ಪ್ಯಾರಮಿಲಿಟರಿ ಫೋರ್ಸ್‌, ಕ್ವಿಕ್‌ ರಿಯಾಕ್ಷನ್‌ ಟೀಮ್‌, ಡಾಗ್‌ ಸ್ವಾ್ಯಡ್‌, ಸಿಬಿಐ, ಐಬಿ ಮತ್ತು ಗುಪ್ತಚರ ಇಲಾಖೆಗಳ ಅಧಿಕಾರಿಗಳನ್ನೂ ನಿಯೋಜಿಸಲಾಗಿದೆ.

ಮೆಲಾನಿಯಾ ಟ್ರಂಪ್‌ಗೆಂದೇ ವಿಶೇಷ ಮಹಿಳಾ ಪಡೆ ಮೀಸಲು !

ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರೊಂದಿಗೆ ಆಗಮಿಸುತ್ತಿರುವ ಪತ್ನಿ ಮೆಲಾನಿಯಾ ಟ್ರಂಪ್‌ಗಾಗಿ ಮಹಿಳಾ ಐಪಿಎಸ್‌ ಅಧಿಕಾರಿ ನೇತೃತ್ವದಲ್ಲಿ 10 ಜನರ ಒಂದು ಟೀಮ್‌ ರಚಿಸಲಾಗಿದೆ. ಈ ಟೀಮ್‌ನಲ್ಲಿ ಇರುವ ಸದಸ್ಯರೆಲ್ಲಾ ಮಹಿಳೆಯರೇ ಎನ್ನುವುದು ಮತ್ತೊಂದು ವಿಶೇಷ. ಇವರಿಗೆ ಮಾತನಾಡುವ, ಸೈಬರ್‌ ಮಾನಿಟರಿಂಗ್‌ ಮಾಡುವ ವಿಶೇಷ ತರಬೇತಿ ನೀಡಲಾಗಿದೆ. ಜೊತೆಗೆ ಖಾಕಿ ಸಮವಸ್ತ್ರದ ಬದಲಿಗೆ ಪ್ಯಾಂಟ್‌ ಮತ್ತು ಬ್ಲೇಜರ್‌ ಧರಿಸಲು ಸೂಚಿಸಲಾಗಿದೆ.

10,000 ಪೊಲೀಸ್‌ ನಿಯೋಜನೆ

ಫೆಬ್ರವರಿ 24ಕ್ಕೆ, ಟ್ರಂಪ್‌ ಮತ್ತು ಭಾರತ ಪ್ರಧಾನಿ ನರೇಂದ್ರ ಮೋದಿ ಗುಜರಾತಿನ ಸರ್ದಾರ್‌ ಪಟೇಲ್‌ ಕ್ರೀಡಾಂಗಣದಲ್ಲಿ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಾಗಾಗಿ ಅಮೆರಿಕ ಭದ್ರತಾ ಪಡೆಗಳು, ಗುಜರಾತಿನÜ ಕ್ರೈಮ್‌ ಬ್ಯಾಂಚ್‌, ಸಿಟಿ ಪೊಲೀಸ್‌ ಮತ್ತು ವಿಶೇಷ ಭದ್ರತಾ ಪಡೆ ಮತ್ತು ಭಯೋತ್ಪಾದನಾ ನಿಗ್ರಹ ದಳ, ಗುಜರಾತ್‌ ಕ್ರಿಕೆಟ್‌ ಅಸೋಸಿಯೇಷನ್‌ ಅನ್ನು ಭೇಟಿ ಮಾಡಿ ಭದ್ರತೆ ಕುರಿತಂತೆ ಮಾತುಕತೆ ನಡೆಸಿವೆ.

ಊಟದ ಬಳಿಕ ಟ್ರಂಪ್ ಜಗೀತಾರೆ ಎಲೆ ಅಡಿಕೆ; ಅವರಿಗೆ ಪಾನ್ ಸಪ್ಲೈ ಮಾಡೋದು ಇವ್ರೇ!

ಸ್ಟೇಡಿಯಂನಲ್ಲಿ ಈಗಾಗಲೇ ಸಿಸಿಟಿವಿಗಳನ್ನು ಫಿಕ್ಸ್‌ ಮಾಡಲಾಗಿದೆ. ಡ್ರೋನ್‌ಗಳನ್ನೂ ಭದ್ರತೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಪೊಲೀಸ್‌ ಅಧಿಕೃತ ಮಾಹಿತಿ ಪ್ರಕಾರ ಫೆ.24ರಂದು ಅಹಮದಾಬಾದಿನಲ್ಲಿ ಸುಮಾರು 10,000 ಪೊಲೀಸರನ್ನು ನಿಯೋಜಿಸ ನಿರ್ಧರಿಸಲಾಗಿದೆ.

