ಅಯೋಧ್ಯೆ ಹೊಸ ಮಸೀದಿ ಜಾಗವೂ ಈಗ ವಿವಾದದಲ್ಲಿ!
ಅಯೋಧ್ಯೆಯ ರಾಮಜನ್ಮಭೂಮಿ ಸ್ಥಳದಲ್ಲಿದ್ದ ಬಾಬ್ರಿ ಮಸೀದಿಯ ಬದಲಾಗಿ ನಗರದ ಹೊರಗೆ ನಿರ್ಮಿಸಲು ಉದ್ದೇಶಿಲಾಗಿರುವ ಹೊಸ ಮಸೀದಿ| ಅಯೋಧ್ಯೆ ಹೊಸ ಮಸೀದಿ ಜಾಗವೂ ಈಗ ವಿವಾದದಲ್ಲಿ!
ಲಖನೌ(ಫೆ,05): ಅಯೋಧ್ಯೆಯ ರಾಮಜನ್ಮಭೂಮಿ ಸ್ಥಳದಲ್ಲಿದ್ದ ಬಾಬ್ರಿ ಮಸೀದಿಯ ಬದಲಾಗಿ ನಗರದ ಹೊರಗೆ ನಿರ್ಮಿಸಲು ಉದ್ದೇಶಿಲಾಗಿರುವ ಹೊಸ ಮಸೀದಿ ಜಾಗವೂ ಇದೀಗ ಭೂ ವಿವಾದಕ್ಕೆ ಸಿಲುಕಿದೆ. ಈ ಭೂಮಿಗೆ ತಮಗೆ ಸೇರಿದ್ದು ಎಂದು ವಾದಿಸಿ ದೆಹಲಿ ಮೂಲದ ಇಬ್ಬರು ಸೋದರಿಯರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಫೆ.8ರಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ತಮ್ಮ ತಂದೆ ಗ್ಯಾನ್‌ಚಂದ್ 1947ರಲ್ಲಿ ದೇಶ ವಿಭಜನೆ ವೇಳೆ ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಿಂದ ಅಯೋಧ್ಯೆ ಬಂದಿದ್ದರು. ಈ ವೇಳೆ ಅವರಿಗೆ ಸರ್ಕಾರ 28 ಎಕರೆ ಭೂಮಿಯನ್ನು 5 ವರ್ಷಗಳಿಗೆಂದು ನೀಡಿತ್ತು. ಬಳಿಕವೂ ಅದರ ಉಸ್ತುವಾರಿ ನಮ್ಮ ಬಳಿಯೇ ಇತ್ತು. ಈಗಲೂ ಕಂದಾಯ ದಾಖಲೆಗಳು ಅವರ ಹೆಸರಲ್ಲೇ ಇವೆ. ಹೀಗಾಗಿ ಜಾಗ ನಮಗೆ ಸೇರಿದ್ದು ಎಂದು ರಾಣಿ ಕಪೂರ್ ಮತ್ತು ರಾಮರಾಣಿ ಎಂಬಿಬ್ಬರು ಸೋದರಿಯರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ರಾಮಮಂದಿರ ತೀರ್ಪಿನ ಬಳಿಕ, ಬಾಬ್ರಿ ಮಸೀದಿಗೆ ಪರ್ಯಾಯವಾಗಿ ಅಯೋಧ್ಯೆಯಿಂದ 15 ಕಿ.ಮೀ ದೂರದ ಧನ್ನೀಪುರ ಎಂಬಲ್ಲಿ ಮಸೀದಿ ನಿರ್ಮಿಸಲು ರಾಜ್ಯ ಸರ್ಕಾರ 5 ಎಕರೆ ಜಾಗ ನೀಡಿತ್ತು.