ಮಗು ಮೃತ ಎಂದು ಘೋಷಿಸಿದ ವೈದ್ಯರು, ಅಂತ್ಯಸಂಸ್ಕಾರಕ್ಕೂ ಕೆಲವೇ ನಿಮಿಷ ಮೊದಲು ಪವಾಡ!
ಆಗಷ್ಟೇ ಜನ್ಮತಾಳಿದ ಮಗುವನ್ನು ಪರಿಶೀಲಿಸಿದ ವೈದ್ಯರು ಅಚ್ಚರಿ ಘೋಷಣೆ ಮಾಡಿದ್ದರೆ. ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ತೀವ್ರ ಆಕ್ರಂದನ ನಡುವೆ ಅಂತ್ಯಸಂಸ್ಕಾರಕ್ಕೆ ಸಜ್ಜಾದ ಕುಟುಂಬ ದೇವರೇ ಧರೆಗಿಳಿದು ಬಂದ ಅನುಭವವಾಗಿದೆ. ಅಂತ್ಯಸಂಸ್ಕಾರಕ್ಕೂ ಕೆಲವೇ ನಿಮಿಷ ಮೊದಲು ಪುಟ್ಟ ಕಂದನ ಅಳು ಕೇಳಿಸಿದೆ.
ಗುವ್ಹಾಟಿ(ಅ.05) ಇದು ವೈದ್ಯರ ನಿರ್ಲಕ್ಷ್ಯವೂ ಅಥವಾ ಪವಾಡವೋ? ಅಸ್ಸಾಂ ರಾಜಧಾನಿ ಗುವ್ಹಾಟಿ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ. ಎರಡು ದಿನ ಐಸಿಯೂನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ ಯಾವುದೇ ಚಲನವಲನ ಆಗಿಲ್ಲ. ಹೀಗಾಗಿ ವೈದ್ಯರು ಮಗು ಮೃತಪಟ್ಟಿದೆ ಎಂದು ಕುಟಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಆಕ್ರಂದನ, ನೋವು, ಕಣ್ಣೀರಿನ ನಡುವೆ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿದ್ದರು. ಇನ್ನೇನು ಅಂತ್ಯಸಂಸ್ಕಾರದ ಅಂತಿಮ ಘಟ್ಟ ತಲಪುತ್ತಿದ್ದಂತೆ ಮಗು ಅಳುತ್ತಿರುವ ಶಬ್ದ ಕೇಳಿಸಿದೆ. ತಕ್ಷಣವೇ ಮಗುವನ್ನು ಎತ್ತಿಕೊಂಡ ಕುಟುಂಬಸ್ಥರು ಆಸ್ಪತ್ರೆ ದೌಡಾಯಿಸಿದ್ದಾರೆ. ಸದ್ಯ ಈ ಮಗುವಿಗೆ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನೋವು ಕಾಣಿಸಿಕೊಂಡ ಗರ್ಭಿಣಿಯನ್ನು ಗುವ್ಹಾಟಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದೆಡೆ ರಕ್ತ ಸ್ರಾವ ಸೇರಿದಂತೆ ಇತರ ಸಮಸ್ಯೆಗಳು ಕಾಣಿಸಿಕೊಂಡಿತ್ತು ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಹೀಗಾಗಿ ತಕ್ಷಣವೇ ಗರ್ಭಿಣಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಟೋಬರ್ 3 ರ ರಾತ್ರಿ 10 ಗಂಟೆಗೆ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದಾರೆ. ಜನ್ಮತಾಳಿದ ಗಂಡು ಮಗುವಿನ ತೂಕ ಕೇವಲ 500 ಗ್ರಾಂ ಆಗಿತ್ತು.