ಅಹಮದಾಬಾದ್‌ ತೆರಳುವ ವಿಮಾನಗಳಿಗೆ ಬೇರೆ ಹಾದಿ!

ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಬರುವ ದಿನ ಅಂದರೆ ಫೆ.24ರಂದು ನೀವು ಅಹಮದಾಬಾದಿಗೆ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್‌ ಬುಕ್‌ ಮಾಡಿದ್ದರೆ ಬಹುಶಃ ನಿಮ್ಮ ಹಣ ರೀ ಫಂಡ್‌ ಆಗಬಹುದು. ಏಕೆಂದರೆ ಮಾಹಿತಿ ಪ್ರಕಾರ ಟ್ರಂಪ್‌ ಆಗಮನದ ಕಾರ‍್ಯಕ್ರಮಕ್ಕೆ ಪ್ರಖ್ಯಾತ ವ್ಯಕ್ತಿಗಳನ್ನು ಕರೆತರುವ 10 ವಿಮಾನಗಳಿಗೆ ಮಾತ್ರ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಅವಕಾಶ ನೀಡಲಾಗಿದೆ.

ಉಳಿದ 60 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳು ಅಹಮದಾಬಾದ್‌ ಟಿಕೆಟ್‌ ಅನ್ನು ರದ್ದುಪಡಿಸಬಹುದು ಅಥವಾ ಬೇರೆ ಹಾದಿಯಲ್ಲಿ ಸಾಗಿ ಸೂರತ್‌ ಅಥವಾ ಬರೋಡಾದಲ್ಲಿ ಲ್ಯಾಂಡ್‌ ಆಗಬಹುದು.

ಭಾರೀ ವೆಚ್ಚದಲ್ಲಿ 22 ಕಿ.ಮೀ ರಸ್ತೆ ಅಗಲೀಕರಣ ಮತ್ತು ಸಿಂಗಾರ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮ ಹಾಗೂ ಮೊಟೆರಾ ಸ್ಟೇಡಿಯಂ ವರೆಗೆ ಸುಮಾರು 22 ಕಿ.ಮೀ ರೋಡ್‌ ಶೋ ನಡೆಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾರೀ ವೆಚ್ಚದಲ್ಲಿ ರಸ್ತೆಯನ್ನು ಅಗಲಗೊಳಿಸಿ, ಸಿಂಗರಿಸಲಾಗಿದೆ. ಈ ದಾರಿಯುದ್ದಕ್ಕೂ ಸುಮಾರು 1 ಲಕ್ಷ ಸಸಿಗಳು ಮತ್ತು ಹೂವಿನ ಗಿಡಗಳನ್ನು ನೆಡಲಾಗಿದೆ. ಈ ರೋಡ್‌ ಶೋಗೆ ರಸ್ತೆಯುದ್ದಕ್ಕೂ ಸುಮಾರು 1 ಲಕ್ಷ ಜನರು ಸಾಕ್ಷಿಯಾಗಬಹುದೆಂದು ನಿರೀಕ್ಷಿಸಲಾಗಿದೆ.

ಬೀದಿ ನಾಯಿಗಳು ಅಡ್ಡ ಬರದಂತೆ ಮುನ್ನೆಚ್ಚರಿಕೆ

ಟ್ರಂಪ್‌ ಅಹಮದಾಬಾದ್‌ ಆಗಮನದ ದಾರಿಯಲ್ಲಿ ಯಾವುದೇ ಪ್ರಾಣಿಗಳೂ ಅಡ್ಡ ಬರದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಹಾಗಾಗಿ ಬೀದಿನಾಯಿಗಳನ್ನು ವಿವಿಐಪಿ ಮಾರ್ಗದಿಂದ ದೂರ ಸಾಗಿಸಲಾಗುತ್ತಿದೆ.

2015 ರಲ್ಲಿ ಅಂದಿನ ಅಮೆರಿಕ ವಿದೇಶಾಂಗ ಸಚಿವ ಜಾನ್‌ ಕೆರ್ರಿ ಗುಜರಾತಿನ ಗಾಂಧೀನಗರದಲ್ಲಿ ಆಯೋಜಿಸಿದ್ದ ವೈಬ್ರಂಟ್‌ ಗುಜರಾತ್‌ ಉದ್ಯಮ ಶೃಂಗದಲ್ಲಿ ಭಾಗವಹಿಸಿ ವಿಮಾನನಿಲ್ದಾಣಕ್ಕೆ ತೆರಳುತ್ತಿದ್ದಾಗ ಅವರ ಭದ್ರತಾ ವಾಹನವೊಂದು ಬೀದಿ ನಾಯಿಗೆ ಡಿಕ್ಕಿ ಹೊಡೆದಿತ್ತು. ಇಂತಹ ಮುಜುಗರವನ್ನು ತಡೆಯಲು ಈ ಬಾರಿ ಸ್ಥಳೀಯ ಮುನ್ಸಿಪಾಲಿಟಿ ವಿವಿಐಪಿ ರಸ್ತೆಯಿಂದ ಬೀದಿನಾಯಿಗಳನ್ನು ದೂರವಿಡಲು ನಿರ್ಧರಿಸಿದೆ.

