ಅಂಜನಾದ್ರಿ ಅಲ್ಲ, ನಾಸಿಕ್‌ನ ಅಂಜನೇರಿ: ಹನುಮ ಜನ್ಮಸ್ಥಳ ಬಗ್ಗೆ ಈಗ ಮಹಾರಾಷ್ಟ್ರದಿಂದ ತಗಾದೆ!
* ಹನುಮ ಜನ್ಮಸ್ಥಳ ಬಗ್ಗೆ ಈಗ ಮಹಾರಾಷ್ಟ್ರದಿಂದ ತಗಾದೆ!
* ನಾಳೆ ಧರ್ಮ ಸಂಸತ್‌ನಲ್ಲಿ ಪಂಡಿತರಿಂದ ಚರ್ಚೆ
* ಕರ್ನಾಟಕದ ಅಂಜನಾದ್ರಿ ಅಲ್ಲ, ನಾಸಿಕ್‌ನ ಅಂಜನೇರಿ ಎಂದ ಮಹಾರಾಷ್ಟ್ರ
ನಾಸಿಕ್(ಮೇ.30): ಒಂದು ಕಡೆ ಆಂಜನೇಯನ ಜನ್ಮಸ್ಥಳ ಕರ್ನಾಟಕದ ಕಿಷ್ಕಿಂಧೆ ಎಂದು ಮೊದಲಿನಿಂದ ಜನಜನಿತವಾಗಿದ್ದರೂ, ‘ಹನುಮ ಜನ್ಮಸ್ಥಳ ತಿರುಮಲ’ ಎಂದು ಘೋಷಿಸಿ ತಿರುಮಲ ತಿರುಪತಿ ದೇವಸ್ಥಾನ ಸಮಿತಿ (ಟಿಟಿಡಿ), ಮಂಡಿಸಿ ಇತ್ತೀಚೆಗೆ ವಿವಾದ ಸೃಷ್ಟಿಸಿತ್ತು. ಇದರ ನಡುವೆಯೇ ಮಹಾರಾಷ್ಟ್ರದ ನಾಸಿಕ್ ಸನಿಹದ ಆಂಜನೇರಿ ಪರ್ವತವೇ ಆಂಜನೇಯನ ಜನ್ಮಸ್ಥಳ ಎಂಬ ಇನ್ನೊಂದು ವಾದ ಕೇಳಿಬಂದಿದೆ. ಹೀಗಾಗಿ ಆಂಜನೇಯನ ನೈಜ ಜನ್ಮಸ್ಥಳ ಯಾವುದು ಎಂಬುದರ ಚರ್ಚೆಗೆ ನಾಸಿಕ್‌ನಲ್ಲಿ ಮಂಗಳವಾರ (ಮೇ 31) ಧರ್ಮಸಂಸತ್ ಏರ್ಪಡಿಸಲಾಗಿದೆ.
ಈ ಧರ್ಮಸಂಸತ್ತನ್ನು ಮಹಾಂತ ಶ್ರೀ ಮಂಡಲಾಚಾರ್ಯ ಪೀಠಾಧೀಧ್ವರರಾದ ಸ್ವಾಮಿ ಅನಿಕೇತ ಶಾಸ್ತ್ರಿ ದೇಶಪಾಂಡೆ ಅವರು ಹಮ್ಮಿಕೊಂಡಿದ್ದಾರೆ. ‘ದೇಶದ ಅನೇಕ ಸಾಧು ಸಂಸತರು ಈ ಧರ್ಮ ಸಂಸತ್ತಿನಲ್ಲಿ ಪಾಲ್ಗೊಂಡು ಆಂಜನೇಯನ ಜನ್ಮಸ್ಥಳದ ಬಗ್ಗೆ ಚರ್ಚಿಸಲಿದ್ದಾರೆ. ಸಂಸತ್ತಿನ ನಿರ್ಣಯವನ್ನು ಎಲ್ಲರೂ ಒಪ್ಪಿಕೊಳ್ಳಲಿದ್ದಾರೆ’ ಎಂದು ದೇಶಪಾಂಡೆ ಹೇಳಿಕೊಂಡಿದ್ದಾರೆ.
ವಿಶೇಷವೆಂದರೆ ಆಂಜನೇಯನ ಜನ್ಮಸ್ಥಳ ಕರ್ನಾಟಕದ ಹಂಪಿ ಬಳಿಯ ಕಿಷ್ಕಿಂಧೆ ಎಂದು ಮೊದಲಿನಿಂದಲೂ ಹೇಳುತ್ತಿರುವ ಕಿಷ್ಕಿಂಧೆಯ ಮಹಾಂತ ಗೋವಿಂದ ದಾಸ್ ಅವರು ಧರ್ಮ ಸಂಸತ್ತಿನಲ್ಲಿ ಪಾಲ್ಗೊಳ್ಳಲಿದ್ದು, ನಾಸಿಕ್‌ನ ತ್ರ್ಯಂಬಕೇಶ್ವರಕ್ಕೆ ಶನಿವಾರವೇ ಆಗಮಿಸಿದ್ದಾರೆ. ‘ವಾಲ್ಮೀಕಿ ರಾಮಾಯಣದ ಪ್ರಕಾರ ಆಂಜನೇಯನ ಜನ್ಮಸ್ಥಳ ಕಿಷ್ಕಿಂಧೆ ಎಂದಿದೆ. ನಾಸಿಕ್‌ನ ಆಂಜನೇರಿ ಎಂದು ಎಲ್ಲೂ ಬರೆದಿಲ್ಲ’ ಎಂದು ಗೋವಿಂದ ದಾಸರು ಹೇಳಿದ್ದಾರೆ. ಧರ್ಮಸಂಸತ್ ನಡೆಯಲಿರುವ ಕಾರಣ ನಾಸಿಕ್ ಪೊಲೀಸರು ಭಾರೀ ಭದ್ರತೆ ಹಮ್ಮಿಕೊಂಡಿದ್ದಾರೆ.
ಮಹಾರಾಷ್ಟ್ರ ವಾದ
ನಾಸಿಕ್‌ನಿಂದ ತ್ರ್ಯಂಬಕೇಶ್ವರಕ್ಕೆ ಹೋಗುವಾಗ 20 ಕಿ.ಮೀ. ದೂರದಲ್ಲಿ ಆಂಜನೇರಿ ಪರ್ವತ ಇದ್ದು, ಅಲ್ಲಿ ಕೋಟೆ ಇದೆ. ಇದನ್ನು ಆಂಜನೇಯನ ಜನ್ಮಸ್ಥಳ ಎಂಬುದು ನಾಸಿಕ್ ಜನರ ನಂಬಿಕೆ. ಇದಕ್ಕೆ ಹನುಮಂತನ ತಾಯಿ ಅಂಜನಿಯ ಹೆಸರು ಇಡಲಾಗಿದೆ. ಇಲ್ಲಿ ಅಂಜನಿ ಮಾತೆ ಹಾಗೂ ಹನುಮಂತನ ಮಂದಿರಗಳಿವೆ.