ಕೋಲ್ಕತ್ತಾದ ರೈಲಿನಲ್ಲಿ ನಾಯಿಯನ್ನು ಚೀಲದಲ್ಲಿ ತುಂಬಿ ಹಾಕಿದ ಘಟನೆ ನಡೆದಿದೆ. ಪ್ರಯಾಣಿಕರ ಸಮಯಪ್ರಜ್ಞೆಯಿಂದ ನಾಯಿಯ ರಕ್ಷಣೆ ಸಾಧ್ಯವಾಗಿದೆ. ಈ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಚೀಲವೊಂದರಲ್ಲಿ ನಾಯಿಯೊಂದನ್ನು ತುಂಬಿಸಿ ರೈಲಿನೊಳಗೆ ಹಾಕಿದ ಅಮಾನವೀಯ ಘಟನೆ ಕೋಲ್ಕತ್ತಾದ ಬರ್ಸಾತ್ ರೈಲು ನಿಲ್ದಾಣದಲ್ಲಿ ನಡೆದಿದ್ದು, ಚೀಲ ಮಿಸುಕಾಡುವುದನ್ನು ಗಮನಿಸಿದ ಪ್ರಯಾಣಿಕರು ಯಾರೋ ಈ ನಾಯಿಯನ್ನು ಚೀಲದಿಂದ ಬಿಡಿಸಿ ರಕ್ಷಣೆ ಮಾಡಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಯಾರು ಹೀಗೆ ಮಾನವಿಯತೆ ಇಲ್ಲದೇ ನಾಯಿಯನ್ನು ಚೀಲಕ್ಕೆ ತುಂಬಿ ಹೀಗೆ ರೈಲಿನ ಬೋಗಿಯೊಳಗೆ ಎಸೆದಿದ್ದಾರೋ ಎಂಬುದು ತಿಳಿದು ಬಂದಿಲ್ಲ.
ಆದರೆ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಹೀಗೆ ಕ್ರೂರವಾಗಿ ನಾಯಿಯನ್ನು ಎಸೆದಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅನೇಕರು ಆಗ್ರಹಿಸಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಪ್ಲಾಸ್ಟಿಕ್ ಚೀಲವೊಂದರಲ್ಲಿ ನಾಯಿಯನ್ನು ತುಂಬಿಸಿ ಬಳಿಕ ಚೀಲದ ಬಾಯನ್ನು ಹಗ್ಗವೊಂದರಿಂದ ಕಟ್ಟಲಾಗಿದೆ. ನಂತರ ರೈಲಿನ ಬೋಗಿಯೊಂದರಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಕೋಲ್ಕತ್ತಾದ ಲೋಕಲ್ ಸಬ್‌ರ್ಬನ್ ರೈಲಿನಲ್ಲಿ ಈ ಘಟನೆ ನಡೆದಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಚೀಲದಲ್ಲಿ ಏನೋ ಮಸುಕಾಡಿದಂತೆ ಅನಿಸಿದ್ದು, ಈ ಹಿನ್ನೆಲೆಯಲ್ಲಿ ಚೀಲದ ಬಾಯಿಯನ್ನು ನಿಧಾನಕ್ಕೆ ಒಪನ್ ಮಾಡಿ ನೋಡಿದಾಗ ಒಳಗೆ ನಾಯಿ ಇರುವುದು ಕಂಡು ಬಂದಿದೆ. ಕೂಡಲೇ ಅವರು ರೈಲ್ವೆಯ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಲ್ಲೇ ಜೊತೆಗೆ ಬಹಳ ಭಯದಿಂದಲೇ ಚೀಲದ ಹಗ್ಗವನ್ನು ಬಿಚ್ಚಿ ನಾಯಿಯನ್ನು ಚೀಲದಿಂದ ಹೊರಗೆ ತೆಗೆಯುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.
ಬಡಪಾಯಿ ನಾಯಿ ಉಸಿರಾಡಲು ಕೂಡ ಸಾಧ್ಯವಾಗದಷ್ಟು ಟೈಟಾಗಿ ಕಟ್ಟಿದ್ದ ಗೋಣಿಚೀಲದಲ್ಲಿ ಇತ್ತು. ಸ್ಟ್ರೀಟ್ ಡಾಗ್ಸ್ ಆಫ್ ಬಾಂಬೆ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. "ಬರಾಸತ್ ರೈಲು ನಿಲ್ದಾಣದಲ್ಲಿ ಬಡ, ಅಸಹಾಯಕ ನಾಯಿಯನ್ನು ಸೆಣಬಿನ ಚೀಲದೊಳಗೆ ತುಂಬಿಸಿ ರೈಲಿಗೆ ಎಸೆಯಲಾಯಿತು. ಚೀಲದೊಳಗಿನ ಚಲನೆಯನ್ನು ಗಮನಿಸಿ ಅದನ್ನು ತೆರೆಯಲು ನಿರ್ಧರಿಸಿದ ದಯೆಯ ಪ್ರಯಾಣಿಕರಿಲ್ಲದಿದ್ದರೆ, ಈ ಮುಗ್ಧ ಆತ್ಮವು ಉಸಿರುಗಟ್ಟಿ ಸತ್ತಿರುತ್ತಿತ್ತು ಎಂದು ಬರೆದು ಈ ವೀಡಿಯೋವನ್ನು ಸ್ಟ್ರೀಟ್ ಡಾಗ್ಸ್ ಆಫ್ ಬಾಂಬೆ ತನ್ನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಪೋಸ್ಟ್ ಮಾಡಿದೆ.
ವೀಡಿಯೋ ನೋಡಿದ ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ತಾಯಿ ನಾಯಿ, ಬಹುಶಃ ಕ್ರೂರಿಗಳು ಅದರ ಮರಿಗಳನ್ನು ಕೊಂದಿರಬಹುದು ಇದರ ಬಗ್ಗೆ ತನಿಖೆ ನಡೆಯಲೇಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತನೇಕರು ಪೇಟಾ ಇಂಡಿಯಾಗೆ ಈ ವೀಡಿಯೋವನ್ನು ಟ್ಯಾಗ್ ಮಾಡಿದ್ದಾರೆ. ಹಾಗೂ ಇನ್ನು ಕೆಲವರು ಈ ನಾಯಿಯನ್ನು ರಕ್ಷಣೆ ಮಾಡಿದ ಪ್ರಯಾಣಿಕರಿಗೆ ಧನ್ಯವಾದ ತಿಳಿಸಿದ್ದಾರೆ.
