ತಿಂಗಳ ಹಿಂದೆ ವಿಮಾನಯಾನ ಸಂಸ್ಥೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಹಿರಿಯ ಸೇನಾಧಿಕಾರಿಗೆ ಸಂಕಷ್ಟ ಹೆಚ್ಚಾಗಿದೆ. ಸೇನಾಧಿಕಾರಿಗೆ ಯಾವುದೇ ವಿಮಾನದಲ್ಲಿ ಇನ್ನು 5 ವರ್ಷ ಹಾರಾಡುವಂತಿಲ್ಲ.

ನವದೆಹಲಿ (ಆ.27) ಸ್ಪೈಸ್ ಜೆಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಭಾರಿ ಕೋಲಾಹಲ ಸೃಷ್ಟಿಸಿದ್ದ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಆರ್‌ಕೆ ಸಿಂಗ್‌ಗೆ ಮತ್ತೊಂದು ಆಘಾತ ಎದುರಾಗಿದೆ. ತೀವ್ರ ಟೀಕೆಗೆ ಗುರಿಯಾಗಿದ್ದ ಆರ್‌ಕೆ ಸಿಂಗ್ ಮೇಲೆ ಇದೀಗ ಭಾರತೀಯ ನಾಗರೀಕ ವಿಮಾನಯಾನ ಸಂಸ್ಥೆ 5 ವರ್ಷ ಹಾರಾಟ ಬ್ಯಾನ್ ಮಾಡಿದೆ. ಆರ್‌ಕೆ ಸಿಂಗ್ ಯಾವುದೇ ನಾಗರೀಕರ ವಿಮಾನದಲ್ಲಿ 5 ವರ್ಷ ತೆರಳುವಂತಿಲ್ಲ. 2025 ರ ಜುಲೈ 26 ರಂದು ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಹಲ್ಲೆ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ನಾಗರಿಕ ವಿಮಾನಯಾನ ನಿಯಮದ ಅಡಿಯಲ್ಲಿ ರಚಿಸಲಾದ ಮೂವರು ಸದಸ್ಯರ ಆಂತರಿಕ ಸಮಿತಿಯ ತನಿಖೆಯ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕ್ಯಾಬಿನ್ ಬ್ಯಾಗ್ ವಿಚಾರ ಜಗಳ

ಲೆಫ್ಟಿನೆಂಟ್ ಕರ್ನಲ್ ಆರ್‌ಕೆ ಸಿಂಗ್ ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್‌ನಲ್ಲಿರುವ ಹೈ ಆಲ್ಟಿಟ್ಯೂಡ್ ವಾರ್‌ಫೇರ್ ಶಾಲೆಯಲ್ಲಿ ನಿಯೋಜನೆಗೊಂಡಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಆರ್‌ಕೆ ಸಿಂಗ್ ಶ್ರೀನಗರದಿಂದ ದೆಹಲಿಗೆ ಹೋಗುವ ಸ್ಪೈಸ್‌ಜೆಟ್ ವಿಮಾನ SG 8963 ರಲ್ಲಿ ಪ್ರಯಾಣಿಸಬೇಕಿತ್ತು. ಅವರ ಬಳಿ 16 ಕೆಜಿ ತೂಕದ ಕ್ಯಾಬಿನ್ ಬ್ಯಾಗ್ ಇತ್ತು, ಆದರೆ ನಿಯಮಗಳ ಪ್ರಕಾರ ಕೈ ಸಾಮಾನುಗಳ ತೂಕ ಕೇವಲ 7 ಕೆಜಿ ಇರಬೇಕು. ಇದಕ್ಕಾಗಿ ಅವರಿಂದ 6,000 ರೂಪಾಯಿ ಪಾವತಿಸಲು ಹೇಳಿದಾಗ ಅವರು ನಿರಾಕರಿಸಿದರು. ಈ ವೇಳೆ ಶುರುವಾದ ವಾಗ್ವಾದ ಜಗಳವಾಗಿ ತಿರುಗಿತ್ತು.ಬೋರ್ಡಿಂಗ್ ಗೇಟ್‌ನಲ್ಲೇ ಜಗಳ ನಡೆದಿತ್ತು.

ಏನಿದು ಪ್ರಕರಣ?

ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಲೆಫ್ಟಿನೆಂಟ್ ಕರ್ನಲ್ ಆರ್‌ಕೆ ಸಿಂಗ್‌ಗೆ ವಿಮಾನ ಬೋರ್ಡಿಂಗ್‌ನಿಂದ ನಿರಾಕರಿಸಲಾಗಿತ್ತು. ಈ ವೇಳೆ ಆಕ್ರೋಶಗೊಂಡ ಆರ್‌ಕೆ ಸಿಂಗ್, ಬೋರ್ಡಿಂಗ್ ಗೇಟ್‌ನ ಪ್ರೋಟೋಕಾಲ್ ಮುರಿದಿದ್ದರು. ವಿಮಾನ ನಿಲ್ದಾಣದ ಭದ್ರತೆಯಲ್ಲಿ ನಿಯೋಜನೆಗೊಂಡಿದ್ದ CISF ಯ ಸಿಬ್ಬಂದಿ ಆರ್‌ಕೆ ಸಿಂಗ್ ಅವರನ್ನು ಕೌಂಟರ್‌ಗೆ ಕರೆದೊಯ್ದಿದ್ದರು. ಆದರೆ ಈ ಸಮಯದಲ್ಲಿ ಸಿಂಗ್ ಸ್ಪೈಸ್‌ಜೆಟ್‌ನ ನಾಲ್ಕು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯಲ್ಲಿ ಸಿಬ್ಬಂದಿಗೆ ಗಂಭೀರ ಗಾಯಗಳಾಗಿವೆ. ಒಬ್ಬರ ಬೆನ್ನುಮೂಳೆಗೆ ಗಾಯವಾಗಿದೆ. ಇನ್ನೊಬ್ಬ ವ್ಯಕ್ತಿಯ ದವಡೆಗೆ ಗಾಯವಾಗಿದ್ದು, ಮೂರನೇ ಸಿಬ್ಬಂದಿ ಪ್ರಜ್ಞಾಹೀನರಾಗಿದ್ದರು ಎಂದು ವರದಿಯಾಗಿದೆ. ಈ ಸಂಪೂರ್ಣ ಘಟನೆಯ ವಿಡಿಯೋ CCTV ಯಲ್ಲಿ ದಾಖಲಾಗಿದ್ದು, ಸಿಂಗ್ ವಿರುದ್ಧ FIR ದಾಖಲಾಗಿದೆ. ಸಿಂಗ್ ಕೂಡ ಏರ್‌ಲೈನ್ ಸಿಬ್ಬಂದಿ ಹಲ್ಲೆ ನಡೆಸಿದ ಆರೋಪ ಹೊರಿಸಿ ಪ್ರತಿ-FIR ದಾಖಲಿಸಿದ್ದರು.

5 ವರ್ಷಗಳ ಕಾಲ ಹಾರಾಟ ನಿಷೇಧ

ಈ ಘಟನೆಯ ನಂತರ DGCA ಲೆಫ್ಟಿನೆಂಟ್ ಕರ್ನಲ್ ಆರ್‌ಕೆ ಸಿಂಗ್ ಅವರಿಗೆ ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಲ್ಲಿ 5 ವರ್ಷಗಳ ಕಾಲ ಹಾರಾಟ ನಿಷೇಧ ಹೇರಿದೆ, ಅಂದರೆ ಅವರು ಜುಲೈ 2030 ರವರೆಗೆ ಯಾವುದೇ ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ.