ನವದೆಹಲಿ [ಮಾ.08]: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೇಶವ್ಯಾಪಿ ಹೋರಾಟಗಳು ನಡೆಯುತ್ತಿವೆಯಾದರೂ, ಇದೇ ವಿಷಯವನ್ನು ಮುಂದಿಟ್ಟುಕೊಂಡು ದೆಹಲಿಯಲ್ಲಿ ಉಗ್ರರು ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಸಿಎಎ ವಿರೋಧಿ ಹೋರಾಟಗಾರರನ್ನು ಪ್ರಚೋದಿಸುತ್ತಿದ್ದರು ಎನ್ನಲಾದ ಕಾಶ್ಮೀರಿ ದಂಪತಿಯನ್ನು ದಿಲ್ಲಿ ಪೊಲೀಸರು ಭಾನುವಾರ ಬಂಧಿಸಿದ್ದು, ವಿಚಾರಣೆ ವೇಳೆ ಈ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

"

ಇದರೊಂದಿಗೆ ಪೌರತ್ವ ಕಾಯ್ದೆ ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ವಿದೇಶಿ ಶಕ್ತಿಗಳು ಕೈಜೋಡಿಸಿರುವ ವಿಷಯ ಇದೀಗ ಖಚಿತವಾಗಿದೆ. ಜೊತೆಗೆ ಅಮಾಯಕರನ್ನು ಬಳಸಿಕೊಂಡು ಉಗ್ರ ಸಂಘಟನೆಗಳು ತಮ್ಮ ದುಷ್ಕೃತ್ಯಕ್ಕೆ ಯೋಜನೆ ರೂಪಿಸಿರುವುದು ಖಚಿತಪಟ್ಟಿದೆ.

ಬಂಧನ:  ಖಚಿತ ಮಾಹಿತಿ ಮೇರೆಗೆ ಭಾನುವಾರ ದೆಹಲಿಯ ಜಾಮೀಯಾ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು, ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರ ಮೂಲದ ಜಹಾನ್‌ಜೇಬ್‌ ಸಮಿ ಮತ್ತು ಹೀನಾ ಬಷೀರ್‌ ಬೇಗ್‌ ಎಂಬ ದಂಪತಿಯನ್ನು ಬಂಧಿಸಿದ್ದಾರೆ. ಬಂಧಿತರು ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಜತೆ ನಂಟು ಹೊಂದಿದ್ದರು. ಸಿಎಎ ಹೋರಾಟಗಾರರ ‘ಬ್ರೇನ್‌ವಾಷ್‌’ ಮಾಡಿ ಅವರನ್ನು ಐಸಿಸ್‌ ಬುಟ್ಟಿಗೆ ಹಾಕಿಕೊಂಡು ದಿಲ್ಲಿಯಲ್ಲಿ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದರು ಎಂಬ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

‘ಇವರು ಪೌರತ್ವ ತಿದ್ದುಪಡಿ ವಿರೋಧಿ ಹೋರಾಟವನ್ನು ಉತ್ತೇಜಿಸುತ್ತಿದ್ದರು’ ಎಂದು ಬಂಧನದ ಮಾಹಿತಿ ನೀಡಿದ ದಿಲ್ಲಿ ಡಿಸಿಪಿ (ವಿಶೇಷ ಘಟಕ) ಪ್ರಮೋದ್‌ ಸಿಂಗ್‌ ಕುಶ್ವಾಹಾ ತಿಳಿಸಿದ್ದಾರೆ. ಬಂಧಿತರು ಆಷ್ಘಾನಿಸ್ತಾನದಲ್ಲಿರುವ ಐಸಿಸ್‌ನ ಖೊರಾಸಾನ್‌ ಪ್ರಾಂತ್ಯದ ಘಟಕದೊಂದಿಗೆ ನಂಟು ಹೊಂದಿದ್ದರು ಎಂದು ತಿಳಿದುಬಂದಿದೆ.

ಸಂಚು ಏನು?:

ಪೌರತ್ವ ತಿದ್ದುಪಡಿ ಕಾಯ್ದೆ ಹೋರಾಟಗಾರರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದ ಸಮಿ ಹಾಗೂ ಹೀನಾ, ಈ ಹೋರಾಟಗಾರರನ್ನೇ ಬುಟ್ಟಿಗೆ ಹಾಕಿಕೊಳ್ಳುವ ಸಂಚು ರೂಪಿಸಿದ್ದರು. ಯುವ ಮುಸ್ಲಿಂ ಪ್ರತಿಭಟನಾಕಾರರನ್ನು ಉತ್ತೇಜಿಸಿ ಅವರನ್ನು ಐಸಿಸ್‌ ಸೇರ್ಪಡೆಯಾಗುವಂತೆ ಮಾಡುವುದು ಹಾಗೂ ದಿಲ್ಲಿಯಲ್ಲಿ ಆತ್ಮಾಹುತಿ ದಾಳಿ ನಡೆಸುವುದು ಇವರ ಸಂಚಾಗಿತ್ತು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಸಿಎಎ ಗಲಭೆಕೋರರ ಮಾನ ಹರಾಜು!..

ಆಷ್ಘಾನಿಸ್ತಾನದಲ್ಲಿನ ಐಸಿಸ್‌ ಖೊರಾಸಾನ್‌ ಘಟಕದೊಂದಿಗೆ ಇವರು ನಂಟು ಹೊಂದಿದ್ದರು. ಪಾಕಿಸ್ತಾನಿ ಐಸಿಸ್‌ ಉಗ್ರ ಮುಖಂಡ ಹುಜೈಫಾ ಅಲ್‌ ಬಾಕಿಸ್ತಾನಿಗೂ ಇವರಿಗೂ ಸಂಪರ್ಕ ಇತ್ತು. ಸಿಎಎ ವಿರೋಧಿ ಹೋರಾಟದ ಪ್ರಮುಖ ಕೇಂದ್ರವಾಗಿರುವ ದಿಲ್ಲಿಯ ಜಾಮಿಯಾ ಮಿಲಿಯಾ ವಿವಿ ಸನಿಹದ ಜಾಮಿಯಾ ನಗರದಲ್ಲಿ ದಂಪತಿ ವಾಸಿಸುತ್ತಿದ್ದರು. ಇಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ‘ಇಂಡಿಯನ್‌ ಮುಸ್ಲಿಮ್ಸ್‌ ಯುನೈಟ್‌’ ಎಂಬ ಸಾಮಾಜಿಕ ಮಾಧ್ಯಮ ವೇದಿಕೆ ರಚಿಸಿಕೊಂಡಿದ್ದರು. ಇದರಲ್ಲಿ ಸಿಎಎ ವಿರೋಧಿ ಹೋರಾಟಕ್ಕೆ ಬೆಂಬಲ ಕ್ರೋಡೀಕರಿಸುತ್ತಿದ್ದರು ಎಂದು ಅವರು ವಿವರಿಸಿದ್ದಾರೆ.

ಬಂಧಿತರಿಂದ ಕೆಲವು ಸೂಕ್ಷ್ಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಐಸಿಸ್‌ನ ನಿಯತಕಾಲಿಕವೊಂದರಲ್ಲಿ ಸಿಎಎ ಪ್ರತಿಭಟನಾಕಾರರನ್ನು ಹೊಡೆಯುತ್ತಿರುವ ಚಿತ್ರ ಪ್ರಕಟವಾದುದರ ಹಿಂದೆ ತನ್ನ ಪಾತ್ರವಿದೆ ಎಂದು ಸಮಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೆಲವು ಮಾಧ್ಯಮ ವರದಿಗಳು ಹೇಳಿವೆ.