ಹೋಮ್ ವರ್ಕ್ ಹೇಗೆ ಮಾಡಲಿ? ಪೊಲೀಸರ ಪ್ರಶ್ನಿಸಿದ 3ನೇ ತರಗತಿ ಬಾಲಕಿಯ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ನನ್ನ ಬ್ಯಾಗ್ ಕಳೆದುಹೋಗಿದೆ. ಹೇಗಾದರೂ ಮಾಡಿ ಹುಡುಕಿ ಕೊಡಿ, ಅದರಲ್ಲಿ ಹೋಮ್ ವರ್ಕ್ ಬುಕ್ ಇದೆ ಎಂದು ಪುಟ್ಟ ಬಾಲಕಿಯ ದೂರು ಇದೀಗ ಭಾರಿ ಸದ್ದು ಮಾಡುತ್ತಿದೆ.
ಇಂದೋರ್ (ಡಿ. 27) ಆಟೋದಲ್ಲಿ ಶಾಲೆಗೆ ತೆರಳುವಾಗ ನನ್ನ ಬ್ಯಾಗ್ ಮರೆತು ಹೋಗಿದೆ. ಇದೀಗ ನನ್ನ ಬ್ಯಾಗ್ ಕಾಣುತ್ತಿಲ್ಲ. ಬ್ಯಾಗ್‌ನಲ್ಲಿ ನನ್ನ ಹೋಮ್ ವರ್ಕ್ ನೋಟ್ ಬುಕ್ ಇದೆ. ನಾನು ಹೇಗೆ ಹೋಮ್ ವರ್ಕ್ ಮಾಡಲಿ ಎಂದು 3ನೇ ತರಗತಿ ಪುಟ್ಟ ಬಾಲಕಿ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ ವಿವರಿಸಿ ದೂರು ದಾಖಲಿಸಿದ ಘಟನೆ ಭಾರಿ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಶಾಜಾಪುರದಲ್ಲಿ ನಡೆದಿದೆ. ಬಾಲಕಿಯ ದೂರಿನ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಾಲಕಿಯ ಬ್ಯಾಗ್ ಹುಡುಕಿ ಕೊಟ್ಟಿದ್ದಾರೆ. ಈ ಸಂಪೂರ್ಣ ಘಟನೆ ಇದೀಗ ಭಾರಿ ಸದ್ದು ಮಾಡುತ್ತಿದೆ.
ಬಾಲಕಿ ಚೆರಿ ನಾಯಕ್ ದೂರು
ಚಳಿ ಕಾರಣದಿಂದ ಈಗ ಎಲ್ಲಾ ಶಾಲಾ ಮಕ್ಕಳು ಬೆಳಗ್ಗೆ ಎದ್ದು ರೆಡಿಯಾಗಿ ಶಾಲೆಗೆ ತೆರಳಲು ವಿಳಂಬವಾಗುವುದು ಹೊಸದೇನಲ್ಲ. ಹೀಗೆ 3ನೇ ತರಗತಿ ಬಾಲಕಿ ಚೆರಿ ನಾಯಕ್ ತರಾತುರಿಯಲ್ಲಿ ರೆಡಿಯಾಗಿದ್ದಾಳೆ. ಆಟೋ ರಿಕ್ಷಾದಲ್ಲಿ ಪೋಷಕರು ಮಗಳನ್ನು ಕಳುಹಿಸಿಕೊಟ್ಟಿದ್ದಾರೆ. ಆದರೆ ಬಾಲಕಿ ಮೊದಲೇ ವಿಳಂಬವಾಗಿದ್ದ ಕಾರಣ ಆಟೋ ನಿಲ್ಲಿಸಿದ ಬೆನ್ನಲ್ಲೇ ಇಳಿದು ಶಾಲೆಯತ್ತ ಬೇಗನೆ ಹೆಜ್ಜೆ ಹಾಕಿದ್ದಾಳೆ. ಇತ್ತ ಆಟೋ ಸ್ಥಳದಿಂದ ತೆರಳಿದೆ. ಶಾಲೆಯಿಂದ ಮರಳಿ ಬಂದಾಗ ಬಾಲಕಿ ಬಳಿ ಬ್ಯಾಗ್ ಇರಲಿಲ್ಲ.
