ನವದೆಹಲಿ(ಫೆ.17): ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಸೃಷ್ಟಿಸಲಾಗಿದ್ದ ‘ಟೂಲ್‌ಕಿಟ್‌’ ಪ್ರಕರಣದ ತನಿಖೆ ತೀವ್ರಗೊಳಿಸಿರುವ ದಿಲ್ಲಿ ಪೊಲೀಸರು, ‘ಟೂಲ್‌ಕಿಟ್‌ ಸಿದ್ಧಪಡಿಸುವ ಸಂಬಂಧ ನಿಷೇಧಿತ ಖಲಿಸ್ತಾನಿ ಸಂಘಟನೆಯೊಂದು ‘ಝೂಮ್‌ ಆ್ಯಪ್‌’ ಮೂಲಕ ನಡೆಸಿದ ಸಭೆಯಲ್ಲಿ ಯಾರಾರ‍ಯರು ಪಾಲ್ಗೊಂಡಿದ್ದರು ಎಂಬ ಮಾಹಿತಿ ನೀಡಿ’ ಎಂದು ಝೂಮ್‌ ಆ್ಯಪ್‌ ನಿರ್ವಾಹಕರಿಗೆ ಪತ್ರ ಬರೆದಿದ್ದಾರೆ.

ಕೃಷಿ ಕಾಯ್ದೆಗಳ ವಿರುದ್ಧದ ರೈತ ಹೋರಾಟದ ರೂಪರೇಷೆ ನಿರ್ಧರಿಸಲು ಜ.11ರಂದು ಕೆನಡಾ ಮೂಲದ ಖಲಿಸ್ತಾನಿ ಸಂಘಟನೆ ‘ಪಿಎಫ್‌ಜೆ’ ಮುಖಂಡ ಮೊ ಧಾಲಿವಾಲ್‌ ಅವರು ಝೂಮ್‌ ಆ್ಯಪ್‌ ಮೂಲಕ ವಿಡಿಯೋ ಸಂವಾದ ನಡೆಸಿದ್ದರು. ಸಂವಾದದಲ್ಲಿ ಬೆಂಗಳೂರಿನ ಪರಿಸರವಾದಿ ದಿಶಾ ರವಿ, ಮುಂಬೈ ವಕೀಲೆ ನಿಕಿತಾ ಜೇಕಬ್‌, ಪುಣೆ ಎಂಜಿನಿಯರ್‌ ಶಂತನು ಸೇರಿದಂತೆ 70 ಜನರು ಪಾಲ್ಗೊಂಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇದರ ಬೆನ್ನಲ್ಲೇ, ‘ಸಭೆಯಲ್ಲಿ ಭಾಗವಹಿಸಿದ ಎಲ್ಲರ ಮಾಹಿತಿ ನೀಡಬೇಕು ಎಂದು ಝೂಮ್‌ ಆ್ಯಪ್‌ಗೆ ಪತ್ರ ಬರೆಯಲಾಗಿದೆ’ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ. ಜೊತೆಗೆ ಶಂತನು ಅವರು ಜನವರಿ 20ರಿಂದ 27ರವರೆಗೆ ದಿಲ್ಲಿಯಲ್ಲಿದ್ದರು. ಈ ವೇಳೆ ಅವರು ನಡೆಸಿದ ಚಟುವಟಿಕೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಗ್ರೇಟಾ; ಅಸಲಿ ಮುಖ ಬಹಿರಂಗ ಎಂದ ಅಮೇರಿಕ ಲೇಖಕಿ!

ಮತ್ತೊಂದೆಡೆ, ವಾಟ್ಸ್‌ಆ್ಯಪ್‌ನಲ್ಲಿ ‘ಅಂತಾರಾಷ್ಟ್ರೀಯ ರೈತ ಹೋರಾಟ’ ಎಂಬ ಗ್ರೂಪ್‌ ಅನ್ನು ಡಿಸೆಂಬರ್‌ನಲ್ಲೇ ಸೃಷ್ಟಿಸಲಾಗಿತ್ತು. ಈ ಬಗ್ಗೆ ವಾಟ್ಸ್‌ಆ್ಯಪ್‌ನಿಂದಲೂ ವಿವರಣೆ ಪಡೆಯಲಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ, ಟೂಲ್‌ಕಿಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಹಣ ಹೂಡಿದವರು ಯಾರು?’ ಎಂಬುದರ ಪತ್ತೆಗೆ ಕೂಡ ಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕಾನೂನುಬದ್ಧ ಬಂಧನ:

‘ಈ ನಡುವೆ, ದಿಶಾ ಬಂಧನ ಕಾನೂನುಬದ್ಧವಾಗಿದೆ. ಕಾನೂನು 22 ವರ್ಷ ವಯಸ್ಸಿನವರು ಹಾಗೂ 50 ವರ್ಷ ವಯಸ್ಸಿನವರು ಎಂಬ ಭೇದಭಾವ ಮಾಡುವುದಿಲ್ಲ’ ಎಂದು ದಿಲ್ಲಿ ಪೊಲೀಸ್‌ ಆಯುಕ್ತ ಎಸ್‌.ಎನ್‌. ಶ್ರೀವಾಸ್ತವ ಸ್ಪಷ್ಟಪಡಿಸಿದ್ದಾರೆ. ‘ಕೇವಲ 22 ವರ್ಷದ ದಿಶಾಳನ್ನು ಬಂಧಿಸಲಾಯಿತು ಎಂದು ಜನರು ಹೇಳುವುದು ಸರಿಯಲ್ಲ’ ಎಂದೂ ಅವರು ಕಿಡಿಕಾರಿದ್ದಾರೆ.

ಗ್ರೇಟಾ ಥನ್ಬರ್ಗ್ toolkit ಪ್ರಕರಣ; ನಿಖಿತಾ ವಿರುದ್ಧ ಜಾಮೀನು ರಹಿತ ವಾರೆಂಟ್!

ಮಹಿಳಾ ಆಯೋಗ ಪತ್ರ:

ಇದರ ಬೆನ್ನಲ್ಲೇ ದಿಲ್ಲಿ ಮಹಿಳಾ ಆಯೋಗ ದಿಲ್ಲಿ ಪೊಲೀಸರಿಗೆ ಪತ್ರ ಬರೆದಿದೆ. ‘ದಿಶಾ ರವಿ ಬಂಧನದ ಬಗ್ಗೆ ವರದಿ ಕೊಡಿ’ ಎಂದು ಪತ್ರದಲ್ಲಿ ಸೂಚಿಸಿದೆ. ‘ದಿಶಾಳನ್ನು ಬೆಂಗಳೂರು ಕೋರ್ಟ್‌ಗೆ ಹಾಜರುಪಡಿಸಿ ಟ್ರಾನ್ಸಿಟ್‌ ರಿಮ್ಯಾಂಡ್‌ ಪಡೆಯದೇ ಕರೆತರಲಾಗಿದೆ’ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಪತ್ರವನ್ನು ಮಹಿಳಾ ಆಯೋಗ ಬರೆದಿದೆ.