Asianet Suvarna News Asianet Suvarna News

ಗಾಲ್ವಾನ್‌ನಿಂದ ವಾಪಸ್, ಪ್ಯಾಂಗಾಂಗ್‌ ಇನ್ನೂ ಬಿಕ್ಕಟ್ಟು!

ಸೇನೆ ಹಿಂಪಡೆಯಲು ಭಾರತ-ಚೀನಾ ಮ್ಯಾರಥಾನ್‌ ಸಭೆ| ಕಮಾಂಡರ್‌ಗಳ ನಡುವೆ 12 ತಾಸು ನಿರಂತರ ಮಾತುಕತೆ| ಗಲ್ವಾನ್‌ನಿಂದ ಯೋಧರ ಹಿಂಪಡೆಯುವ ಬಗ್ಗೆ ಒಮ್ಮತ| ಪ್ಯಾಂಗಾಂಗ್‌ನಿಂದ ಸೇನೆ ಹಿಂಪಡೆಯಲು ಒಮ್ಮತವಿಲ್ಲ

Differences over pullback in Galwan Pangong Lake hurdle for disengagement along LAC in Ladakh
Author
Bangalore, First Published Jul 2, 2020, 8:27 AM IST

ನವದೆಹಲಿ(ಜು.02): ಪೂರ್ವ ಲಡಾಖ್‌ನ ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಭಾರತ-ಚೀನಾ ಸೇನೆಯ ನಡುವೆ ಭೀಕರ ಹಿಂಸಾಚಾರ ನಡೆದ ನಂತರ ಉಭಯ ದೇಶಗಳು ಹಂತಹಂತವಾಗಿ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಲು ತಾತ್ವಿಕವಾಗಿ ಒಪ್ಪಿಕೊಂಡಿದ್ದರೂ ಅದನ್ನು ಜಾರಿಗೊಳಿಸುವ ಬಗೆ ಹೇಗೆ ಎಂಬುದು ಇನ್ನೂ ಇತ್ಯರ್ಥವಾಗಿಲ್ಲ. ಈ ಬಗ್ಗೆ ಮಂಗಳವಾರ ಎರಡೂ ಸೇನೆಗಳ ಕಮಾಂಡರ್‌ಗಳ ನಡುವೆ ಸತತ 12 ತಾಸುಗಳ ಮಾತುಕತೆ ನಡೆದಿದ್ದು, ಅದರಲ್ಲಿ ಭಾಗಶಃ ಮಾತ್ರ ಒಮ್ಮತ ಮೂಡಿದೆ ಎಂದು ಮೂಲಗಳು ತಿಳಿಸಿವೆ.

ಜೂ.15ರಂದು ಉಭಯ ದೇಶಗಳ ಸೈನಿಕರ ನಡುವೆ 45 ವರ್ಷಗಳಲ್ಲೇ ಭೀಕರವಾದ ಸಂಘರ್ಷ ನಡೆದ ಗಲ್ವಾನ್‌ ಕಣಿವೆಯ ಗಸ್ತು ಪಾಯಿಂಟ್‌ 14, 15 ಹಾಗೂ 17ರಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಕುರಿತು ಎರಡೂ ದೇಶಗಳ ನಡುವೆ ಈ ಮಾತುಕತೆಯಲ್ಲಿ ಒಮ್ಮತ ಮೂಡಿದೆ. ಗಲ್ವಾನ್‌ ಕಣಿವೆಯಿಂದ ಆರಂಭಿಸಿ ಹಾಟ್‌ ಸ್ಟ್ರಿಂಗ್‌ ಪ್ರದೇಶದವರೆಗೆ ಈ ಪ್ರದೇಶಗಳು ಬರುತ್ತವೆ. ಇಲ್ಲಿ ಭಾರತ ತನ್ನದು ಎಂದು ಹೇಳಿರುವ ಪ್ರದೇಶದಿಂದ ಕೆಲವು ನೂರು ಮೀಟರ್‌ಗಳಷ್ಟುಹಿಂದಕ್ಕೆ ಸರಿಯಲು ಚೀನಾ ಒಪ್ಪಿಕೊಂಡಿದೆ.