ಆಸ್ಪತ್ರೆಯಲ್ಲಿ ಸಾವು : ಮನೆಗೆ ತರುತ್ತಿದ್ದಂತೆ ಉಸಿರಾಡಲು ಶುರು ಮಾಡಿದ ಬಿಜೆಪಿ ನಾಯಕ
ಮಗುವಿನಲ್ಲಿ ಸಣ್ಣದಾದ ಎದೆಬಡಿತ ಹೊರತುಪಡಿಸಿದರೆ ಚಲನವಲ ಇರಲಿಲ್ಲ. ಜನ್ಮತಾಳಿದ ಮಗು ಅಳಲಿಲ್ಲ. ಪರಿಶೀಲಿಸಿದ ವೈದ್ಯರು ಮಗುವಿನ ತಂದೆ ರತನ್ ದಾಸ್‌ನನ್ನು ಕರೆದು ಯಾವುದೇ ಚಲನವಲನ ಇಲ್ಲದ ಕಾರಣ ನಾವು ತೀವ್ರ ನಿಘಾಘಟಕದಲ್ಲಿ ಚಿಕಿತ್ಸೆ ನೀಡಬೇಕಾಗಿದೆ ಎಂದಿದ್ದಾರೆ. ಬಳಿಕ ಬುಧವಾರ ಬೆಳಗ್ಗೆ ಮಗುವಿನಲ್ಲಿ ಯಾವುದೇ ಚಲನವಲ ಇಲ್ಲದ ಕಾರಣ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ.
ಮಗುವನ್ನು ವೈದ್ಯರು ರತನ್ ದಾಸ್ ಹಾಗೂ ಕುಟಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಇದೇ ವೇಳೆ ಆಸ್ಪತ್ರೆ ಸಿಬ್ಬಂದಿ ಮಗುವಿನ ಮರಣ ಪ್ರಮಾಣಪತ್ರವನ್ನು ನೀಡಿದ್ದಾರೆ. ಇತ್ತ ಮಗುವಿನ ತಾಯಿಗೆ ಚಿಕಿತ್ಸೆ ಮುಂದುವರಿಸಲಾಗಿತ್ತು. ನೋವು, ಆಕ್ರಂದನದಿಂದಲೇ ಮನಗೆ ವಾಪಾಸ್ ಆದ ಕುಟುಂಬ ಗಂಡು ಮಗುವಿನ ಅಂತ್ಯಸಂಸ್ಕಾರಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಯಿತು.
ಎಲ್ಲಾ ಸಿದ್ದತೆ ಬಲಿಕ ಮಧ್ಯಾಹ್ನ ಅಂತ್ಯಸಂಸ್ಕಾರ ಕ್ರಿಯೆಗಳು ಆರಂಭಗೊಂಡಿತ್ತು. ಇನ್ನೇನು ಕೆಲವೇ ಕ್ಷಣದಲ್ಲಿ ಅಂತಿಮ ಘಟ್ಟದ ಪ್ರಕ್ರಿಯೆ ನಡೆಯಬೇಕು ಅನ್ನುವಷ್ಟರಲ್ಲೇ ಮಗು ಅಳುತ್ತಿರುವ ಶಬ್ದ ಕೇಳಿಸಿದೆ. ಮಗುವಿನ ಕಾಲುಗಳಲ್ಲಿ ಚಲನ ಕಾಣಿಸಿದೆ. ತಕ್ಷಣವೇ ಕುಟುಂಬಸ್ಥರು ಮಗುವನ್ನು ಅಂತ್ಯಸಂಸ್ಕಾರದಿಂದ ರಕ್ಷಿಸಿದ ಕುಟುಂಬ ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಇದೀಗ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಶವಪೆಟ್ಟಿಗೆಯಿಂದ ಎದ್ದು ಕುಳಿತ ಮೃತ ಮಹಿಳೆ : ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸ್ತಿದ್ದವರು ಶಾಕ್
ಇತ್ತ ಮಗುವಿನ ಕುಟುಂಬಸ್ಥರು ಆಸ್ಪತ್ರೆ ಹಾಗೂ ವೈದ್ಯರ ವಿರುದ್ದ ದೂರು ದಾಖಲಿಸಿದ್ದಾರೆ. ಆಸ್ಪತ್ರೆ ನೀಡಿದ ಮರಣ ಪ್ರಮಾಣ ಪತ್ರವನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆಸ್ಪತ್ರೆ ನೀಡಿದ ಬಿಲ್, ವೈದ್ಯರ ಸಮ್ಮರಿ ಸೇರಿದಂತೆ ಎಲ್ಲವನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ಆಸ್ಪತ್ರೆಗೆ ಸಂಕಷ್ಟ ಶುರುವಾಗಿದೆ.