ದೆಹಲಿಯಲ್ಲಿ ಉನ್ನತ ಅಧಿಕಾರಿಗಳ ನೇಮಕ ಹಾಗೂ ವರ್ಗಾವಣೆ ಮತ್ತು ಕೆಲವು ಸೇವೆಗಳ ನಿಯಂತ್ರಣವನ್ನು ತನ್ನ ಬಳಿಯೇ ಉಳಿಸಿಕೊಳ್ಳುವ ಕೇಂದ್ರ ಸರ್ಕಾರದ ಯತ್ನ ಫಲ ನೀಡಿದ್ದು, ಈ ಕುರಿತ ಸುಗ್ರೀವಾಜ್ಞೆಯ ಮಸೂದೆಗೆ ಸೋಮವಾರ ರಾಜ್ಯಸಭೆ ಅಂಗೀಕಾರ ನೀಡಿದೆ.
ನವದೆಹಲಿ: ದೆಹಲಿಯಲ್ಲಿ ಉನ್ನತ ಅಧಿಕಾರಿಗಳ ನೇಮಕ ಹಾಗೂ ವರ್ಗಾವಣೆ ಮತ್ತು ಕೆಲವು ಸೇವೆಗಳ ನಿಯಂತ್ರಣವನ್ನು ತನ್ನ ಬಳಿಯೇ ಉಳಿಸಿಕೊಳ್ಳುವ ಕೇಂದ್ರ ಸರ್ಕಾರದ ಯತ್ನ ಫಲ ನೀಡಿದ್ದು, ಈ ಕುರಿತ ಸುಗ್ರೀವಾಜ್ಞೆಯ ಮಸೂದೆಗೆ ಸೋಮವರ ರಾಜ್ಯಸಭೆ ಅಂಗೀಕಾರ ನೀಡಿದೆ. ಮಸೂದೆ ಪರ 131 ಮತ ಬಂದರೆ, ಮಸೂದೆ ವಿರುದ್ಧ ತೊಡತಟ್ಟಿದ್ದ ವಿಪಕ್ಷ ಇಂಡಿಯಾ ಕೂಟಕ್ಕೆ ಕೇವಲ 102 ಮತ ಬಂದವು. ಇತ್ತೀಚೆಗೆ ಮಸೂದೆಗೆ ಲೋಕಸಭೆ ಕೂಡ ಅಂಗೀಕಾರ ನೀಡಿತ್ತು. ಹೀಗಾಗಿ ಸುಗ್ರೀವಾಜ್ಞೆಗೆ ಈಗ ಶಾಶ್ವತವಾಗಿ ಕಾನೂನು ಸ್ವರೂಪ ಸಿಕ್ಕಿದೆ.
ಏನಿದು ಮಸೂದೆ? ಏಕೆ?
ದಿಲ್ಲಿಯಲ್ಲಿ ಅಧಿಕಾರಿಗಳ ನಿಯೋಜನೆ, ವರ್ಗಾವಣೆ ಅಧಿಕಾರ ದೆಹಲಿಯ ಚುನಾಯಿತ ಸರ್ಕಾರದ ಬಳಿ ಇರಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ತನ್ಮೂಲಕ ಕೇಜ್ರಿವಾಲ್ ಸರ್ಕಾರಕ್ಕೆ ಅಧಿಕಾರ ದೊರೆತಿತ್ತು. ಆದರೆ ಸುಗ್ರೀವಾಜ್ಞೆ ಮೂಲಕ ಕೇಂದ್ರ ಸರ್ಕಾರ ಅಧಿಕಾರವನ್ನು ತನ್ನ ಬಳಿಯೇ ಉಳಿಸಿಕೊಂಡಿತ್ತು. ಅಂದರೆ ವರ್ಗಾವಣೆ/ನಿಯೋಜನೆ ಬಗ್ಗೆ ಇನ್ನು ಕೇಂದ್ರ ಸರ್ಕಾರದ ಅಧೀನದ ಉಪ ರಾಜ್ಯಪಾಲರು ನಿರ್ಣಯ ಕೈಗೊಳ್ಳುತ್ತಾರೆ. ಸುಗ್ರೀವಾಜ್ಞೆಗೆ 6 ತಿಂಗಳ ವಾಯಿದೆ ಇರುವ ಕಾರಣ ಈಗ ಮಸೂದೆ ಅಂಗೀಕರಿಸಿದೆ. ತನ್ಮೂಲಕ ಸುಗ್ರೀವಾಜ್ಞೆ (Ordinance)ಅಂಶ ಕಾಯ್ದೆ ರೂಪ ಪಡೆದಿದೆ.
