ನವದೆಹಲಿ(ಏ.13): ಸೇವೆಯಿಂದ ನಿವೃತ್ತಿ ಆಗಿ ಗುಜರಿ ಸೇರಿರುವ ಐಎನ್‌ಎಸ್‌ ವಿರಾಟ್‌ ನೌಕೆಯನ್ನು ಒಡೆದುಹಾಕುವ ಬದಲು ಅದನ್ನು ಹಾಗೆಯೇ ಕಾಪಾಡಿಕೊಂಡು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಬೇಕು ಎಂದು ಕೋರಿ ಖಾಸಗಿ ಕಂಪನಿಯೊಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಸೋಮವಾರ ತಿರಸ್ಕರಿಸಿದೆ.

ನೌಕೆಯನ್ನು ಒಡೆಯುವುದರ ವಿರುದ್ಧ ಎನ್ವಿಟೆಕ್‌ ಮರೈನ್‌ ಕನ್ಸಲ್ಟಂಟ್‌ ಎಂಬ ಖಾಸಗಿ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ ಅವರಿದ್ದ ತ್ರಿಸದಸ್ಯ ಪೀಠ, ಈ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಹೈಕೋರ್ಟ್‌ ನಿಮಗೆ ಒಂದು ಅವಕಾಶವನ್ನು ನೀಡಿತ್ತು. ಆದರೆ, ಸರ್ಕಾರ ಅದನ್ನು ಒಪ್ಪಿಕೊಂಡಿಲ್ಲ. ರಕ್ಷಣಾ ಸಚಿವಾಲಯ ನಿಮ್ಮ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಹೀಗಾಗಿ ನಾವು ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಐಎನ್‌ಎಸ್‌ ವಿರಾಟ್‌ ನೌಕೆಯನ್ನು ಶ್ರೀರಾಮ್‌ ಗ್ರೂಪ್‌ ಈಗಾಗಲೇ ಖರೀದಿಸಿದ್ದು, ಗುಜರಾತಿನ ಅಲಾಂಗ್‌ ಬಂದರಿನಲ್ಲಿ ಹಡಗನ್ನು ಒಡೆಯುವ ಪ್ರಕ್ರಿಯೆಯನ್ನು ಆರಂಭಿಸಿದೆ.