ನವದೆಹಲಿ(ನ.13): ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್’ಯು)ದ ವಿದ್ಯಾರ್ಥಿಗಳ ಪ್ರತಿಭಟನೆಗೆ ಕೊನೆಗೂ ಮಣಿದಿರುವ ಆಡಳಿತ ಮಂಡಳಿ, ಹಾಸ್ಟೇಲ್ ಶುಲ್ಕದ ಪ್ರಮಾಣವನ್ನು ಕಡಿಮೆ ಮಾಡಲು ನಿರ್ಧರಿಸಿದೆ.

ಹಾಸ್ಟೇಲ್ ಶುಲ್ಕ ಹೆಚ್ಚಳ ವಿರೋಧಿಸಿ ಕಳೆದ ಸೋಮವಾರದಿಂದ ವಿದ್ಯಾರ್ಥಿಗಳು ಬೃಹತ್​ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಕುಲಪತಿ ಎಂ ಜಗದೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶುಲ್ಕ ಹೆಚ್ಚಳ ಪ್ರಮಾಣವನ್ನು ಕಡಿಮೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

JNUನಲ್ಲಿ ಭುಗಿಲೆದ್ದ ಪ್ರತಿಭಟನೆ; ವಿದ್ಯಾರ್ಥಿಗಳು, ಪೊಲೀಸರ ನಡುವೆ ಘರ್ಷಣೆ
ಶುಲ್ಕ ಹೆಚ್ಚಳದಲ್ಲಿ ಶೇ.50ರಷ್ಟು ಕಡಿಮೆಗೊಳಿಸಲು ವಿವಿ ಮುಂದಾಗಿದ್ದು, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ ಹೆಚ್ಚುವರಿ ಸಹಾಯ ಮಾಡುವ ಭರವಸೆಯನ್ನೂ ನೀಡಿದೆ. 

ಆದರೆ ಆಡಳಿತ ಮಂಡಳಿ ತೆಗೆದುಕೊಂಡ ಕ್ರಮ ತೃಪ್ತಿ ಎಂದಿಲ್ಲ ಎಂದಿರುವ ವಿದ್ಯಾರ್ಥಿ ಸಂಘಟನೆಗಳು, ಇದು ದಾರಿ ತಪ್ಪಿಸುವ ಹುನ್ನಾರ ಎಂದು ಆರೋಪಿಸಿವೆ. 

ಜೆಎನ್​ಯು ಹಾಸ್ಟೆಲ್​ನಲ್ಲಿ ಡಬಲ್ ಸೀಟರ್ ರೂಮಿಗೆ ತಿಂಗಳಿಗೆ ಕೇವಲ 10 ರೂ. ಇದ್ದ ಶುಲ್ಕವನ್ನು 200 ರೂ.ಗೆ ಏರಿಕೆ ಮಾಡಲಾಗಿತ್ತು. ಸಿಂಗಲ್ ಸೀಟರ್ ರೂಮಿನ ಶುಲ್ಕವನ್ನು 20 ರೂ. ದಿಂದ 600 ರೂ.ಗೆ ಏರಿಸಲಾಗಿತ್ತು.

ಈ ನಿರ್ಧಾರವನ್ನು ಖಂಡಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದಲ್ಲದೇ, ಪೊಲೀಸರೊಂದಿಗೆ ಜಟಾಪಟಿಯೂ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.