ತರಗತಿ ಬಂದಾಗ ಬಾಲಕಿ ಬಳಿ ಇಲ್ಲ ಸ್ಕೂಲ್ ಬ್ಯಾಗ್
ಬಾಲಕಿಯನ್ನು ಕರೆದುಕೊಂಡು ಬರಲು ತಾಯಿ ತೆರಳಿದ್ದಾಳೆ. ಬಳಿಕ ಸರ್ವೀಸ್ ಆಟೋ ಮೂಲಕ ತಾಯಿ ಹಾಗೂ ಬಾಲಕಿ ಮನೆಯತ್ತ ಪ್ರಯಾಣ ಮಾಡಿದ್ದಾರೆ. ಆಟೋ ಇಳಿದು ಮನೆಗೆ ಬಂದಾಗ ಬಾಲಕಿ ಬಳಿ ಬ್ಯಾಗ್ ಇರಲಿಲ್ಲ. ಬ್ಯಾಗ್ ಎಲ್ಲಿ ನಾಪತ್ತೆಯಾಗಿದೆ ಅನ್ನೋದು ಬಾಲಕಿಗೆ ತಿಳಿಯದಾಗಿದೆ. ಇತ್ತ ತಾಯಿಗೂ ಎಲ್ಲಿ ಸ್ಕೂಲ್ ಬ್ಯಾಗ್ ಮಿಸ್ ಆಗಿದೆ ಅನ್ನೋದು ಗೊತ್ತಾಗಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಬ್ಯಾಗ್ ಎಲ್ಲಿ ನಾಪತ್ತೆಯಾಗಿದೆ ಅನ್ನೋದು ತಿಳಿಯಲೇ ಇಲ್ಲ. ಹೀಗಾಗಿ ಬಾಲಕಿ ಹಾಗೂ ತಂದೆ ಇಬ್ಬರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ನಾನು ಹೇಗೆ ಹೋಮ್ ವರ್ಕ್ ಮಾಡಲಿ
ಪೊಲೀಸ್ ಠಾಣೆಗೆ ಬಂದ ಬಾಲಕಿ ಪೊಲೀಸರ ಮುಂದೆ , ನನ್ನ ಬ್ಯಾಗ್ ಕಳೆದು ಹೋಗಿದೆ. ಅದರಲ್ಲಿ ನನ್ನ ಹೋಮ್ ವರ್ಕ್ ನೋಟ್‌ಬುಕ್ ಇದೆ. ನಾನು ಹೇಗೆ ತರಗತಿ ಹೋಮ್ ವರ್ಕ್ ಮಾಡಲಿ ಎಂದು ಪೊಲೀಸರ ಪ್ರಶ್ನಿಸಿದ್ದಳೆ.ಮುದ್ದು ಹುಡುಗಿಯ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಇದೇ ವೇಳೆ ತಕ್ಷಣವೇ ಸ್ಕೂಲ್ ಬ್ಯಾಗ್ ಹುಡುಕಿಕೊಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ತಕ್ಷಣವೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಶಾಲೆ ಬಳಿ ಇರುವ ಸಿಸಿಟಿವಿ, ದಾರಿಯಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳೆ ಆಟೋದಲ್ಲಿ ತೆರಳುವಾಗ ಬ್ಯಾಗ್ ಹಿಡಿದು ಹತ್ತಿರುವುದು ಪತ್ತೆಯಾಗಿದೆ. ಆದರೆ ಆಟೋ ಇಳಿಯುವಾಗ ಬಾಲಕಿ ಬಳಿ ಬ್ಯಾಗ್ ಇರಲಿಲ್ಲ. ಹೀಗಾಗಿ ಆಟೋದಲ್ಲಿ ಮಿಸ್ಸಿಂಗ್ ಆಗಿದೆ ಅನ್ನೋದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಳಿಕ ಆಟೋ ಪತ್ತೆ ಹಚ್ಚಿದ್ದಾರೆ. ಈ ವೇಳೆ ಆಟೋ ಚಾಲಕ ಕೂಡ ಈ ಬ್ಯಾಗ್ ಸಿಕ್ಕಿದೆ. ಯಾರದು ಅನ್ನೋದು ಗೊತ್ತಿಲ್ಲ. ಕರೆ ಅಥವಾ ಸಂಬಂಧ ಪಟ್ಟವರು ಬರಬಹುದು ಎಂದು ಕಾಯುತ್ತಿದ್ದೆ ಎಂದಿದ್ದಾರೆ. ಈ ಮೂಲಕ ಬಾಲಕಿಯ ಬ್ಯಾಗ್ ಮರಳಿ ಸಿಕ್ಕಿದೆ.
ಶಾಲಾ ಬ್ಯಾಗ್‌ನಲ್ಲಿ ಪುಸ್ತಕ, ವಾಟರ್ ಬಾಟಲ್ ಸೇರಿದಂತೆ ಇತರ ವಸ್ತುಗಳಿತ್ತು. ಈ ಘಟನೆ ಶಾಜಪುರದಲ್ಲಿ ಭಾರಿ ಸದ್ದು ಮಾಡಿದೆ. ಹೀಗಾಗಿ ಮಾಧ್ಯಮಗಳು ಬಾಲಕಿಯನ್ನು ಹುಡುಕಿಕೊಂಡು ಬಂದಿದೆ. ಬಾಲಕಿ ಮಾಧ್ಯಮಕ್ಕೂ ಪ್ರತಿಕ್ರಿಯೆ ನೀಡಿದ್ದಾಳೆ.