ಭಾರತ ಜತೆ 71 ಸಾವಿರ ಕೋಟಿ ಮೌಲ್ಯದ ಒಪ್ಪಂದಕ್ಕೆ ಟ್ರಂಪ್‌ ಹಿಂದೇಟು!

ಸ್ಲಂ ಕಾಣದಂತೆ 6 ಕೋಟಿ ವೆಚ್ಚದಲ್ಲಿ ತಡೆಗೋಡೆ!

ಕೇವಲ ಬೀದಿ ನಾಯಿ, ಪ್ರಾಣಿಗಳು ಮಾತ್ರವಲ್ಲದೆ ಡೊನಾಲ್ಡ್‌ ಟ್ರಂಪ್‌ ಏರ್‌ಪೋರ್ಟ್‌ನಿಂದ ಬರುವ ಹಾದಿಯಲ್ಲಿ ರಸ್ತೆಗೆ ಕಾಣುವಂತೆ ಸುಮಾರು ಅರ್ಧ ಕಿ.ಮೀ ಇರುವ ಕೊಳೆಗೇರಿ ಟ್ರಂಪ್‌ಗೆ ಕಾಣದಂತೆ 5 ಅಡಿ ಎತ್ತರದ ತಡೆಗೋಡೆ ನಿರ್ಮಿಸಲಾಗಿದೆ. ಇದಕ್ಕೆ .6 ಕೋಟಿ ಖರ್ಚಾಗಿದೆ ಎನ್ನಲಾಗುತ್ತಿದ್ದು, ಕೊಳೆಗೇರಿ ಕಾಣದಂತೆ ಗೋಡೆ ಕಟ್ಟಿದ್ದರ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಪ್ರತಿಭಟನೆಗಳಿಗೆ ನಿಷೇಧ

ಫೆ.24ರಂದು ಪ್ರತಿಭಟನೆಗಳಾಗದಂತೆ ನೋಡಿಕೊಳ್ಳಲೆಂದೇ ಗುಜರಾತ್‌ ಪೊಲೀಸ್‌ ಸ್ಪೆಷಲ್‌ 500-ಸ್ಟ್ರಾಂಗ್‌ ಆ್ಯಂಟಿ-ಮೋರ್ಚಾ ಟೀಮ್‌ ರಚನೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎಎ), ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ವಿರೋಧಿಸಿ ವ್ಯಾಪಕವಾಗಿ ಪ್ರತಿಭಟನೆಗಳು ನಡೆಯುತ್ತಿದ್ದು, ಟ್ರಂಪ್‌ ಆಗಮನ ವೇಳೆ ಇಂಥ ಯಾವುದೇ ಮುಷ್ಕರ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ತಾಜ್‌ಮಹಲ್‌ ಹೆಸರಿನಲ್ಲಿ ಬೆತ್ತಲೆ ಕ್ಲಬ್‌ ನಡೆಸಿದ್ರಾ ಟ್ರಂಪ್‌?

ಖಾಲಿ ಮನೆ ಮೇಲೆ ಗಸ್ತು

ಮೊಟೆರಾ ಸ್ಟೇಡಿಯಂ ಸುತ್ತಲೂ ಇರುವ ಸುಮಾರು 40 ಖಾಲಿ ಅಥವಾ ಪಾಳುಬಿದ್ದ ಮನೆಗಳಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಗಸ್ತು ತಿರುಗಲು ಪೊಲೀಸರನ್ನು ನಿಯೋಜಿಸಲಾಗಿದೆ.

ಕೇವಲ ಖಾಲಿ ಮನೆಗಳಲ್ಲಿ ಗಸ್ತು ತಿರುಗುತ್ತಿರುವುದು ಮಾತ್ರವಲ್ಲದೆ ಸ್ಟೇಡಿಯಂ ಸುತ್ತ-ಮುತ್ತ ವಾಸಿಸುತ್ತಿರುವ ನಿವಾಸಿಗಳಿಗೆ ನೋಟಿಸ್‌ ನೀಡಲಾಗಿದ್ದು, ರಾರ‍ಯಲಿಯ ನೋಡಲು ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಇದಕ್ಕಾಗಿ ನಿವಾಸಿಗಳಿಗೆ ತಮ್ಮ ಆಧಾರ್‌ ಮತ್ತು ಫೋನ್‌ ನಂಬರ್‌ ನೀಡಿಲು ಪೊಲೀಸರು ಸೂಚಿಸಿದ್ದಾರೆ ಎನ್ನಲಾಗಿದೆ.

