ಡಿಎಂಕೆ ಕಾರ್ಯಕರ್ತರು ಹಣೆಗೆ ಕುಂಕುಮ ಹಾಗೂ ಕೈಗೆ ಪವಿತ್ರ ದಾರ ಧರಿಸಕೂಡದು ಎಂದು ಎ. ರಾಜಾ ಸಲಹೆ ನೀಡಿದ್ದಾರೆ. ಈ ಹೇಳಿಕೆಗೆ ಬಿಜೆಪಿ ಸೇರಿದಂತೆ ಇತರ ರಾಜಕೀಯ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಚೆನ್ನೈ: ಡಿಎಂಕೆ ಪಕ್ಷದ ಕಾರ್ಯಕರ್ತರು ಹಣೆಗೆ ಕುಂಕುಮ ಹಾಗೂ ಕೈಗೆ ಪವಿತ್ರ ದಾರ ಧರಿಸಕೂಡದು ಎಂದು ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಎ. ರಾಜಾ ವಿವಾದಾತ್ಮಕ ಸಲಹೆ ನೀಡಿದ್ದಾರೆ.
ನೀಲಗಿರಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಡಿಎಂಕೆ ಕಾರ್ಯಕರ್ತರು ಸಂಘಿಗಳಂತೆ (ಆರ್‌ಎಸ್‌ಎಸ್ ಸ್ವಯಂಸೇವಕರು) ವೇಷಭೂಷಣ ಧರಿಸಬಾರದು. ಹಣೆಗೆ ಕುಂಕುಮ ಹಾಗೂ ಕೈಗೆ ಪವಿತ್ರ ದಾರವನ್ನು ಸಂಘಿಗಳು ಧರಿಸುತ್ತಾರೆ. ಇದರಿಂದ ಅವರು ಮತ್ತು ನಿಮ್ಮನ್ನು ಗುರುತು ಹಿಡಿಯುವುದು ಕಷ್ಟವಾಗುತ್ತದೆ. ಕನಿಷ್ಠ ಪಕ್ಷ ವಿದ್ಯಾರ್ಥಿ ಕಾರ್ಯಕರ್ತರಾದರೂ ಕುಂಕುಮ ತೆಗೆಯಿರಿ. ನಿಮ್ಮ ಪೋಷಕರು ನಿಮ್ಮ ಹಣೆಯ ಮೇಲೆ ವಿಭೂತಿಯನ್ನು ಇಟ್ಟರೆ, ಅದನ್ನು ಇಟ್ಟುಕೊಳ್ಳಿ. ಆದರೆ ಡಿಎಂಕೆ ಧೋತಿ ಧರಿಸಿದ ನಂತರ ಅಥವಾ ಪಕ್ಷದ ಕಾರ್ಯಕ್ರಮಕ್ಕೆ ಬಂದಾಗ ಅದನ್ನು ತೆಗೆದುಹಾಕಿ’ ಎಂದು ಮನವಿ ಮಾಡಿದ್ದಾರೆ.
DMK-ADMK ಮರುಮೈತ್ರಿ ಇಲ್ಲ, ಅಮಿತ್ ಶಾ ಭೇಟಿ ಮಾಡಿ ಬಿಜೆಪಿ ಜತೆ ಮೈತ್ರಿ ಸುಳಿವು ನೀಡಿದ್ರಾ ಪಳನಿಸ್ವಾಮಿ!
ಈ ಹೇಳಿಕೆಗೆ ಬಿಜೆಪಿ ಸೇರಿದಂತೆ ಇತರ ರಾಜಕೀಯ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ತಮಿಳುನಾಡು ಬಿಜೆಪಿ ವಕ್ತಾರರು ಇದನ್ನು ಹಿಂದೂ ಸಂಪ್ರದಾಯಗಳಿಗೆ ಅವಮಾನ ಎಂದು ಟೀಕಿಸಿದ್ದಾರೆ ಮತ್ತು ಡಿಎಂಕೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಜಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಡಿಎಂಕೆ ಪಕ್ಷದ ಕೆಲವು ನಾಯಕರು ಇದು ಎ. ರಾಜಾ ಅವರ ವೈಯಕ್ತಿಕ ಅಭಿಪ್ರಾಯ ಎಂದು ಸಮರ್ಥಿಸಿಕೊಂಡಿದ್ದಾರೆ ಮತ್ತು ಪಕ್ಷದ ಅಧಿಕೃತ ನಿಲುವು ಇದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿವಾದವು ತಮಿಳುನಾಡು ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.
