ನವದೆಹಲಿ(ಜ.10): ಜೆಎನ್‌ಯು ಕ್ಯಾಂಪಸ್‌ನಲ್ಲಿ ದಾಳಿ ನಡೆಸಿದ ಕಿರಾತಕರ ಫೋಟೋ ಬಿಡುಗಡೆ ಮಾಡಿರುವ ಪೊಲೀಸರು, ದಾಳಿಯಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ನಾಯಕರ ಕೈವಾಡವಿದೆ ಎಂದು ಹೇಳಿದ್ದಾರೆ.

ದಾಳಿಯ ದೃಶ್ಯಾವಳಿ ಹಾಗೂ ಫೋಟೋಗಳನ್ನು ಬಿಡುಗಡೆ ಮಾಡಿರುವ ಪೊಲೀಸರು, ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿ ಹೋರಾಟದ ವೇಳೆ ನಡೆದ ಹಿಂಸಾಚಾರದಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಸದಸ್ಯರ ಕೈವಾಡವಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಸದಸ್ಯರಾದ ಚುಂಚುನ್ ಕುಮಾರ್, ಪಂಕಜ್ ಮಿಶ್ರಾ, ಐಶೆ ಘೋಷ್, ವಾಸ್ಕರ್ ವಿಜಯ್, ಪ್ರಿಯಾ ರಂಜನ್, ಎಬಿವಿಪಿ ಸದಸ್ಯರಾದ ಯೋಗೇಂದ್ರ ಭಾರದ್ವಾಜ್, ಹಾಗ ವಿಕಾಸ್ ಪಟೇಲ್ ಅವರನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿ ಶಕ್ತಿಗೆ ಮಣಿದ ಜೆಎನ್‌ಯು: ಶುಲ್ಕ ಪ್ರಮಾಣ ಕಡಿತಕ್ಕೆ ಒಪ್ಪಿಗೆ!

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ದೆಹಲಿ ಅಪರಾಧ ವಿಭಾಗದ ಡಿಸಿಪಿ ಜಾಯ್ ಟಿರ್ಕೆ, ಹಿಂಸಾಚಾರದ ಎಲ್ಲ ದೃಶ್ಯಾವಳಿಗಳನ್ನು ಕುಲಂಕೂಷವಾಗಿ ಪರಿಶೀಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಜೆಎನ್‌ಯು ಮಹಿಳಾ ಹಾಸ್ಟೆಲ್‌ಗೆ ನುಗ್ಗಿ ಹಿಂಸಾಚಾರ ನಡೆಸಿದ ದಾಳಿಕೋರರ ಕುರಿತು ಮಾಹಿತಿ ಬಿಡುಗಡೆ ಮಾಡಿರುವ ಪೊಲೀಸರು, ಈ ಕುರಿತು ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಹೇಳಿದ್ದಾರೆ.