ಲಖನೌ[ಮಾ.07]: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ನಡೆಸಿದ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಗಲಭೆಕೋರರ ಆಸ್ತಿಗಳನ್ನು ಜಪ್ತಿ ಮಾಡುತ್ತಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ಪುಂಡರ ಮಾನ ಹರಾಜು ಹಾಕುವ ಕಾರ್ಯಕ್ಕೆ ಮುಂದಾಗಿದೆ.

ಯೋಗಿ ಆದಿತ್ಯನಾಥ್‌ ಅವರ ಸೂಚನೆಯ ಮೇರೆಗೆ ಲಖನೌದ ಪ್ರಮುಖ ನಗರಗಳಲ್ಲಿ ಸಿಎಎ ಗಲಭೆಕೋರರ ಭಾವಚಿತ್ರ, ಹೆಸರು, ವಿಳಾಸವನ್ನು ಬರೆದ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಒಂದು ವೇಳೆ ದಂಡ ಪಾವತಿಸಲು ವಿಫಲವಾದರೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡಿದ 50ಕ್ಕೂ ಹೆಚ್ಚು ಗಲಭೆಕೋರರನ್ನು ಗುರುತಿಸಲಾಗಿದೆ. ಸಿಎಎ ವಿರೋಧಿ ಗಲಭೆಯ ವೇಳೆ ಲಖನೌದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ 1.55 ಕೋಟಿ ರು. ಹಾನಿ ಸಂಭವಿಸಿರುವುದಾಗಿ ಅಂದಾಜಿಸಲಾಗಿದ್ದು, ನಷ್ಟವನ್ನು ಭರಿಸುವಂತೆ ಗಲಭೆಕೋರರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.