ತಿರುಮಲದಲ್ಲಿ ಭಕ್ತರು ಎಗ್ ಬಿರಿಯಾನಿ ಸೇವಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಭದ್ರತಾ ಲೋಪದಿಂದಾಗಿ ಮಾಂಸಾಹಾರವನ್ನು ತರಲು ಸಾಧ್ಯವಾಯಿತು ಎಂಬ ಟೀಕೆ ವ್ಯಕ್ತವಾಗಿದೆ. ನಿಯಮ ಉಲ್ಲಂಘಿಸಿದ ಭಕ್ತರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ತಿರುಪತಿ (ಜ.22): ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಆವರಣದಲ್ಲಿ ಭಕ್ತರು ಎಗ್ ಬಿರಿಯಾನಿ ತಿನ್ನುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ತಮಿಳುನಾಡಿನ ಭಕ್ತರು ತಿರುಮಲದ ರಂಬಗಿಚಾ ಬಸ್ ನಿಲ್ದಾಣದಲ್ಲಿ ಎಗ್ ಬಿರಿಯಾನಿ ತಿನ್ನುವಾಗ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣವನ್ನು ವಿಪಕ್ಷ ವೈಎಸ್ಆರ್‌ಸಿಪಿ ಸೇರಿದಂತೆ ವಿವಿಧ ಪ್ರತಿಪಕ್ಷಗಳು ಖಂಡಿಸಿದ್ದು, ತಿರುಮಲ ತಿರುಪತಿದೇವಸ್ಥಾನವು (ಟಿಟಿಡಿ) ಬೆಟ್ಟದಲ್ಲಿ ಪಾವಿತ್ರ್ಯ ಕಾಯುವಲ್ಲಿ ವಿಫಲವಾಗಿದೆ. ಅಲಿಪ್ಪಿರಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವ್ಯವಸ್ಥೆ ಇದ್ದರೂ ಎಗ್ ಬಿರಿಯಾನಿ ಬೆಟ್ಟಕ್ಕೆ ಹೇಗೆ ಬಂತು ಎಂದು ಟೀಕಿಸಿವೆ. ತಿರುಮಲದಲ್ಲಿ ಮಾಂಸಾಹಾರ, ಮದ್ಯಪಾನ, ಸಿಗರೇಟ್ ಮತ್ತು ತಂಬಾಕು ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
30 ಮಂದಿ ಭಕ್ತರಿದ್ದ ಗುಂಪು ತಿರುವಲ್ಲೂರು ಬಳಿಯ ಗುಮ್ಮಡಿಪುಡಿ ಗ್ರಾಮದಿಂದ ತಿರುಮಲಕ್ಕೆ ಪ್ರಯಾಣ ಮಾಡಿತ್ತು. ಬರುವಾಗ ಅವರು ತಮ್ಮೊಂದಿಗೆ ಊಟವನ್ನು ತೆಗೆದುಕೊಂಡು ಬಂದಿದ್ದರು. ಇದರಲ್ಲಿ ಎಗ್ ಬಿರಿಯಾನಿ ಕೂಡ ಇತ್ತು. ಬಸ್ ನಿಲ್ದಾಣದ ಬಳಿ ಭಕ್ತರು ಊಟ ಮಾಡುತ್ತಿದ್ದುದನ್ನು ಜಾಗೃತ ಅಧಿಕಾರಿಗಳು ಗಮನಿಸಿದ್ದಾರೆ. ಅವರ ಎಗ್ ಬಿರಿಯಾನಿ ಊಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡಿದ್ದರು. ಸಹ ಭಕ್ತರಿಂದ ಮಾಹಿತಿ ಪಡೆದ ನಂತರ, ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಗುಂಪನ್ನು ಪ್ರಶ್ನೆ ಮಾಡಿದ್ದಾರೆ. ನಂತರ ಅವರಿಗೆ ಮೌಖಿಕ ಎಚ್ಚರಿಕೆ ನೀಡಲಾಯಿತು, ಮುಂದಿನ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಇಲ್ಲಿನ ನಿಯಮದ ಬಗ್ಗೆ ತಮಗೆ ಅರಿವಿರಲಿಲ್ಲ ಎಂದು ಭಕ್ತರು ತಿಳಿಸಿದ್ದಾರೆ. ಮದ್ಯಪಾನ, ಮಾಂಸಾಹಾರ, ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳಿಗೆ ಇಲ್ಲಿ ಕಟ್ಟುನಿಟ್ಟಿನ ನಿಷೇಧವಿದೆ ಅನ್ನೋದು ಗೊತ್ತಿರಲಿಲ್ಲ ಎಂದಿದ್ದಾರೆ. ಇದು ಪವಿತ್ರ ಬೆಟ್ಟದಲ್ಲಿ ದೀರ್ಘಕಾಲದಿಂದ ಇರುವ ನಿಯಮವಾಗಿತ್ತು. ದೇವಾಲಯದ ಕಾರ್ಯಾಚರಣೆಗಳನ್ನು ನೋಡಿಕೊಳ್ಳುವ ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಇದನ್ನು ಜಾರಿಗೊಳಿಸುತ್ತವೆ.
ತಿರುಪತಿ ತಿಮ್ಮಪ್ಪನಿಗೆ ಅರ್ಪಿಸಿದ ಅರ್ಧ ಕೆಜಿ ಚಿನ್ನ ಕಳ್ಳತನ
ಅಲಿಪಿರಿ ಚೆಕ್‌ಪಾಯಿಂಟ್‌ನಲ್ಲಿ ಭದ್ರತಾ ಲೋಪ ಆಗಿರುವ ಕಾರಣದಿಂದಾಗಿ ಭಕ್ತರಿಗೆ ಮಾಂಸಾಹಾರವನ್ನು ಇಲ್ಲಿ ತರಲು ಸಾಧ್ಯವಾಗಿದೆ ಎಂದು ಟೀಕೆ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲೂ ಇದೂ ಚರ್ಚೆಗೆ ಕಾರಣವಾಗಿತ್ತು. ಪವಿತ್ರ ಸ್ಥಳದ ಪಾವಿತ್ರ್ಯವನ್ನು ಕಾಪಾಡಲು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಹಲವರು ಒತ್ತಾಯಿಸಿದ್ದಾರೆ.
ಮೊಣಕಾಲಿನಲ್ಲಿ ಮೆಟ್ಟಿಲು ಹತ್ತಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಕ್ರಿಕೆಟಿಗ ನಿತೀಶ್ ರೆಡ್ಡಿ
ಭಕ್ತರ ಸ್ಪಷ್ಟನೆ: ಎಗ್ ಬಿರಿಯಾನಿ ತಿಂದ ಭಕ್ತರನ್ನು ಪೊಲೀಸರು ಪ್ರಶ್ನಿಸಿದಾಗ ಅವರು, ‘ನಮಗೆ ಇಲ್ಲಿನ ನಿಯಮ ಅರಿವಿಲ್ಲ’ ಎಂದು ಹೇಳಿ ಕ್ಷಮೆ ಕೇಳಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಬಿಟ್ಟು ಕಳಿಸಿದ್ದಾರೆ.
