ಮಲ್ಲಿಕಾರ್ಜುನ ಖರ್ಗೆ ದೀಪಾವಳಿ ಕುರಿತು ವಿವಾದಿತ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಮತ್ತೊಬ್ಬ ಕಾಂಗ್ರೆಸ್ ನಾಯಕ ದೀಪಾವಳಿ ರೋಗವಿದ್ದಂತೆ ಎಂದಿದ್ದಾರೆ. ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ಹೊರಹಾಕುತ್ತಿದ್ದಂತೆ ಉಲ್ಟಾ ಹೊಡೆದಿದ್ದಾರೆ.
ನವದೆಹಲಿ (ನ.10) ದೀಪಾವಳಿ ಹಬ್ಬದ ಸಂಭ್ರಮ ಒಂದಡೆಯಾದರೆ ರಾಜಕೀಯ ನಾಯಕರ ಹೇಳಿಕೆ ಹಲವರ ಆಕ್ರೋಶಕ್ಕೆ ಗುರಿಯಾಗುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ದೀಪಾವಳಿ ಹೇಳಿಕೆ ಭಾರಿ ಕೋಲಾಹಲ ಸೃಷ್ಟಿಸಿದೆ. ದೀಪಾವಳಿ ಈದ್ ಮಿಲಾದ್ ಹಬ್ಬ ಎಂದು ಶುಭಕೋರಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ, ಸಂಸದ ಇಮ್ರಾನ್ ಮಸೂದ್ ವಿವಾದಿತ ಹೇಳಿಕೆ ನೀಡಿದ್ದಾರೆ. ದೀಪಾವಳಿ ಹಬ್ಬ, ವಾಯು ಮಾಲಿನ್ಯ ಮಾನವ ನಿರ್ಮಿತ ರೋಗ ಎಂದಿದ್ದಾರೆ. ದೀಪಾವಳಿ ಕುರಿತು ಹೇಳಿಕೆ ನೀಡುವಾಗ ವಿವಾದ ಸೃಷ್ಟಿಸಿದ್ದಾರೆ.
ಇಮ್ರಾನ್ ಮಸೂದ್ ಹೇಳಿದ್ದೇನು?
ಸಹರಾನಪುರ ಸಂಸದ ಇಮ್ರಾನ್ ಮಸೂದ್ ದೆಹಲಿ ಮಾನಲನ್ಯ ಕುರಿತು ಪ್ರತಿಕ್ರಿಯೆ ನೀಡುವಾಗ ವಿವಾದಿತ ಹೇಳಿಕೆ ನೀಡಿದ್ದಾರೆ. ದೆಹಲಿಯಲ್ಲಿ ವಾಯು ಮಾಲಿನ್ಯ ಕೈಮೀರಿದೆ. ಸಹರಾನಪುರದಲ್ಲಿ ವಾಯು ಮಾಲಿನ್ಯ ಪ್ರಮಾಣ 600ಕ್ಕೂ ಹೆಚ್ಚಾಗಿದೆ. ರಾತ್ರಿ ವೇಳೆ ವಾಯು ಮಾಲಿನ್ಯ ತೀವ್ರಗೊಳ್ಳುತ್ತಿದೆ. ದೀಪಾವಳಿ ಆಗಲಿ, ವಾಯು ಮಾಲಿನ್ಯವಾಗಲಿ ಮಾನವ ನಿರ್ಮಿತ ರೋಗ ಎಂದು ಇಮ್ರಾನ್ ಮಸೂದ್ ಹೇಳಿದ್ದಾರೆ. ಇದರ ವಿರುದ್ದ ಹೋರಾಡಲು ಸಾರ್ವಜನಿಕರು ಜಾಗೃತರಾಗಬೇಕು. ಕೇವಲ ಸರ್ಕಾರ ಮಾತ್ರ ಈ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಮಸೂದ್ ಹೇಳಿದ್ದಾರೆ.
ಇಮ್ರಾನ್ ಮಸೂದ್ ವಿರುದ್ದ ಬಿಜೆಪಿ ವಾಗ್ದಾಳಿ
ಇಮ್ರಾನ್ ಮಸೂದ್ ವಿವಾದಿತ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಬಿಜೆಪಿ ಕೆರಳಿದೆ. ಹಿಂದೂ ಧರ್ಮದ ಪವಿತ್ರ ಹಬ್ಬವನ್ನು ರೋಗ ಎಂದಿದ್ದಾರೆ. ಕಾಂಗ್ರೆಸ್ ಹಿಂದೂಗಳ ಭಾವನೆಗೆ, ನಂಬಿಕೆಗೆ, ಸಂಪ್ರದಾಯಕ್ಕೆ, ಸಂಸ್ಕೃತಿಗೆ ಧಕ್ಕೆ ತಂದಿದ್ದಾರೆ. ಹಿಂದೂ ವಿರೋಧಿ, ಸನಾತನಿ ವಿರೋಧಿ ಹೇಳಿಕೆ ನೀಡಿದ್ದಾರೆ. ಹಿಂದೂಗಳು ಸಂಭ್ರಮದಿಂದ ಹಬ್ಬ ಆಚರಿಸುತ್ತಿರುವ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಯುವ ಸಮೂಹ ತಮ್ಮ ಹಬ್ಬಗಳ ಮೇಲೆ ಅಪನಂಬಿಕೆ ಬರುವಂತೆ ಮಾಡಲಾಗುತ್ತಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದ ಇಮ್ರಾನ್ ಮಸೂದ್ ಹಾಗೂ ಇತರ ಕಾಂಗ್ರೆಸ್ ನಾಯಕರ ಇದಕ್ಕೆ ಬೆಲೆ ತೆರಬೇಕು ಎಂದು ಬಿಜೆಪಿ ಹೇಳಿದೆ.
ವಿವಾದ ತೀವ್ರಗೊಳ್ಳುತ್ತಿದ್ದಂತೆ ಯೂಟರ್ನ್
ಮಾಧ್ಯಮದ ಮುಂದೆ ಮಾತನಾಡಿದ ಇಮ್ರಾನ್ ಮಸೂದ್ ವಿಡಿಯೋ ಕೋಲಾಹಲ ಸೃಷ್ಟಿಸಿದೆ. ಬಿಜೆಪಿ ಆಕ್ರೋಶ, ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಇಮ್ರಾನ್ ಮಸೂದ್ ಉಲ್ಟಾ ಹೊಡೆದಿದ್ದಾರೆ. ತಾವು ದೀಪಾವಳಿ ಹಬ್ಬದ ಕುರಿತು ಹೇಳಿಕೆ ನೀಡಿಲ್ಲ ಎಂದಿದ್ದಾರೆ. ವಾಯು ಮಾಲಿನ್ಯ ಮಾನವ ನಿರ್ಮಿತ ರೋಗ ಎಂದಿದ್ದೇನೆ. ದೀಪಾವಳಿ ಕುರಿತು ಹೇಳಿಲ್ಲ ಎಂದಿದ್ದಾರೆ. ಆದರೆ ಇಮ್ರಾನ್ ಮಸೂದ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ದೀಪಾವಳಿ ಸಂಭ್ರಮದ ಈದ್ ಮಿಲಾದ್
ನಿನ್ನೆಯಷ್ಟೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೀಪಾವಳಿ ಹಬ್ಬಕ್ಕೆ ಶುಭಕೋರುತ್ತಾ ದೀಪಾವಳಿ ಸಂಬ್ರಮದ ಈದ್ ಮಿಲಾದ್. ಈ ಈದ್ ಮಿಲಾದ್ ಹಬ್ಬ ಸುದೀರ್ಘ ಕಾಲ ಆಚರಿಸುವ ಹಬ್ಬ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. ಖರ್ಗೆ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. ಇಷ್ಟೇ ಅಲ್ಲ ಖರ್ಗೆ ಹೇಳಿಕೆ ಕುರಿತು ಸಾರ್ವಜನಿಕ ವಲಯದಲ್ಲೂ ಟೀಕೆ ವ್ಯಕ್ತವಾಗಿದೆ.