ದೆಹಲಿ ನಿಯಂತ್ರಣ ಮಸೂದೆ: ಕೇಂದ್ರಕ್ಕೆ ಜಗನ್ ಪಕ್ಷದ ಬೆಂಬಲ
ಇದಲ್ಲದೆ, ರಾಜ್ಯಸಭೆಯಲ್ಲಿ ಮಸೂದೆಗೆ ಜಯ ಆಗಿರುವುದು ಕೇಂದ್ರ ಸರ್ಕಾರದ ಪಾಲಿಗೆ ಮಹತ್ವದ ಯಶಸ್ಸಾಗಿದ್ದರೆ, ಕೇಂದ್ರದ ವಿರುದ್ಧ ತೊಡೆ ತಟ್ಟಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ‘ಇಂಡಿಯಾ’ ವಿಪಕ್ಷ ಕೂಟಕ್ಕೆ ಹಿನ್ನಡೆ ಆಗಿದೆ. ಏಕೆಂದರೆ ಕೇಜ್ರಿವಾಲ್ (Arvind Kejriwal) ಅವರು ದೇಶಾದ್ಯಂತ ಸುತ್ತಾಡಿ ವಿಪಕ್ಷ ಸಂಸದರು ಮಸೂದೆ ವಿರುದ್ಧ ಮತ ಹಾಕಲು ಕೋರಿದ್ದರು. ಕಾಂಗ್ರೆಸ್ ಆದಿಯಾಗಿ ಅನೇಕ ವಿಪಕ್ಷಗಳು ಕೇಜ್ರಿವಾಲ್‌ಗೆ ಬೆಂಬಲ ಘೋಷಿಸಿ ಮಸೂದೆ ವಿರುದ್ಧ ಮತಕ್ಕೆ ಒಪ್ಪಿದ್ದರು. ಆದರೆ ಕೊನೆಗೆ ಬಿಜೆಡಿ ಹಾಗೂ ವೈಎಸ್ಸಾರ್ ಕಾಂಗ್ರೆಸ್‌ನ ತಲಾ 9 ಸದಸ್ಯರು ಮೋದಿ ಸರ್ಕಾರದ ಬೆನ್ನಿಗೆ ನಿಲ್ಲುವ ಮೂಲಕ ರಾಜ್ಯಸಭೆಯಲ್ಲಿ ಬಹುಮತದ ಕೊರತೆ ಎದುರಿಸುತ್ತಿದ್ದ ಎನ್‌ಡಿಎಗೆ ಸಾಥ್ ನೀಡಿದ್ದಾರೆ.
ದಿಲ್ಲಿಯಲ್ಲಿ ಉನ್ನತ ಅಧಿಕಾರಿಗಳ ನೇಮಕದ ಅಧಿಕಾರವನ್ನು ಇತ್ತೀಚಿನ ಸುಪ್ರೀಂಕೋರ್ಟ್(Supreme Court) ಆದೇಶವು ದಿಲ್ಲಿಯ ಆಪ್ ಸರ್ಕಾರಕ್ಕೆ ನೀಡಿತ್ತು. ಆದರೆ ಅಧಿಕಾರವನ್ನು ತನ್ನ ಬಳಿ ಉಳಿಸಿಕೊಳ್ಳುವ ಉದ್ದೇಶದಿಂದ ಮೊದಲು ಸುಗ್ರೀವಾಜ್ಞೆ ತಂದಿದ್ದ ಮೋದಿ ಸರ್ಕಾರ (Modi Governement), ಅದಕ್ಕೆ ಶಾಶ್ವತ ಕಾನೂನು ರೂಪ ನೀಡಲು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರ (ತಿದ್ದುಪಡಿ) ಮಸೂದೆ-2023 ಮಂಡಿಸಿತ್ತು.