ಟ್ರಂಪ್‌ ವಿಶೇಷ ವಿಮಾನ ಏರ್‌ಫೋರ್ಸ್‌ ಕೂಡ ಭಾರತಕ್ಕೆ

ಫೆ.24ರಂದು ಟ್ರಂಪ್‌ ಏರ್‌ಫೋರ್ಸ್‌ ಒನ್‌ ಮೂಲಕ ಅಹಮದಾಬಾದಿಗೆ ಬಂದಿಳಿಯಲಿದ್ದಾರೆ. ಅಮೆರಿಕ ಅಧ್ಯಕ್ಷರಿಗಾಗಿಯೇ ಬೋಯಿಂಗ್‌ ಕಂಪನಿಯ 747-200ಬಿ ವಿಮಾನವನ್ನು ವಿಶಿಷ್ಟವಾಗಿ ಮರುವಿನ್ಯಾಸ ಮಾಡಲಾಗಿದೆ. ಈ ವಿಮಾನದಲ್ಲಿರುವ ಎಲೆಕ್ಟ್ರಾನಿಕ್‌ ವ್ಯವಸ್ಥೆಯನ್ನು ಯಾವುದೇ ಎಲೆಕ್ಟ್ರೋಮ್ಯಾಗ್ನೆಟಿಕ್‌ ಅಸ್ತ್ರಗಳಿಂದಲೂ ಕೆಡಿಸಲು ಸಾಧ್ಯವಿಲ್ಲ.

ಅಮೆರಿಕದ ಮೇಲೆ ದಾಳಿಯಾದರೆ ಇದರಲ್ಲಿ ಕುಳಿತೇ ಅಧ್ಯಕ್ಷರು ಮೊಬೈಲ್‌ ಕಮಾಂಡ್‌ ಸೆಂಟರ್‌ನಂತೆ ಕೆಲಸ ಮಾಡಬಹುದಾದಷ್ಟುಸುಧಾರಿತ ಸಂಪರ್ಕ ವ್ಯವಸ್ಥೆ ಇದೆ. ದಿ ಬ್ರೀಸ್ಟ್‌ ಮತ್ತು ಏರ್‌ಫೋರ್ಸ್‌ ಒನ್‌ನಂತೆ ಮರೈನ್‌ ಒನ್‌ ಕೂಡ ಅಮೆರಿಕ ಅಧ್ಯಕ್ಷರು ಬಳಸುವ ಹೆಲಿಕಾಪ್ಟರ್‌. ಅಮೆರಿಕ ಅಧ್ಯಕ್ಷರು ಹೋಗಬೇಕೆಂದ ಸ್ಥಳಕ್ಕೆ ಇದು ತತ್‌ಕ್ಷಣಕ್ಕೆ ಕೊಂಡೊಯ್ಯುತ್ತದೆ. ಇದೂ ಕೂಡಾ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಹೊಂದಿರುತ್ತದೆ.

ಡೊನಾಲ್ಡ್‌ ಟ್ರಂಪ್‌ 3 ಗಂಟೆ ಭೇಟಿಗೆ 85 ಕೋಟಿ ಖರ್ಚು!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಚೊಚ್ಚಲ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಯಾರಿಗಾಗಿ ಗುಜರಾತ್‌ ಸರ್ಕಾರ 80-85 ಕೋಟಿ ರು. ಖರ್ಚು ಮಾಡುತ್ತಿದೆ. ಇದರಲ್ಲಿ ಭದ್ರತೆಗಾಗಿಯೇ ಅರ್ಧಕ್ಕರ್ಧ ಹಣ ವೆಚ್ಚ ಮಾಡಲಾಗುತ್ತಿದೆ. ನೂತನ ಕ್ರೀಡಾಂಗಣದ ಸುತ್ತಲಿರುವ ರಸ್ತೆ ಅಗಲೀಕರಣ ಇತ್ಯಾದಿಗಾಗಿ ಈಗಾಗಲೇ 40 ಕೋಟಿ ಖರ್ಚಾಗಿದೆ. ಟ್ರಂಪ್‌ ಆಗಮನಕ್ಕೆ ಖರ್ಚು ಮಾಡುತ್ತಿರುವ ಒಟ್ಟು ಹಣ ಗುಜರಾತ್‌ ಸರ್ಕಾರದ ಒಟ್ಟು ವಾರ್ಷಿಕ ಬಜೆಟ್‌ನ 1.5%ಗೆ ಸಮ.

ಫೆಬ್ರವರಿ 21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