ಆದರೆ, ಮೇ 5ರಂದು ಎರಡೂ ದೇಶಗಳ ಸೈನಿಕರ ನಡುವೆ ಹಿಂಸಾಚಾರ ನಡೆದ ಪ್ಯಾಂಗಾಂಗ್‌ ಲೇಕ್‌ ಪ್ರದೇಶದಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಚೀನಾ ಈಗಲೂ ಒಪ್ಪಿಲ್ಲ. ಈ ವಿಷಯದಲ್ಲಿ ನಡುವೆ ಒಮ್ಮತ ಮೂಡಿಲ್ಲ. ಚೀನಾದ ಸೇನೆ ಇನ್ನೂ ಹಟಮಾರಿ ಧೋರಣೆ ಪ್ರದರ್ಶಿಸುತ್ತಿದೆ. ಆದರೆ, ಒಟ್ಟಾರೆ ವಿವಾದವೇ ಸಂಕೀರ್ಣವಾಗಿದ್ದು, ಇದರಲ್ಲಿ ಹಂತಹಂತವಾಗಿಯೇ ಪ್ರಗತಿ ಸಾಧಿಸಬೇಕಿದೆಯೇ ಹೊರತು ಒಂದೇ ಸಲ ಒಮ್ಮತ ಮೂಡಲು ಸಾಧ್ಯವಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

3ನೇ ಸುತ್ತು 12 ತಾಸುಗಳ ಮಾತುಕತೆ:

ಗಲ್ವಾನ್‌ನಲ್ಲಿ ಉಭಯ ದೇಶಗಳ ನಡುವೆ ಹಿಂಸಾಚಾರ ನಡೆದು ಭಾರತದ 20 ಯೋಧರು ಹುತಾತ್ಮರಾದ ನಂತರ ನಡೆಯುತ್ತಿರುವ 3ನೇ ಸುತ್ತಿನ ಮಾತುಕತೆ ಇದಾಗಿದೆ. ಎಲ್‌ಎಸಿಯಿಂದ ಭಾರತದ ಕಡೆಗಿರುವ ಚುನ್ಸುಲ್‌ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಲೆಫ್ಟಿನೆಂಟ್‌ ಜನರಲ್‌ ಹರಿಂದರ್‌ ಸಿಂಗ್‌ ಹಾಗೂ ಚೀನಾದ ಮೇಜರ್‌ ಜನರಲ್‌ ಲಿಯು ಲಿನ್‌ ನಡುವೆ ಸತತ 12 ತಾಸುಗಳ ಮಾತುಕತೆ ನಡೆದಿದೆ. ಎಲ್‌ಎಸಿಯಿಂದ ಭಾರತದ ಕಡೆಗೆ ಗಸ್ತು ಪಾಯಿಂಟ್‌ 15 ಮತ್ತು 17ರ ಒಳಗೆ ನೂರಾರು ಮೀಟರ್‌ ನುಸುಳಿದ್ದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಈ ವೇಳೆ ಚೀನಾ ಒಪ್ಪಿದೆ. ಇನ್ನು, ಗಲ್ವಾನ್‌ನಿಂದ ಹಾಟ್‌ ಸ್ಟ್ರಿಂಗ್‌ ನಡುವೆ ಬರುವ 16ನೇ ಗಸ್ತು ಪಾಯಿಂಟ್‌ ಭಾರತದ ಗಡಿಯೊಳಗೇ ಇದ್ದು, ಅದರ ಬಗ್ಗೆ ಚೀನಾದ ತಕರಾರಿಲ್ಲ.

ಆದರೆ, ಪ್ಯಾಂಗಾಂಗ್‌ ಲೇಕ್‌ ಪ್ರದೇಶದಲ್ಲಿ ‘ಫಿಂಗರ್‌’ ಎಂದು ಗುರುತಿಸಲಾದ 8 ಪ್ರದೇಶಗಳಲ್ಲಿ ಎಲ್‌ಎಸಿಯ ಗುಂಟ ಭಾರತದ ಸೈನಿಕರು ಗಸ್ತು ತಿರುಗುವುದನ್ನು ಚೀನಾ ತಡೆಯುತ್ತಿದ್ದು, ಅದರ ಬಗ್ಗೆ ಒಮ್ಮತ ಮೂಡಿಲ್ಲ. ಇಲ್ಲಿ 3ರಿಂದ 8ನೇ ಫಿಂಗರ್‌ವರೆಗೆ ಭಾರತ ಗಸ್ತು ತಿರುಗುವುದನ್ನು ಚೀನಾ ತಡೆಯುತ್ತಿದೆ. 3ರಿಂದ 1ನೇ ಫಿಂಗರ್‌ವರೆಗಿನ ಪ್ರದೇಶ ಮಾತ್ರ ಭಾರತದ್ದು ಎಂದು ಚೀನಾ ಒಪ್ಪಿಕೊಳ್ಳುತ್ತದೆ. ಆದರೆ, ಎಲ್ಲಾ 8 ಫಿಂಗರ್‌ ಪ್ರದೇಶಗಳೂ ಭಾರತದ್ದಾಗಿದ್ದು, ಭಾರತೀಯ ಸೇನೆ ಅವುಗಳ ಮೇಲೆ ಹಕ್ಕು ಪ್ರತಿಪಾದನೆ ಮಾಡುತ್ತಿದೆ.

Follow Us:
Download App:
  • android
  • ios