ಸಹಕಾರ ಸುಧಾರಣೆ ಮಸೂದೆ ಅಂಗೀಕಾರ: ದೆಹಲಿ ಸುಗ್ರೀವಾಜ್ಞೆ ಮಸೂದೆಗೆ ಸಂಪುಟ ಅನುಮೋದನೆ
ಕಾಂಗ್ರೆಸ್, ಆಪ್ ಕಿಡಿ:
ರಾಜ್ಯಸಭೆಯಲ್ಲಿ ಚರ್ಚೆ ವೇಳೆ ಮಾತನಾಡಿದ ಕಾಂಗ್ರೆಸ್‌ನ ಅಭಿಷೇಕ್ ಸಿಂಘ್ವಿ ಹಾಗೂ ಆಪ್‌ನ ರಾಘವ ಛಡ್ಡಾ (Raghav chadda), ಈ ಮಸೂದೆ ಸಂಪೂರ್ಣ ಅಸಾಂವಿಧಾನಿಕ. ದಿಲ್ಲಿ ಜನರ ಮೇಲಿನ ದಾಳಿ ಇದಾಗಿದ್ದು, ಚುನಾಯಿತ ದಿಲ್ಲಿ ಸರ್ಕಾರದ ಹಕ್ಕು ಕಸಿಯುತ್ತದೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದು ಕಿಡಿಕಾರಿದರು. ಆದರೆ ಇದನ್ನು ತಿರಸ್ಕರಿಸಿದ ಬಿಜೆಪಿ ಸಂಸದ ಸುಧಾಂಶು ತ್ರಿವೇದಿ (Sudhashu trivedi), ದಿಲ್ಲಿ ರಾಷ್ಟ್ರ ರಾಜಧಾನಿ ಆಗಿದ್ದು, ಆಪ್ ಬೇಕಾಬಿಟ್ಟಿ ವರ್ಗಾವಣೆ ಮಾಡುತಿತ್ತು. ಹೀಗಾಗಿ ಈ ಮಸೂದೆ ತರಬೇಕಾಯಿತು ಎಂದರು.
ಅನುಮತಿ ಇಲ್ಲದೇ ಸಹಿ: 5 ಸಂಸದರ ಆರೋಪ
ತಮ್ಮ ಅನುಮತಿ ಇಲ್ಲದೇ ತಮ್ಮ ಹೆಸರನ್ನು ಮಸೂದೆ ತಿದ್ದುಪಡಿ ನಿಲುವಳಿಯಲ್ಲಿ ಹೆಸರು ಸೇರಿಸಲಾಗಿದೆ ಎಂದು 5 ಸದಸ್ಯರು ವಿಪಕ್ಷಗಳ ಕೂಟದ ವಿರುದ್ಧ ಆರೋಪಿಸಿದ ಪ್ರಸಂಗವೂ ನಡೆಯಿತು.
ಕೈಕೊಟ್ಟ ಮತಯಂತ್ರ!
ರಾಜ್ಯಸಭೆಯಲ್ಲಿ ಸ್ವಯಂಚಾಲಿತವಾಗಿ ಮತದಾನಕ್ಕೆ ಅವಕಾಶ ನೀಡುವ ಮತಯಂತ್ರ ಕೈಕೊಟ್ಟಿತು. ಹೀಗಾಗಿ ಚೀಟಿಯಲ್ಲಿ ಬರೆದು ಸದಸ್ಯರು ಮತ ಚಲಾಯಿಸಿದರು.
