ನವದೆಹಲಿ (ಫೆ. 29): ಗಲಭೆಪೀಡಿತ ಈಶಾನ್ಯ ದಿಲ್ಲಿಯಲ್ಲಿ ಶುಕ್ರವಾರ ಪರಿಸ್ಥಿತಿ ಶಾಂತವಾಗಿದೆ. ಆದರೆ ಸೋಮವಾರದಿಂದ 3 ದಿನ ನಡೆದ ಗಲಭೆಯಲ್ಲಿ ಗಾಯಗೊಂಡ ನಾಲ್ವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 42 ಕ್ಕೇರಿದೆ.

ಈ ನಡುವೆ ಗಲಭೆ ನಡೆದ ಸ್ಥಳಗಳಲ್ಲಿ ನಿಷೇಧಾಜ್ಞೆಯನ್ನು ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಹಿಂಪಡೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ಅಂಗಡಿಗಳು ತೆರೆದವು. ಹೆಚ್ಚು ವಾಹನಗಳು ರಸ್ತೆಗೆ ಇಳಿದಿದ್ದು ಕಂಡುಬಂತು. ಆದರೆ ಹಿಂಸೆಯಲ್ಲಿ ಮನೆ-ಮಠ ಕಳೆದುಕೊಂಡವರು ತಮ್ಮ ಮನೆಯಲ್ಲಿನ ಅಳಿದುಳಿದ ವಸ್ತುಗಳನ್ನು ಆರಿಸುತ್ತಿರುವುದು ಈ ದಿನವೂ ಗೋಚರಿಸಿತು.

ದಿಲ್ಲಿ ಹಿಂಸೆ ತೋರಿಸಿ ಐಸಿಸ್‌ ಪ್ರಚೋದನೆ!

ಶುಕ್ರವಾರದ ನಮಾಜ್‌ ವೇಳೆ ಮಸೀದಿಗಳ ಲೌಡ್‌ ಸ್ಪೀಕರ್‌ನಲ್ಲಿ ಶಾಂತಿ ಕಾಯ್ದುಕೊಳ್ಳುವಂತೆ ಮೌಲ್ವಿಗಳು ಕೋರಿದರು. ಹಿಂಸಾಚಾರಕ್ಕೆ ಸಂಬಂಧಿಸಿದ 123 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಈವರೆಗೆ 630 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹೊಸ ಆಯುಕ್ತ:

ಈ ನಡುವೆ, ಗಲಭೆಯ ಸಂದರ್ಭದಲ್ಲೇ ಐಪಿಎಸ್‌ ಅಧಿಕಾರಿ ಎಸ್‌.ಎನ್‌. ಶ್ರೀವಾಸ್ತವ ಅವರನ್ನು ದಿಲ್ಲಿಯ ನೂತನ ಪೊಲೀಸ್‌ ಆಯುಕ್ತರನ್ನಾಗಿ ನೇಮಿಸಲಾಗಿದೆ. ಹಾಲಿ ಆಯುಕ್ತ ಅಮೂಲ್ಯ ಪಟ್ನಾಯಕ್‌ ಅವರು ಶನಿವಾರ ನಿವೃತ್ತಿ ಹೊಂದುತ್ತಿದ್ದಾರೆ. ಸಿಆರ್‌ಪಿಎಫ್‌ನಲ್ಲಿದ್ದ ಶ್ರೀವಾಸ್ತವ ಅವರನ್ನು ಸೋಮವಾರ ದಿಲ್ಲಿ ಪೊಲೀಸ್‌ ವಿಶೇಷ ಆಯುಕ್ತರನ್ನಾಗಿ ನೇಮಿಸಲಾಗಿತ್ತು.
 

ಸರ್ಜಿಕಲ್ ಹೀರೋ ಅಖಾಡಕ್ಕಿಳಿದ ಕೆಲವೇ ಗಂಟೆಗಳಲ್ಲಿ ದಂಗೆ ಸ್ಥಬ್ಧ! ಮಾಡಿದ ಮಾಸ್ಟರ್ ಪ್ಲಾನ್ ಏನು?

ಎನ್‌ಐಎಗೆ ತನಿಖೆ ಹಸ್ತಾಂತರಕ್ಕೆ ಅರ್ಜಿ:

ದಿಲ್ಲಿ ಗಲಭೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂದು ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಈ ಕಾರಣ, ಕೇಂದ್ರ ಸರ್ಕಾರ ಹಾಗೂ ದಿಲ್ಲಿ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಇದಲ್ಲದೆ, ಪ್ರಚೋದಕ ಹೇಳಿಕೆ ನೀಡಿದ ಆರೋಪ ಹೊರಿಸಿ ರಾಜಕಾರಣಿಗಳಾದ ಅಸಾದುದ್ದೀನ್‌ ಒವೈಸಿ, ಸಲ್ಮಾನ್‌ ಖುರ್ಷಿದ್‌ ಹಾಗೂ ವಾರಿಸ್‌ ಪಠಾಣ್‌ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಅಜಯ್‌ ಗೌತಮ್‌ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.